Digvijaya Singh > ದಿಗ್ವಿಜಯ್ ಸಿಂಗ್‌ಗೆ ಸೀಟು ಬಿಡಲು ಹೇಳಿದ ಜಿತು ಪಟವಾರಿ
ಭೋಪಾಲ್: ಮಧ್ಯಪ್ರದೇಶದ ಕಾಂಗ್ರೆಸ್ ಒಳಜಗಳ ಮತ್ತೊಮ್ಮೆ ಬೀದಿಗೆ ಬಂದಿದ್ದು, ರಾಜ್ಯಸಭಾ ಚುನಾವಣೆಗೆ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡ ಬೆನ್ನಲ್ಲೇ, ಕಾಂಗ್ರೆಸ್ ಪಕ್ಷದೊಳಗೆ ತೀವ್ರ ಅಸಮಾಧಾನದ ಹೊಗೆಯಾಡುತ್ತಿರುವುದು ಈಗ ಬಹಿರಂಗವಾಗಿದೆ. ಜೂನ್ 9 ರಂದು ಕಾನೂನು ಹೋರಾಟದಲ್ಲಿ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್‌ಗೆ, ಈಗ ನಾಯಕರ ನಡುವಿನ ಶೀತಲ ಸಮರ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿತು ಪಟವಾರಿ ಮತ್ತು ರಾಜ್ಯ ಉಸ್ತುವಾರಿ ಹರೀಶ್ ಚೌಧರಿ ಅವರ ನಡುವಿನ ಅಸಮಾಧಾನವನ್ನು ಎತ್ತಿ ತೋರಿಸಿದೆ.
ವಿಡಿಯೋದಲ್ಲಿ ಏನಿದೆ..?
ಪತ್ರಿಕಾಗೋಷ್ಠಿಯ ವೇಳೆ ಜಿತು ಪಟವಾರಿ ಅವರು ದಿಗ್ವಿಜಯ್ ಸಿಂಗ್ ಅವರಿಗೆ ತಮ್ಮ ಆಸನದಿಂದ ಪಕ್ಕಕ್ಕೆ ಸರಿಯುವಂತೆ ಕೇಳಿಕೊಳ್ಳುತ್ತಾರೆ. ತಕ್ಷಣವೇ ದಿಗ್ವಿಜಯ್ ಸಿಂಗ್ ಎದ್ದು ಪಕ್ಕದ ಕುರ್ಚಿಗೆ ಹೋಗಿ ಕುಳಿತುಕೊಳ್ಳುತ್ತಾರೆ. ಈ ವೇಳೆ ಪಟವಾರಿ ಅವರು ದಯವಿಟ್ಟು ಇಲ್ಲೇ ಇರಿ ಸರ್ ಎಂದು ಹೇಳಿದರೂ, ಅಷ್ಟರಲ್ಲಾಗಲೇ ದಿಗ್ವಿಜಯ್ ಸಿಂಗ್ ದೂರ ಸರಿದಿರುತ್ತಾರೆ. ಆ ನಂತರ ಹರೀಶ್ ಚೌಧರಿ ಬಂದು ದಿಗ್ವಿಜಯ್ ಸಿಂಗ್ ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳುತ್ತಾರೆ, ಅವರ ಪಕ್ಕದಲ್ಲಿ ಮೀನಾಕ್ಷಿ ನಟರಾಜನ್ ಕೂರುತ್ತಾರೆ.
ಕಾಂಗ್ರೆಸ್‌ಗೆ ಆತ್ಮಾವಲೋಕನದ ಅಗತ್ಯವಿದೆ: ಬಿಜೆಪಿ ವ್ಯಂಗ್ಯ
ಈ ವಿಡಿಯೋವನ್ನು ಕೈಗೆತ್ತಿಕೊಂಡಿರುವ ಬಿಜೆಪಿ, ಇದನ್ನು ಕಾಂಗ್ರೆಸ್ ವಿರುದ್ಧ ಪ್ರಬಲ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಅಧ್ಯಕ್ಷ ಹೇಮಂತ್ ಖಾಂಡೇಲ್ವಾಲ್, ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರಿಗೆ ಈ ರೀತಿ ಅವಮಾನ ಮಾಡಬಾರದು. ಪಕ್ಷದೊಳಗೆ ಭಿನ್ನಾಭಿಪ್ರಾಯಗಳು ಇರುವುದು ಸಹಜ, ಆದರೆ ಹಿರಿಯ ನಾಯಕರನ್ನು ಹೀಗೆ ನಡೆಸಿಕೊಳ್ಳುವುದು ಸರಿಯಲ್ಲ. ಪರಸ್ಪರ ಅವಮಾನ ಮಾಡಿಕೊಳ್ಳುವುದು ಮತ್ತು ಒಬ್ಬರ ಮೇಲೊಬ್ಬರು ಗೂಬೆ ಕೂರಿಸುವುದು ಪಕ್ಷದ ಅವನತಿಗೆ ಕಾರಣವಾಗುತ್ತದೆ. ಕಾಂಗ್ರೆಸ್ ಈಗ ತಾನು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಟಾಂಗ್ ನೀಡಿದ್ದಾರೆ.
