ಪ್ರತಿ ವರ್ಷ ಅಕ್ಟೋಬರ್ 16ರಂದು ವಿಶ್ವ ಆಹಾರ ದಿನ ಆಚರಿಸಲಾಗುತ್ತದೆ. ಹಸಿವುಮುಕ್ತ ಜಗತ್ತನ್ನು ನಿರ್ಮಿಸುವುದು ಮತ್ತು ಆಹಾರ ಭದ್ರತೆ ಕಾಯ್ದುಕೊಳ್ಳುವುದು ಈ ದಿನದ ಪ್ರಮುಖ ಉದ್ದೇಶ. ಆದರೆ, ಪ್ರಸ್ತುತ ದಿನಗಳಲ್ಲಿ ಬಹುತೇಕ ಮಂದಿ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕರ್ನಾಟಕದ ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳೆ ಬದಲಾವಣೆಗಳ ಸ್ವರೂಪವನ್ನು ಗಮನಿಸಿದರೆ, ನಮ್ಮ ಆಹಾರ ಭದ್ರತೆ ಎತ್ತ ಸಾಗುತ್ತಿದೆ ಎಂಬ ಗಂಭೀರ ಪ್ರಶ್ನೆ ಮೂಡುತ್ತದೆ. ವಿವಿಧ ಕಾರಣಗಳಿಗೆ ಸಾವಿರಾರು ಹೆಕ್ಟೇರ್ ಫಲವತ್ತಾದ ಕೃಷಿ ಭೂಮಿ ಕಣ್ಮರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಕೃಷಿ ಕ್ಷೇತ್ರದ ಪ್ರಸ್ತುತ ಪರಿಸ್ಥಿತಿಯ ಅವಲೋಕನ ಇಲ್ಲಿದೆ.
ರಾಗಿ ಕಣಜಕ್ಕೆ ಭೂಸ್ವಾಧೀನದ ಸವಾಲು
ಬೆಂಗಳೂರು, ಬೆಂಗಳೂರು ದಣ (ದಕ್ಷಿಣ), ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಭೂಸ್ವಾಧಿನವೇ ದೊಡ್ಡ ಸವಾಲಾಗಿದ್ದು, 10 ವರ್ಷಗಳಿಂದ ಕೃಷಿ ಭೂಮಿ ನಿರಂತರವಾಗಿ ಕಡಿಮೆಯಾಗುತ್ತಲೇ ಇದೆ. ಆದರೆ ನದಿಮೂಲಗಳು ಇಲ್ಲದೆ ಇರುವುದು ಹಾಗೂ ನೀರಿನ ಅಲಭ್ಯತೆ ಕಾರಣಗಳಿಂದ ಮಳೆ ಆಶ್ರಿತ ಬೆಳೆಯಾದ ರಾಗಿಯನ್ನೇ ನೆಚ್ಚಿಕೊಂಡಿದ್ದು, ಬೆಳೆ ವಿಸ್ತೀರ್ಣ ಕಡಿಮೆಯಾಗಿಲ್ಲ. ಬೆಂಗಳೂರು ದಣದಲ್ಲಿ 2016ರಲ್ಲಿ ಇದ್ದ 98 ಸಾವಿರ ಹೆಕ್ಟೇರ್ ಕೃಷಿ ಭೂಮಿ 2026ರಲ್ಲಿ 86 ಸಾವಿರ ಹೆಕ್ಟೇರ್ಗೆ ಕುಸಿದಿದೆ. ಕೋಲಾರದಲ್ಲಿ 92 ಸಾವಿರ ಹೆಕ್ಟೇರ್ನಿಂದ 85 ಸಾವಿರ ಹೆಕ್ಟೇರ್ಗೆ, ಚಿಕ್ಕಬಳ್ಳಾಪುರದಲ್ಲಿ 1.54 ಲಕ್ಷ ಹೆಕ್ಟೇರ್ ಪ್ರದೇಶದಿಂದ 1.32 ಲಕ್ಷ ಹೆಕ್ಟೇರ್ಗೆ, ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ 1,35,093 ಹೆಕ್ಟೇರ್ ಕೃಷಿ ಭೂಮಿ ಇದ್ದು, ಕಳೆದ 5 ವರ್ಷದಲ್ಲಿ ಶೇ.20ರಷ್ಟು ಕಡಿಮೆಯಾಗಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ತುಮಕೂರು ಜಿಲ್ಲೆಯಲ್ಲಿ 6,51,276 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡಲಾಗುತ್ತಿದೆ. 1,66,643 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗುತ್ತಿದೆ. ಮೆಕ್ಕೆಜೋಳ 29002 ಹೆಕ್ಟೇರ್, ಸಿರಿಧಾನ್ಯ 3812, ಭತ್ತ 3050, ಜೋಳ 6344, ಸಜ್ಜೆ 50 ಹೆಕ್ಟೇರ್ ಸೇರಿ ಒಟ್ಟು 2,08,901 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ತೆಂಗು, ಅಡಿಕೆಯನ್ನು 3.20 ಲಕ್ಷ ಹೆಕ್ಟೇರ್ನಲ್ಲಿ ಬೆಳೆಯಲಾಗುತ್ತಿದೆ. ಕೃಷಿ ಭೂಮಿಯನ್ನು ತೋಟಗಾರಿಕೆ ಪ್ರದೇಶವಾಗಿ ಮಾರ್ಪಡಿಸುವುದು ಹೆಚ್ಚಾಗಿದೆ. ಹೂವು, ಹಣ್ಣು, ತರಕಾರಿಯಂತ ವಾಣಿಜ್ಯ ಬೆಳೆಗಳತ್ತಲೂ ಒಲವು ಹೆಚ್ಚಾಗಿದೆ.
