ದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದು, ಈ ವೇಳೆ ದೇಶಾದ್ಯಂತ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರ ಮೇಲಿನ ಹಿಂಸಾಚಾರದ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಮ್ಮ ದೇಶದ ಉದ್ದಗಲಕ್ಕೂ ಹರಡಿಕೊಂಡಿರುವ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರು ವಿವಿಧ ರಾಜ್ಯಗಳಲ್ಲಿ ( ವಿಶೇಷವಾಗಿ ಬಿಜೆಪಿ ಆಳ್ವಿಕೆಯ ರಾಜ್ಯಗಳು) ತುಂಬಾ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂಬುದನ್ನು ನಿಮ್ಮ ಗಮನಕ್ಕೆ ತರಲು ನಾನು ಭಾರವಾದ ಹೃದಯದಿಂದ ಒತ್ತಾಯಿಸುತ್ತಿದ್ದೇನೆ. ಆ ವಲಸೆ ಕಾರ್ಮಿಕರು ಜೀವನೋಪಾಯವನ್ನು ಕಂಡುಕೊಳ್ಳಲು ತಮ್ಮ ಬೆವರು ಮತ್ತು ಕೌಶಲ್ಯವನ್ನು ಹೂಡಿಕೆ ಮಾಡುತ್ತಿದ್ದಾರೆ. ಅವರನ್ನು ಹಿಂಸೆ, ದ್ವೇಷ, ನಿಂದನೆ ಮತ್ತು ಹೊಡೆದು ಸಾಯಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಮ್ಮ ಜನರು ಬಂಗಾಳಿ ಭಾಷೆಯಲ್ಲಿ ಮಾತನಾಡುತ್ತಾರೆ ಎಂಬ ಏಕೈಕ ಕಾರಣಕ್ಕಾಗಿ ಅಲ್ಲಿನ ಸರ್ಕಾರಗಳು ಅವರನ್ನು ನೆರೆಯ ಬಾಂಗ್ಲಾದೇಶಕ್ಕೆ ಸೇರಿದವರು ಎಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತದೆ ಮತ್ತು ಒಳನುಸುಳುಕೋರರು ಎಂದು ಪರಿಗಣಿಸುತ್ತದೆ ಎಂದು ಬರೆದಿದ್ದಾರೆ.
2024 ರ ಲೋಕಸಭಾ ಚುನಾವಣೆಯಲ್ಲಿ ಅಧೀರ್ ರಂಜನ್ ಚೌಧರಿ ತಮ್ಮ ಭದ್ರಕೋಟೆಯಾದ ಬಹರಂಪುರದಿಂದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಪಠಾಣ್ ವಿರುದ್ಧ ಸೋತಿದ್ದಾರೆ, ಅದಾದ ಬಳಿಕ ಅವರಿಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡಿಲ್ಲ. ಪ್ರಧಾನಿ ಮೋದಿ ಜೊತೆಗಿನ ಚೌಧರಿ ಭೇಟಿ ರಾಜಕೀಯ ವಲಯಗಳಲ್ಲಿ ಚರ್ಚೆಯ ವಿಷಯವಾಗಿದೆ.
ಬಿಜೆಪಿಯ ರಾಜ್ಯಸಭಾ ಸಂಸದ ಸಮಿಕ್ ಭಟ್ಟಾಚಾರ್ಯ ಕೂಡ ಚೌಧರಿಯನ್ನು ಶ್ಲಾಘಿಸಿದ್ದು, ತಪ್ಪು ಪಕ್ಷದಲ್ಲಿ ಆಡುವ ಸರಿಯಾದ ಆಟಗಾರ ಎಂದಿದ್ದಾರೆ. ಅಧೀರ್ ರಂಜನ್ ಚೌಧರಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಕಟು ಟೀಕಾಕಾರರಾಗಿದ್ದು, ಈ ಹಿಂದೆ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾಗಲೂ ಈ ಟೀಕೆ ನಿಂತಿರಲಿಲ್ಲ(ಏಜೆನ್ಸೀಸ್).