ಪ್ರಧಾನಿ ಮೋದಿ ನಿವಾಸ ಎದುರು ಧರಣಿ 
ದೇಶ

ಪ್ರಧಾನಿ ಮೋದಿ ನಿವಾಸ ಎದುರು ಧರಣಿ: ಈ 5 ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ 'ಕೈ' ಡಿಮಾಂಡ್​

ಪ್ರಮುಖ ಮುಖ್ಯಾಂಶಗಳು

  • ನೀಟ್​ ಪರೀಕ್ಷೆ ಸೋರಿಕೆ ಹಾಗೂ ಸಿಜೆಪಿ ಮೇಲೆ ಲಾಠಿಚಾರ್ಚ್​ ಖಂಡಿಸಿ ಕಾಂಗ್ರೆಸ್​ ಧರಣಿ
  • ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಿವಾಸದ ಮುಂದೆ ಪ್ರತಿಭಟನೆ
  • ಐದು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರಕ್ಕೆ 'ಕೈ' ಡಿಮಾಂಡ್​
ನವದೆಹಲಿ: ನೀಟ್​ ಪರೀಕ್ಷೆಯಲ್ಲಿ ಸೋರಿಕೆ ಖಂಡಿಸಿದ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಮುಂದೆ ಧರಣಿ ನಡೆಸುತ್ತಿರುವ ಕಾಂಗ್ರೆಸ್​ ಜಟಾಪಟಿಯು ತಾರಕಕ್ಕೇರಿದೆ. ಪೊಲೀಸರು ಮತ್ತು ಕೈ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಜೋರಾಗಿದೆ.
ನಿನ್ನೆ ಸಿಜೆಪಿ ಕಾರ್ಯಕರ್ತರ ಮೇಲೆ ನಡೆದ ಲಾಠಿಚಾರ್ಜ್ ಖಂಡಿಸಿ ಕಾಂಗ್ರೆಸ್​ನ ಪ್ರಮುಖ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಇನ್ನಿತರರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಪ್ರಧಾನಿ ಮೋದಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಸಾಧ್ಯವಾಗದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸಿಜೆಪಿ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿದ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಕೂಡ ತಮ್ಮ ಸ್ಥಾನಗಳಿಗೆ ರಾಜೀನಾಮೆ ಘೋಷಿಸಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ. ವಿಪಕ್ಷಗಳು ಪ್ರಧಾನಿ ಮನೆ ಮುಂದೆ ಧರಣಿ ನಡೆಸುತ್ತಿರುವುದರಿಂದ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರಾಹುಲ್​ ಗಾಂಧಿ ಸೇರಿ ಕೆಲ ನಾಯಕರನ್ನು ಈಗಾಗಲೇ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ, ಪ್ರಧಾನಿ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಮುಖಂಡರನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಭೇಟಿ ಮಾಡಿ, ರಾಹುಲ್ ಗಾಂಧಿ ಮನವೋಲಿಸಲು ಪ್ರಯತ್ನಿಸಿದರು. ಇಲ್ಲಿಗೆ ಧರಣಿ ಕೈಬಿಡುವಂತೆ ಕೋರಿದರು. ಆದರೆ, ಇದಕ್ಕೆ ಕಿವಿಗೊಡದ ರಾಹುಲ್​, ಯಾವುದೇ ಕಾರಣಕ್ಕೂ ಪ್ರತಿಭಟನೆ ಕೈಬಿಡುವುದಿಲ್ಲ. ಅಗತ್ಯ ಬಿದ್ದರೆ ಇಡೀ ರಾತ್ರಿ ಪ್ರಧಾನಿ ನಿವಾಸದ ಮುಂದೆಯೇ ಕೂತು ಪ್ರತಿಭಟನೆ ಮುಂದುವರಿಸುತ್ತೇವೆ ಎಂದರು. ಇದೇ ಸಮಯದಲ್ಲಿ, ಕೇಂದ್ರ ಸರ್ಕಾರಕ್ಕೆ ತಮ್ಮ ಐದು ಮುಖ್ಯ ಬೇಡಿಕೆಗಳನ್ನು ಮುಂದಿಟ್ಟಿದರು.

ಕಾಂಗ್ರೆಸ್‌ ಬೇಡಿಕೆಗಳೇನು?

1. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಘೋಷಿಸಬೇಕು
2. ಗೃಹ ಸಚಿವರು ಸಂಸತ್ತಿನಲ್ಲಿ ಘೋಷಣೆ ಮಾಡಬೇಕು
3. ನೀಟ್ ವಿಚಾರವಾಗಿ ಸಂಸತ್ತಿನಲ್ಲಿ ಚರ್ಚಿಸಬೇಕು
4. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಬೇಕು
5. ಸಿಜೆಪಿ ಪಕ್ಷದ ಧರಣಿಯ ವೇಳೆ ನಡೆದ ಹಿಂಸಾಚಾರದ ಬಗ್ಗೆ ತನಿಖೆ ಆಗಬೇಕು,(ಏಜೆನ್ಸೀಸ್).