ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಸೆಲ್ವಪೆರುಂಥಗೈ
ಚೆನ್ನೈ: ಕೆಲವೇ ತಿಂಗಳು ಬಾಕಿಯಿರುವ ತಮಿಳುನಾಡು ಚುನಾವಣೆ ಬಾಕಿಯಿರುವಂತೆ ಡಿಎಂಕೆ ಜೊತೆಗಿನ ಮೈತ್ರಿಯಿಂದ ಕಾಂಗ್ರೆಸ್ ಹೊರ ಬಂದು ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳುತ್ತದೆ ಎಂಬ ಊಹಾಪೋಹಗಳಿಗೆ ಮಂಗಳವಾರ(ಜ. 06) ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಸೆಲ್ವಪೆರುಂಥಗೈ ತೆರೆ ಎಳೆದಿದ್ದಾರೆ.
ಈ ಕುರಿತು ಚೆನ್ನೈನಲ್ಲಿ ಮಾತನಾಡಿರುವ ಅವರು, ಡಿಎಂಕೆ ಜೊತೆಗಿನ ಕಾಂಗ್ರೆಸ್ ಮೈತ್ರಿ ದೃಢವಾಗಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷವು ಗೌರವಯುತವಾಗಿ ಮಾತುಕತೆ ನಡೆಸಿ ಅಗತ್ಯವಿರುವ ವಿಧಾನಸಭಾ ಸ್ಥಾನಗಳನ್ನು ಪಡೆಯಲಿದೆ. ಮೈತ್ರಿಕೂಟದಲ್ಲಿ ಯಾವುದೇ ಬಿರುಕಿಲ್ಲ. ಸೀಟು ಹಂಚಿಕೆ ಒಪ್ಪಂದಕ್ಕೆ ಬಂದ ಬಳಿಕ ನಾವೇ ತಿಳಿಸುತ್ತೇವೆ ಎಂದು ಹೇಳಿದ್ದಾರೆ.
ಮುಂಬರುವ ತಮಿಳುನಾಡು ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನ ಬಿಟ್ಟುಕೊಡುವಂತೆ ಡಿಎಂಕೆ ಮುಂದೆ ಬೇಡಿಕೆ ಇಟ್ಟಿದ್ದು, ಆದರೆ ಡಿಎಂಕೆ ಕೇವಲ 32 ಸ್ಥಾನಗಳನ್ನು ನೀಡುವುದಾಗಿ ಹೇಳಿದೆ ಎನ್ನಲಾಗಿದೆ.
ಇತ್ತೀಚೆಗೆ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಸಂಸದ ಮಾಣಿಕ್ಕಂ ಟ್ಯಾಗೋರ್, ಮೈತ್ರಿ ಇಲ್ಲದೆ ತಮಿಳುನಾಡಿನಲ್ಲಿ ಯಾವುದೇ ಪಕ್ಷವು ಗೆಲುವು ಸಾಧಿಸಲು ಸಾಧ್ಯವಿಲ್ಲ. ಮುಂಬರುವ ಚುನಾವಣೆಯಲ್ಲಿ ಸ್ಥಾನಗಳ ಹಂಚಿಕೆ ಜೊತೆ ಅಧಿಕಾರ ಹಂಚಿಕೆಯ ಬಗ್ಗೆಯೂ ಮಾತುಕತೆ ನಡೆಯಬೇಕು ಎಂದು ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಡಿಎಂಕೆ ನಾಯಕ ಮತ್ತು ಮಾಜಿ ಸಂಸದ ಎಂ.ಎಂ. ಅಬ್ದುಲ್ಲಾ, ಮೈತ್ರಿಕೂಟದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಲು ಆರ್‌ಎಸ್‌ಎಸ್ ಸೃಷ್ಟಿಸಿದ ಸತ್ತ ನಿರೂಪಣೆಯನ್ನು ಟ್ಯಾಗೋರ್ ಈಗ ಪುನರುಜ್ಜೀವನಗೊಳಿಸುತ್ತಿದ್ದಾರೆ ಎಂದು ಕಿಡಿಕಾರಿದ್ದರು (ಏಜೆನ್ಸೀಸ್).