Kerala Election | ಕಾಂಗ್ರೆಸ್ ಹೆಸರಿನ ಹತ್ತಾರು ಪಕ್ಷಗಳು
ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆ (Kerala Election) ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಕಾವು ಜೋರಾಗುತ್ತಿದೆ, ಆದರೆ, ಈ ಬಾರಿ ಅಭಿವೃದ್ಧಿ ಮತ್ತು ಭ್ರಷ್ಟಾಚಾರದ ವಿಷಯಗಳಿಗಿಂತ ಹೆಚ್ಚಾಗಿ ರಾಜ್ಯದ ಮತದಾರರನ್ನು ಕಾಡುತ್ತಿರುವುದು ಹೆಸರಿನ ಗೊಂದಲ.
ಒಂದೇ ರೀತಿಯ ಹೆಸರುಗಳನ್ನು ಹೊಂದಿರುವ ರಾಜಕೀಯ ಪಕ್ಷಗಳ ಸುನಾಮಿಯ ನಡುವೆ, ಅಸಲಿ ಅಭ್ಯರ್ಥಿ ಯಾರು ಮತ್ತು ಯಾವ ಮೈತ್ರಿಕೂಟಕ್ಕೆ ಮತ ಹಾಕಬೇಕು ಎಂಬುದು ಮತದಾರರಿಗೆ ದೊಡ್ಡ ತಲೆ ನೋವಾಗಿದೆ.
ಕಾಂಗ್ರೆಸ್ ಹೆಸರಿನಲ್ಲೇ ಇದೆ ಅಸಲಿ ಆಟ!
ಕೇರಳದಲ್ಲಿ ಕಾಂಗ್ರೆಸ್ ಎಂಬ ಪದ ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿಗೆ ಹುಟ್ಟಿಕೊಂಡ ಬಣಗಳು ಇಂದು ಮತದಾರರ ತಲೆ ಕೆಡಿಸುತ್ತಿವೆ. ಕೇರಳದ ಮತಯಂತ್ರದಲ್ಲಿ ನೀವು ನೋಡಬಹುದಾದ ಕಾಂಗ್ರೆಸ್ ಪಕ್ಷಗಳ ಪಟ್ಟಿ ಹೀಗಿದೆ.
ಯುಡಿಎಫ್ (UDF) ಪಾಳಯದಲ್ಲಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಕೇರಳ ಕಾಂಗ್ರೆಸ್ (ಜೋಸೆಫ್), ಕೇರಳ ಕಾಂಗ್ರೆಸ್ (ಜಾಕೋಬ್).
ಎಲ್‌ಡಿಎಫ್ (LDF) ಪಾಳಯದಲ್ಲಿ: ಕೇರಳ ಕಾಂಗ್ರೆಸ್ (ಮಣಿ), ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎಸ್‌ಪಿ), ಕಾಂಗ್ರೆಸ್ (ಜಾತ್ಯತೀತ), ಜನಾಧಿಪತ್ಯ ಕೇರಳ ಕಾಂಗ್ರೆಸ್, ಕೇರಳ ಕಾಂಗ್ರೆಸ್ (ಬಿ).
ಒಂದೇ ಹೆಸರಿನ ಹಲವು ಶಾಖೆಗಳು ಎರಡು ವಿರುದ್ಧ ಮೈತ್ರಿಕೂಟಗಳಲ್ಲಿ ಹಂಚಿಹೋಗಿರುವುದು ಮತದಾರರಲ್ಲಿ ಭಾರಿ ಗೊಂದಲ ಮೂಡಿಸಿದ್ದು, ಕೈ ಗುರುತಿಗೂ ಮತ್ತು ಕೇರಳ ಕಾಂಗ್ರೆಸ್‌ನ ವಿವಿಧ ಬಣಗಳಿಗೂ ವ್ಯತ್ಯಾಸ ತಿಳಿಯದೆ ಸಾಮಾನ್ಯ ಮತದಾರರು ಕಕ್ಕಾಬಿಕ್ಕಿಯಾಗುವ ಸಾಧ್ಯತೆ ಹೆಚ್ಚು.
ಇತಿಹಾಸ ಮರುಕಳಿಸುತ್ತಾ..?
2021ರ ಚುನಾವಣೆಯಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸತತ ಎರಡನೇ ಬಾರಿಗೆ ಅಧಿಕಾರ ಹಿಡಿದು ಇತಿಹಾಸ ನಿರ್ಮಿಸಿತ್ತು. 62 ಸ್ಥಾನಗಳನ್ನು ಗೆದ್ದ ಸಿಪಿಐ(ಎಂ) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಕಾಂಗ್ರೆಸ್ (INC) ಕೇವಲ 21 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಆದರೆ, ಈ ಬಾರಿ ಆಡಳಿತ ವಿರೋಧಿ ಅಲೆ ಮತ್ತು ಬಿಜೆಪಿಯ ಅಬ್ಬರದ ಪ್ರಚಾರವು ಫಲಿತಾಂಶವನ್ನು ಬದಲಿಸಬಲ್ಲದೇ ಎಂಬುದು ದೊಡ್ಡ ಪ್ರಶ್ನೆ.
ಕಳೆದ ಬಾರಿ ಶೂನ್ಯ ಸಾಧನೆ ಮಾಡಿದ್ದರೂ ಗಮನಾರ್ಹ ಮತ ಪಡೆದಿದ್ದ ಬಿಜೆಪಿ, ಈ ಬಾರಿ ಕೇರಳದಲ್ಲಿ ತನ್ನ ಅಸ್ತಿತ್ವ ಸಾಬೀತುಪಡಿಸಲು ಹವಣಿಸುತ್ತಿದೆ. ಶಬರಿಮಲೆ ವಿವಾದದಿಂದ ಹಿಡಿದು ಇತ್ತೀಚಿನ ಕೇಂದ್ರದ ಯೋಜನೆಗಳವರೆಗೆ ಎಲ್ಲವನ್ನೂ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಕೇಸರಿ ಪಕ್ಷ, ಎಲ್‌ಡಿಎಫ್ ಮತ್ತು ಯುಡಿಎಫ್ ನಡುವಿನ ಫಿಫ್ಟಿ-ಫಿಫ್ಟಿ ಆಟಕ್ಕೆ ಬ್ರೇಕ್ ಹಾಕುವ ಇರಾದೆಯಲ್ಲಿದೆ.
ಸಣ್ಣ ಪಕ್ಷಗಳೇ ಇಲ್ಲಿ ಕಿಂಗ್ ಮೇಕರ್ಸ್!
ಕೇರಳ ರಾಜಕೀಯದಲ್ಲಿ ಸಿಪಿಐ(ಎಂ) ಮತ್ತು ಕಾಂಗ್ರೆಸ್ ದೊಡ್ಡ ಪಕ್ಷಗಳಾದರೂ, ಅಧಿಕಾರ ಹಿಡಿಯಲು ಕೇರಳ ಕಾಂಗ್ರೆಸ್‌ನ ವಿವಿಧ ಬಣಗಳು, ಮುಸ್ಲಿಂ ಲೀಗ್ (IUML) ಮತ್ತು ಸಣ್ಣ ಪಕ್ಷಗಳ ಬೆಂಬಲ ಅನಿವಾರ್ಯ. ಪ್ರತಿಯೊಂದು ಸ್ಥಾನವೂ ನಿರ್ಣಾಯಕವಾಗಿದ್ದು, ಒಂದೊಂದು ಮತವೂ ಮೈತ್ರಿಕೂಟದ ಭವಿಷ್ಯವನ್ನು ನಿರ್ಧರಿಸುತ್ತವೇ ಎನ್ನುವುದರಲ್ಲಿ ಅನುಮಾನವಿಲ್ಲ.
ಕೇಂದ್ರ ಚುನಾವಣಾ ಆಯೋಗವು ಕೇರಳದ 140 ಕ್ಷೇತ್ರಗಳಿಗೆ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆಸಲು ದಿನಾಂಕ ನಿಗದಿಪಡಿಸಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ. ಕೇರಳದ ಗದ್ದುಗೆ ಯಾರ ಪಾಲಾಗಲಿದೆ ಎಂಬ ಕುತೂಹಲಕ್ಕೆ ಅಂದೇ ತೆರೆ ಬೀಳಲಿದೆ(ಏಜೆನ್ಸೀಸ್).