ಪರ್ಯಾಯ ಬೆಳೆಗಳತ್ತ ಆಸಕ್ತಿ
ಧಾರವಾಡ ಜಿಲ್ಲೆಯಲ್ಲಿ 2023-&24ಕ್ಕೆ ಹೋಲಿಸಿದರೆ 2025&-26ರಲ್ಲಿ ಬಿತ್ತನೆ ಪ್ರದೇಶ 2,43,567 ಹೆಕ್ಟೇರ್ನಿಂದ 2,99,946 ಹೆಕ್ಟೇರ್ಗೆ ಏರಿಕೆಯಾಗಿದೆ. ಕಡಲೆ ಬಿತ್ತನೆ ಕ್ಷೇತ್ರದಲ್ಲಿ ಗಣನೀಯ (40 ಸಾವಿರ ಹೆಕ್ಟೇರ್) ಹೆಚ್ಚಳವಾಗಿದೆ. ಜೋಳ, ರಾಗಿ, ನವಣೆ, ಸಜ್ಜೆ ಸೇರಿ ಏಕದಳ ಬೆಳೆಗಳು 68 ಸಾವಿರದಿಂದ 42 ಸಾವಿರ ಹೆಕ್ಟೇರ್ಗೆ ಕುಸಿದಿವೆ. ಹಾವೇರಿ ಜಿಲ್ಲೆಯಲ್ಲಿ ಭತ್ತ ಕಡಿಮೆಯಾಗಿ ಮೆಕ್ಕೆಜೋಳ ಕ್ಷೇತ್ರ ಹೆಚ್ಚಳವಾಗಿದೆ. ಕಬ್ಬು, ಅಡಕೆಯಂಥ ಬೆಳೆ ಪ್ರಮಾಣ ಹೆಚ್ಚುತ್ತಿದೆ. ಗದಗ ಜಿಲ್ಲೆಯಲ್ಲಿ ಪ್ರಮುಖ ಆಹಾರ ಬೆಳೆಗಳಾದ ಹೆಸರು 90,217 ಹೆಕ್ಟೇರ್ ಇದ್ದದ್ದು, ಅರ್ಧ ದಶಕದಲ್ಲಿ ಶೇ.10ರಷ್ಟು ಇಳಿದಿದೆ. ಮಧ್ಯ ಕರ್ನಾಟಕ ಭಾಗದ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಕೃಷಿ ಭೂಮಿ ಕಡಿಮೆಯಾಗುತ್ತಿದ್ದು, ಅಡಿಕೆ ಆವರಿಸುತ್ತಿದೆ. ಆದರೆ ರಾಗಿ ಬೆಳೆಯುವ ಪ್ರದೇಶ ಹೆಚ್ಚಳವಾಗಿದೆ.
