ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ 
ದೇಶ

ಅರಾವಳಿ ಬೆಟ್ಟಗಳ ಬಗ್ಗೆ ಸಾರ್ವಜನಿಕರನ್ನು ದಾರಿ ತಪ್ಪಿಸಲಾಗುತ್ತಿದೆ; ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ | Congress

ನವದೆಹಲಿ: ಅರಾವಳಿ ಬೆಟ್ಟಗಳ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್(Congress), ಕೇಂದ್ರವು ಬೆಟ್ಟಗಳ ವಿಚಾರದಲ್ಲಿ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದು, ಪರಿಸರ ಸೂಕ್ಷ್ಮ ಶ್ರೇಣಿಯ ಬಗ್ಗೆ ಮಾರಕ ದೋಷಪೂರಿತ ಮರು ವ್ಯಾಖ್ಯಾನ ಮಾಡುತ್ತಿದೆ ಎಂದು ಆರೋಪಿಸಿದೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಅರಾವಳಿ ಬೆಟ್ಟಗಳ ವಿಷಯದಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು, ಸತ್ಯದೊಂದಿಗೆ ಆರ್ಥಿಕವಾಗಿ ವರ್ತಿಸುತ್ತಿದೆ. ಸರ್ಕಾರವು ಅಳವಡಿಸಿಕೊಳ್ಳುತ್ತಿರುವ ಮರುವ್ಯಾಖ್ಯಾನವನ್ನು ಭಾರತೀಯ ಅರಣ್ಯ ಸಮೀಕ್ಷೆ, ಸುಪ್ರೀಂ ಕೋರ್ಟ್ ನೇಮಿಸಿದ ಕೇಂದ್ರೀಯ ಅಧಿಕಾರ ಸಮಿತಿ ಮತ್ತು ನ್ಯಾಯಾಲಯದ ಅಮಿಕಸ್ ಕ್ಯೂರಿ ವಿರೋಧಿಸಿದೆ. ಆದರೂ ಮೋದಿ ಸರ್ಕಾರ ಅರಾವಳಿ ಬೆಟ್ಟಗಳ ಬಗ್ಗೆ ಮಾರಕ ದೋಷಪೂರಿತ ಮರು ವ್ಯಾಖ್ಯಾನವನ್ನು ಯಾಕೆ ಜಾರಿಗೆ ತರುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಹೊಸ ಮಾನದಂಡಗಳ ಅಡಿಯಲ್ಲಿ ಅರಾವಳಿ ಬೆಟ್ಟವನ್ನು ಸುತ್ತಮುತ್ತಲಿನ ಭೂಪ್ರದೇಶದಿಂದ ಕನಿಷ್ಠ 100 ಮೀಟರ್ ಎತ್ತರದಲ್ಲಿರುವ ಭೂರೂಪ ಎಂದು ವ್ಯಾಖ್ಯಾನಿಸುತ್ತಿದೆ ಎನ್ನಲಾಗಿದೆ.
ಈ ಕುರಿತು ಮಂಗಳವಾರ ಮಾತನಾಡಿದ್ದ ಅವರು, ಕೇಂದ್ರ ಅರಾವಳಿ ಬೆಟ್ಟಗಳನ್ನು ಉಳಿಸುವ ಬದಲು ಮಾರಾಟ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು. ಜೊತೆಗೆ ಅರಾವಳಿ ಪ್ರದೇಶದ ವ್ಯಾಖ್ಯಾನದಲ್ಲಿನ ಬದಲಾವಣೆಗಳು ಹೆಚ್ಚಿದ ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಚಟುವಟಿಕೆಗೆ ಬಾಗಿಲು ತೆರೆಯುತ್ತದೆ, ವಿಶೇಷವಾಗಿ ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಲಿನ್ಯ ಮಟ್ಟವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಕೇಂದ್ರ ಸಚಿವ ಭೂಫೇಂದರ್ ಯಾದವ್ ಸ್ಪಷ್ಟನೆ
ನೂರು ಮೀಟರ್ ಅರಾವಳಿ ಬೆಟ್ಟಗಳ ಬಗ್ಗೆ ಸುಪ್ರೀಂಕೋರ್ಟ್​ನ ವ್ಯಾಖ್ಯಾನ ತೀವ್ರ ವಿವಾದಕ್ಕೀಡಾಗುತ್ತಿದ್ದಂತೆ ಸ್ಪಷ್ಟೀಕರಣ ನೀಡಿರುವ ಕೇಂದ್ರ ಸಚಿವ ಭೂಫೇಂದರ್ ಯಾದವ್,
ಅರಾವಳಿ ಶ್ರೇಣಿಯ ಒಟ್ಟು 1.44 ಲಕ್ಷ ಚದರ ಕಿಲೋಮೀಟರ್‌ಗಳಲ್ಲಿ ಕೇವಲ 0.19 ಪ್ರತಿಶತ ಅಥವಾ ಸುಮಾರು 277 ಚದರ ಕಿಲೋಮೀಟರ್‌ಗಳಲ್ಲಿ ಮಾತ್ರ ಗಣಿಗಾರಿಕೆ ಚಟುವಟಿಕೆಗಳಿಗೆ ಅನುಮತಿ ನೀಡಲಾಗುವುದು ಎಂದು ಹೇಳಿದ್ದಾರೆ (ಏಜೆನ್ಸೀಸ್).