ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆ
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ದೇಶದಲ್ಲಿ ಕಚ್ಚಾ, ಅನಿಲ, ವಿದ್ಯುತ್, ರಸಗೊಬ್ಬರ ಸೇರಿದ ವಿವಿದ ವಲಯಗಳಿಗೆ ಸಂಬಂಧಿಸಿದಂತೆ ಭಾನುವಾರ (ಮಾ. 22) ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಪ್ರಧಾನಿ ಮೋದಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆರೋಗ್ಯ ಸಚಿವ ಜೆ.ಪಿ. ನಡ್ಡಾ, ವಿದೇಶಾಂಗ ಸಚಿವ ಎಸ್. ಜೈಶಂಕರ್, ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಿರಿಯ ಸಚಿವರು ಭಾಗವಹಿಸಿದ್ದರು.
ದೇಶಾದ್ಯಂತ ನಿರಂತರ ಇಂಧನ ಪೂರೈಕೆ, ಸ್ಥಿರವಾದ ಸಾಗಣೆ ಮತ್ತು ಅಗತ್ಯ ಸಂಪನ್ಮೂಲಗಳ ಪರಿಣಾಮಕಾರಿ ವಿತರಣೆಯನ್ನು ಖಚಿತಪಡಿಸಿಕೊಳ್ಳುವತ್ತ ಸಭೆಯಲ್ಲಿ ಚರ್ಚಿಸಲಾಗಿದ್ದು, ಸಾಕಷ್ಟು ಇಂಧನ ಲಭ್ಯತೆಯನ್ನು ಕಾಯ್ದುಕೊಳ್ಳಲು ಪೂರ್ವಣಭಾವಿ ಕ್ರಮಕೈಗೊಳ್ಳಲು ಸಭೆಯಲ್ಲಿ ಚರ್ಚಿಸಲಾಗಿದೆ ಎನ್ನಲಾಗಿದೆ.
ತಕ್ಷಣದ ಕ್ರಮಗಳ ಭಾಗವಾಗಿ, ಸರ್ಕಾರವು ರಾಜ್ಯಗಳಿಗೆ ವಾಣಿಜ್ಯ LPG ಹಂಚಿಕೆಯನ್ನು ಹೆಚ್ಚಿಸಿದ್ದು, ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಂತಹ ಪ್ರಮುಖ ವಲಯಗಳಿಗೆ ಆದ್ಯತೆ ನೀಡಿದೆ. ಗೃಹಬಳಕೆ ಮತ್ತು ವಾಣಿಜ್ಯ ಗ್ರಾಹಕರಿಗೆ ಹೊಸ PNG ಸಂಪರ್ಕಗಳನ್ನು ಒದಗಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ (ಏಜೆನ್ಸೀಸ್).