ಭತ್ತದಿಂದ ವಿಮುಖ
ಮೈಸೂರು ಜಿಲ್ಲೆಯಲ್ಲಿ ಭತ್ತ, ರಾಗಿ, ಮುಸುಕಿನ ಜೋಳ ಹಾಗೂ ಬೇಳೆಕಾಳುಗಳು ಪ್ರಮುಖ ಬೆಳೆಗಳಾಗಿವೆ. ಆದರೆ ಒಟ್ಟಾರೆ ಕೃಷಿ ಭೂಮಿ ಪ್ರಮಾಣ 3,92,248 ಹೆಕ್ಟೇರ್ನಿಂದ 3,55,592 ಹೆಕ್ಟೇರ್ಗೆ ಇಳಿಕೆಯಾಗಿದ. ಮಂಡ್ಯ ಜಿಲ್ಲೆಯಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಇಳಿಮುಖವಾಗಿದೆ. ಹಾಸನ ಜಿಲ್ಲೆಯಲ್ಲಿ ಭತ್ತ ಬೆಳೆವ ಪ್ರದೇಶ ಶೇ.20ರಿಂದ 30ರಷ್ಟು
ಕಡಿಮೆಯಾದರೂ ರಾಗಿ ಬೆಳೆ ಹೆಚ್ಚಳವಾಗಿದೆ. ಚಾಮರಾಜನಗರದಲ್ಲಿ 1.5 ಲಕ್ಷ ಹೆಕ್ಟೇರ್ನಲ್ಲಿ ವಿವಿಧ ಬೆಳಗಳ ಬಿತ್ತನೆಯಾಗಿತ್ತು. ಈ ವರ್ಷ ಇದು 98 ಸಾವಿರ ಹೆಕ್ಟೇರ್ಗೆ ಇಳಿಕೆ ಕಂಡಿದೆ. ದಣ ಕನ್ನಡ ಜಿಲ್ಲೆಯಲ್ಲಿ 2015&16ರ ಅವಧಿಯಲ್ಲಿ 28,029 ಹೆಕ್ಟೇರ್ ಪ್ರದೇಶದಲ್ಲಿದ್ದ ಭತ್ತದ ಕೃಷಿ ಇತ್ತೀಚಿನ ವರ್ಷಗಳಲ್ಲಿ 11,420 ಹೆಕ್ಟೇರ್ಗೆ ಕುಸಿದಿದೆ. ಉಡುಪಿ ಜಿಲ್ಲೆಯಲ್ಲಿ 2026&27ನೇ ಸಾಲಿನ ಮುಂಗಾರು ಅವಧಿಯಲ್ಲಿ 27,673 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿ ನಡೆಸಲಾಗಿದೆ. ಕಳೆದ 2 ವರ್ಷಗಳಿಗೆ ಹೋಲಿಸಿದರೆ ಈ ಬಾರಿ 1,600 ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚಳವಾಗಿದೆ.
ಅಡಿಕೆ ಕಾಫಿಯತ್ತ ಚಿತ್ತ
ಮಡಿಕೇರಿ ಜಿಲ್ಲೆಯಲ್ಲಿ ಭತ್ತ ಬೆಳೆಯುವ ಪ್ರದೇಶವು ಶೇ.27ರಷ್ಟು ಕುಸಿತ ಕಂಡಿದೆ. ರೈತರು ಸಾಂಪ್ರದಾಯಿಕವಾದ ಭತ್ತದ ಕೃಷಿ ಬಿಟ್ಟು ಕಾಫಿ, ಕಾಳುಮೆಣಸು ಮತ್ತು ಅಡಿಕೆ ಕೃಷಿಗಾಗಿ ಗದ್ದೆಗಳನ್ನು ಪರಿವರ್ತಿಸುತ್ತಿದ್ದಾರೆ. ಕೊಡಗಿನಲ್ಲಿ ಹೋಮ್ಸ್ಟೇಗಳು, ರೆಸಾರ್ಟ್ಗಳು ಮತ್ತು ವಸತಿ ನಿರ್ಮಾಣಕ್ಕಾಗಿ ಗದ್ದೆಗಳನ್ನು ಪರಿವರ್ತನೆ ಮಾಡುತ್ತಿದ್ದು, ಕೃಷಿಭೂಮಿ ಕಡಿಮೆಯಾಗಿದೆ.
ಕೃಷಿ ಭೂಮಿ ಕಡಿಮೆಯಾಗಲು ಕಾರಣಗಳು
ಬೆಂಗಳೂರು ಗ್ರಾಮಾಂತರ, ತುಮಕೂರು, ವಿಜಯನಗರ, ಕೊಪ್ಪಳ ಹಾಗೂ ಶಿವಮೊಗ್ಗ ಭಾಗಗಳಲ್ಲಿ ಕೈಗಾರಿಕಾ ವಲಯ, ಸೋಲಾರ್ ಪಾರ್ಕ್, ರಸ್ತೆ/ರೈಲ್ವೆ ಯೋಜನೆಗಳು ಮತ್ತು ಖಾಸಗಿ ಲೇಔಟ್ಗಳಿಗಾಗಿ ಸಾವಿರಾರು ಎಕರೆ ಕೃಷಿ ಭೂಮಿ ಸ್ವಾಧಿನವಾಗುತ್ತಿದೆ.
