Congress Candidate | ಕೊಟ್ಟ ಕುಕ್ಕರ್ ವಾಪಸ್ ಕೇಳಿದ ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಟನೆಗಿಳಿದ ಮತದಾರರು 
ದೇಶ

ಸೋಲಿನ ಭೀತಿ...ಕೊಟ್ಟ ಕುಕ್ಕರ್ ವಾಪಸ್ ಕೇಳಿದ ಕಾಂಗ್ರೆಸ್ ಅಭ್ಯರ್ಥಿ; ಪ್ರತಿಭಟನೆಗೆ ಮುಂದಾದ ಮತದಾರರು! | Congress Candidate

Congress Candidate​​: ತೆಲಂಗಾಣದ 7 ಪುರಸಭೆ ನಿಗಮಗಳ ಚುನಾವಣೆಯ ಮತ ಎಣಿಕೆ ಕಾರ್ಯ ಬೆಳಿಗ್ಗೆಯಿಂದಲೇ ಆರಂಭವಾಗಿದ್ದು, ಇದು ಆಡಳಿತಾರೂಢ ಕಾಂಗ್ರೆಸ್, ವಿಪಕ್ಷಗಳಾದ ಬಿಜೆಪಿ ಮತ್ತು ಬಿಆರ್‌ಎಸ್‌ ಜನಪ್ರಿಯತೆಯ ಪ್ರಮುಖ ಪರೀಕ್ಷೆ ಎಂದು ಪರಿಗಣಿಸಲಾಗಿದೆ.
ರಾಜ್ಯ ಚುನಾವಣಾ ಆಯೋಗದ ಪ್ರಕಾರ, 123 ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಿದ್ದು, ಮತಪತ್ರಗಳನ್ನು ಬಳಸಲಾಗಿರುವುದರಿಂದ ಈ ಪ್ರಕ್ರಿಯೆಯು ಸಮಯ ತೆಗೆದುಕೊಳ್ಳಬಹುದು ಎನ್ನಲಾಗಿದೆ. ಈ ನಡುವೆ ಅಭ್ಯರ್ಥಿಯೊಬ್ಬರು ಮಾಡಿರುವ ಕೆಲಸ ಸದ್ಯ ದೊಡ್ಡ ಮಟ್ಟದ ಸದ್ದು ಮಾಡಿದೆ.
ತೆಲಂಗಾಣದ ಖಮ್ಮಂ ಜಿಲ್ಲೆಯ ಅಶ್ವರಾವ್‌ಪೇಟೆ ಪುರಸಭೆಯ ವಾರ್ಡ್ ಸಂಖ್ಯೆ 10 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ತಮ್ಮ ಸೋಲಿನ ಮುನ್ಸೂಚನೆ ಸಿಗುತ್ತಿದ್ದಂತೆ ಮತದಾರರಿಗೆ ನೀಡಿದ್ದ ನಗದು ಮತ್ತು ಪ್ರೆಶರ್ ಕುಕ್ಕರ್‌ಗಳನ್ನು ಹಿಂದಿರುಗಿಸುವಂತೆ ಗುರುವಾರ (ಫೆ.12) ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.
ಇದು ಸ್ಥಳೀಯ ಅಧಿಕಾರಿಗಳು ಮತ್ತು ದಾರಿಹೋಕರ ಗಮನ ಸೆಳೆದಿದ್ದು, ಸ್ಥಳೀಯ ನಿವಾಸಿಗಳು ವಿತರಿಸಿದ ಕುಕ್ಕರ್‌ಗಳನ್ನು ರಸ್ತೆಯ ಮಧ್ಯದಲ್ಲಿ ಇರಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ನಿವಾಸಿಗಳ ಆರೋಪವೇನು..?