ಜಿತು ಪಟವಾರಿ ನೀಡಿದ ಸ್ಪಷ್ಟನೆ ಏನು..?
ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ಜಿತು ಪಟವಾರಿ, ನಾನು ದಿಗ್ವಿಜಯ್ ಸಿಂಗ್ ಅವರನ್ನು ಬೇಕೆಂತಲೇ ಜಾಗ ಬಿಟ್ಟು ಏಳಲು ಹೇಳಿಲ್ಲ. ಅವರು ನಮ್ಮ ಹಿರಿಯ ನಾಯಕರು ಮತ್ತು ಮಾರ್ಗದರ್ಶಕರು. ಮೀನಾಕ್ಷಿ ನಟರಾಜನ್ ಅವರ ಪಕ್ಕದಲ್ಲಿ ಹರೀಶ್ ಚೌಧರಿ ಅವರು ಕುಳಿತುಕೊಳ್ಳಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಆಸನ ಹೊಂದಾಣಿಕೆ ಮಾಡಲು ಮಾತ್ರ ಕೇಳಲಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.
ಮತ್ತೊಂದು ವಿಡಿಯೋ ವಿವಾದ!
ಇದೇ ಪತ್ರಿಕಾಗೋಷ್ಠಿಯ ಇನ್ನೂ ಎರಡು ವಿಡಿಯೋಗಳು ಈಗ ಭಾರಿ ಚರ್ಚೆಗೆ ಗ್ರಾಸವಾಗಿವೆ. ಒಂದು ವಿಡಿಯೋದಲ್ಲಿ ದಿಗ್ವಿಜಯ್ ಸಿಂಗ್ ಅವರು ಜೆ.ಪಿ. ಧನೋಪಿಯಾ ಅವರನ್ನು ಕರೆಯಲು ಸನ್ಹೆ ಮಾಡುತ್ತಿದ್ದರೆ, ಹರೀಶ್ ಚೌಧರಿ ಅವರು ಅವರನ್ನು ಶಾಂತರಾಗಿರುವಂತೆ ಸನ್ನೆ ಮಾಡುತ್ತಾರೆ. ಮರುಕ್ಷಣವೇ ದಿಗ್ವಿಜಯ್ ಸಿಂಗ್ ಅವರು ಚೌಧರಿ ಎದುರು ಕೈಮುಗಿಯುವುದು ಕಾಣಿಸುತ್ತದೆ. ಮತ್ತೊಂದು ವಿಡಿಯೋದಲ್ಲಿ, ಜಿತು ಪಟವಾರಿ ಅವರು ಮೈಕ್‌ನಲ್ಲಿ ಮಾತನಾಡುವಂತೆ ದಿಗ್ವಿಜಯ್ ಸಿಂಗ್ ಅವರಿಗೆ ಕೇಳಿಕೊಂಡಾಗ, ಮಾಜಿ ಸಿಎಂ ಮಾತನಾಡಲು ನಿರಾಕರಿಸುತ್ತಾರೆ.
ಸಿಂಗ್ ಅವರನ್ನು ಮೂಲೆಗುಂಪು ಮಾಡಲು ಸಾಧ್ಯವಿಲ್ಲ: ಶರ್ಮಾ
ಈ ಮಧ್ಯೆ, ದಿಗ್ವಿಜಯ್ ಸಿಂಗ್ ಅವರ ಪರವಾಗಿ ಬ್ಯಾಟ್ ಬೀಸಿರುವ ಮಾಜಿ ಸಚಿವ ಪಿಸಿ ಶರ್ಮಾ, ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ದಿಗ್ವಿಜಯ್ ಸಿಂಗ್ ಅವರನ್ನು ಯಾರೂ ಮೂಲೆಗುಂಪು ಮಾಡಲು ಸಾಧ್ಯವಿಲ್ಲ. ಕಮಲ್ ನಾಥ್ ಮತ್ತು ದಿಗ್ವಿಜಯ್ ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ಅತ್ಯಗತ್ಯವಾದ ನಾಯಕರು. ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ಕಾರ್ಯಕರ್ತರು ಸಹಜವಾಗಿಯೇ ಬೇಸರಗೊಂಡಿದ್ದಾರೆ. ದಿಗ್ವಿಜಯ್ ಸಿಂಗ್ ಅವರು ಯಾವಾಗಲೂ ಯೋಚಿಸಿಯೇ ಮಾತನಾಡುತ್ತಾರೆ. ಮುಂದಿನ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ(ಏಜೆನ್ಸೀಸ್).