Congress Strategy | ಇಂಡಿಯಾ ಕೂಟಕ್ಕೆ ಜೀವತುಂಬಲು 'ಕೈ' ಕಸರತ್ತು
ನವದೆಹಲಿ: ಜುಲೈ 20 ರಿಂದ ಪ್ರಾರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ 10 ಜನ್‌ಪಥ್ ನಿವಾಸದಲ್ಲಿ ನಡೆದ ಒಂದೂವರೆ ಗಂಟೆಗಳ ಸುದೀರ್ಘ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸೇರಿದಂತೆ ಹಲವು ಪ್ರಮುಖ ನಾಯಕರು ಪಾಲ್ಗೊಂಡು, ಅಧಿವೇಶನದಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಕುರಿತು ಗಂಭೀರ ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.
ಈ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ತರಲು ಉದ್ದೇಶಿಸಿರುವ ಪ್ರಮುಖ ಮಸೂದೆಗಳನ್ನು ಸಂಪೂರ್ಣವಾಗಿ ವಿರೋಧಿಸಲು ಕಾಂಗ್ರೆಸ್ ನಿರ್ಧರಿಸಿದೆ. ಮುಖ್ಯವಾಗಿ ಕ್ಷೇತ್ರ ವಿಂಗಡಣೆ ಮಸೂದೆಯನ್ನು ತೀವ್ರವಾಗಿ ವಿರೋಧಿಸುವುದರ ಜೊತೆಗೆ, ಈ ವಿಷಯದಲ್ಲಿ ಸಮಾನ ಮನಸ್ಕ ವಿರೋಧ ಪಕ್ಷಗಳನ್ನು ಒಗ್ಗೂಡಿಸಿ ಒಗ್ಗಟ್ಟಿನ ಹೋರಾಟ ರೂಪಿಸಲು ಸಜ್ಜಾಗಿದೆ.
ಮಸೂದೆಗಳ ವಿರೋಧಕ್ಕೆ ಕಾಂಗ್ರೆಸ್ ನಿರ್ಧಾರ!...
ಇದರೊಂದಿಗೆ 'ಒಂದು ದೇಶ, ಒಂದು ಚುನಾವಣೆ' ಪ್ರಸ್ತಾವನೆ, ಪ್ರಧಾನಿ ಹಾಗೂ ಮುಖ್ಯಮಂತ್ರಿಗಳ ಜೈಲುವಾಸ ಮತ್ತು ಅಧಿಕಾರಾವಧಿಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ, ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ, ನ್ಯಾಯಾಧೀಶರ ವಜಾ ಮಸೂದೆ ಹಾಗೂ ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆಗಳನ್ನು ಸಾರಾಸಗಟಾಗಿ ವಿರೋಧಿಸಲು ನಿರ್ಣಯಿಸಲಾಗಿದೆ. ಅಲ್ಲದೆ, ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಗೆ ಆಧಾರವಾಗಿರುವ 2013 ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಗೆ ತರಲು ಉದ್ದೇಶಿಸಿರುವ ತಿದ್ದುಪಡಿಗಳಿಗೂ ಪಕ್ಷವು ತನ್ನ ತೀವ್ರ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದು, ಸರ್ಕಾರ ತರಲಿರುವ ಯಾವುದೇ ಮಸೂದೆಯನ್ನು ಬೆಂಬಲಿಸದಿರಲು ತೀರ್ಮಾನಿಸಿದೆ.
ಶಾಸನಸಭಾ ಕಾರ್ಯಸೂಚಿಗಳ ಹೊರತಾಗಿಯೂ, ದೇಶದ ಪ್ರಸ್ತುತ ಜ್ವಲಂತ ಸಮಸ್ಯೆಗಳ ಆಧಾರದ ಮೇಲೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಯೋಜನೆ ರೂಪಿಸಿವೆ. ದೇಶಾದ್ಯಂತ ಸದ್ದು ಮಾಡಿದ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ, ಅಯೋಧ್ಯೆ ರಾಮಮಂದಿರದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರ, ಸಾರ್ವಜನಿಕರಿಗೆ ಹೊರೆಯಾಗಿರುವ ತೈಲ ಬೆಲೆ ಏರಿಕೆ ಹಾಗೂ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಂತಹ ಪ್ರಮುಖ ವಿಷಯಗಳನ್ನು ಸಂಸತ್ತಿನ ಉಭಯ ಸದನಗಳಲ್ಲಿ ಪ್ರಸ್ತಾಪಿಸಿ ಸರ್ಕಾರದ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ಮೈತ್ರಿಕೂಟ ಸನ್ನದ್ಧವಾಗಿದೆ(ಏಜೆನ್ಸೀಸ್).