ಕಾಂಗ್ರೆಸ್ ಅಭ್ಯರ್ಥಿಯು ಪ್ರಚಾರದ ಸಮಯದಲ್ಲಿ ಹಣ ಮತ್ತು ಪ್ರೆಶರ್ ಕುಕ್ಕರ್‌ಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ವಿತರಿಸಿದ್ದರು, ಪಕ್ಷವು ವಾರ್ಡ್‌ನಲ್ಲಿ ಸೋಲಿನ ಸಮೀಪಕ್ಕೆ ಬರುತ್ತಿದ್ದಂತೆ, ಅಭ್ಯರ್ಥಿ ಫಲಾನುಭವಿಗಳಿಗೆ ವಸ್ತುಗಳನ್ನು ಹಿಂತಿರುಗಿಸುವಂತೆ ಕೇಳಲು ಪ್ರಾರಂಭಿಸಿದ್ದಾರೆ ಎನ್ನುವುದು ಸ್ಥಳೀಯ ನಿವಾಸಿಗಳ ಆರೋಪ.
ನಾವು ಯಾವುತ್ತು ಮತಕ್ಕಾಗಿ ಹಣ ಅಥವಾ ಕುಕ್ಕರ್‌ಗಳನ್ನು ಕೇಳಿಲ್ಲ. ಈಗ ವಿನಾಕಾರಣ ನಮ್ಮನ್ನು ಅವಮಾನಿಸುತ್ತಿರುವುದು ಏಕೆ..? ಈ ಬೆಳವಣಿಗೆಯಿಂದ ತಮಗೆ ಅವಮಾನವಾಗಿದ್ದು, ಅಭ್ಯರ್ಥಿಯು ತಮ್ಮನ್ನು ಬೆದರಿಸುವ ತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪೊಲೀಸರ ಮಧ್ಯಪ್ರವೇಶ

ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಉದ್ವಿಗ್ನತೆಯನ್ನು ತಡೆಯಲು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಗುಂಪನ್ನು ಚದುರಿಸಲು, ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಕೆಲವು ವ್ಯಕ್ತಿಗಳನ್ನು ಸಂಕ್ಷಿಪ್ತವಾಗಿ ಬಂಧಿಸಲಾಗಿದೆ ಎಂದು ಮೂಲಗಳ ಮಾಹಿತಿ. ಸದ್ಯ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರು ಶಾಂತಿ ಕಾಪಾಡುವಂತೆ ಪೊಲೀಸರು ಒತ್ತಾಯಿಸಿದರು.

ನೀತಿಸಂಹಿತೆ ಪರಿಶೀಲನೆ

ಈ ಘಟನೆಯು ಪುರಸಭೆ ಚುನಾವಣೆಗಳ ಸಮಯದಲ್ಲಿ ಚುನಾವಣಾ ನಿಯಮಗಳ ಉಲ್ಲಂಘನೆಯ ಬಗ್ಗೆ ಮತ್ತೇ ಕಳವಳವನ್ನು ಹುಟ್ಟುಹಾಕಿದ್ದು, ಇತ್ತೀಚಿನ ವರ್ಷಗಳಲ್ಲಿ, ರಾಜ್ಯದ ವಿವಿಧ ಭಾಗಗಳಲ್ಲಿ ಮತಗಳಿಗಾಗಿ ನಗದು ಮತ್ತು ಇತರ ವಸ್ತುಗಳ ಹಂಚಿಕೆಯ ಆರೋಪಗಳು ಹೆಚ್ಚಾಗಿವೆ. ಪ್ರಚಾರ ಮತ್ತು ಮತದಾನದ ಸಮಯದಲ್ಲಿ ತೆಲಂಗಾಣ ಪೊಲೀಸರು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗಾಗಿ 142 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, ರಾಜ್ಯಾದ್ಯಂತ ಚುನಾವಣೆಗೆ ಸಂಬಂಧಿಸಿದ ವಿವಿಧ ಅಪರಾಧಗಳಿಗೆ ಸಂಬಂಧಿಸಿದಂತೆ 988 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ(ಏಜೆನ್ಸೀಸ್​).