ಮಳೆಯ ಅಭಾವದಿಂದಾಗಿ ಮುಂಗಾರು ಹಾಗೂ ಹಿಂಗಾರು ಬಿತ್ತನೆ ಪ್ರದೇಶಗಳು ಶೇಕಡ 20ರಿಂದ ಶೇ.35ರಷ್ಟು ತಗ್ಗುತ್ತಿವೆ.
ನಿರಂತರ ನಷ್ಟ, ಕಾರ್ಮಿಕರ ಅಭಾವ ಮತ್ತು ಸಾಗುವಳಿ ವೆಚ್ಚವು ಹೆಚ್ಚಾದ ಕಾರಣ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಭತ್ತದ ಗದ್ದೆಗಳನ್ನು ಅಡಿಕೆ, ಕಾಫಿ, ತೆಂಗು ಮತ್ತು ಹೋಮ್ಸ್ಟೇಗಳಾಗಿ ಪರಿವರ್ತಿಸಲಾಗುತ್ತಿದೆ.
ಕೂಡು ಕುಟುಂಬಗಳಿಂದ ತುಂಬಿದ್ದ ಹಳ್ಳಿಗಳು ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮಗಳಂತಾಗಿವೆ. ಕುಟುಂಬಗಳ ವಿಟನೆಯಿಂದ ಕೃಷಿ ಭೂಮಿ ತುಂಡಾಗುತ್ತಿದ್ದು, ಇರುವ ಅಲ್ಪಸ್ಪಲ್ಪ ಜಮೀನುಗಳು ಪಾಳು ಬಿದ್ದಿವೆ.
ಅವಸಾನದ ಅಂಚಿಗೆ ಬಿಳಿ ಜೋಳ
ವಿಜಯಪುರ ಜಿಲ್ಲೆಯಲ್ಲಿ ಬಿಳಿಜೋಳ ಉತ್ಪಾದನಾ ಕ್ಷೇತ್ರವು ಕಡಿಮೆಯಾಗಿದೆ. ಕಳೆದ ನಾಲ್ಕೆದು ವರ್ಷಗಳಿಂದ ರೈತರು ಜೋಳದಿಂದ ವಿಮುಖರಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯನ್ನು ವಾಣಿಜ್ಯ ಬೆಳೆಗಳು ಆವರಿಸಿಕೊಳ್ಳುತ್ತಿವೆ. ದಶಕದ ಹಿಂದೆ ಅಂದಾಜು 80ರಿಂದ 90 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿಳಿ ಜೋಳ ಬೆಳೆಯಲಾಗುತ್ತಿತ್ತು. ಈಗ ಅದು 35ರಿಂದ 40 ಸಾವಿರ ಹೆಕ್ಟೇರ್ಗೆ ಇಳಿಕೆಯಾಗಿದೆ. ಎಣ್ಣೆಕಾಳು, ಈರುಳ್ಳಿ, ಮೆಣಸಿನಕಾಯಿ ಬೆಳೆ ಜಾಸ್ತಿಯಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ 1.30 ಲಕ್ಷ ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ.
ಪಾಳು ಬಿದ್ದ ಗದ್ದೆಗಳು
ಶಿವಮೊಗ್ಗ ಜಿಲ್ಲೆಯಲ್ಲಿ ಆರ್ಥಿಕತೆಯ ಮುಖ್ಯ ಆಧಾರವೇ ಅಡಿಕೆ ಬೆಳೆ. ಆದರೆ ಕೃಷಿ ಭೂಮಿ 6,152 ಹೆಕ್ಟೇರ್ನಷ್ಟು ತಗ್ಗಿದೆ. ಚಿಕ್ಕಮಗಳೂರಲ್ಲಿ ಅಡಕೆ, ಕಾಫಿ ಜತೆಗೆ ಭತ್ತ ಬೆಳೆಯುವ 7,124 ಹೆಕ್ಟೇರ್ ಭೂ ಪ್ರದೇಶವಿದೆ. ಇತ್ತೀಚಿನ ವರ್ಷಗಳಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದಾಗಿ ಈ ಭೂಪ್ರದೇಶ ಪಾಳುಬಿದ್ದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಭತ್ತ ಬೆಳೆಯುವ ಕ್ಷೇತ್ರವು ಶೇ.41ರಷ್ಟು ಇಳಿಕೆಯಾಗಿದೆ. 2015ರಲ್ಲಿ 66,147 ಹೆಕ್ಟೇರ್ನಲ್ಲಿ ಭತ್ತ ಬೆಳೆಯಲಾಗುತ್ತಿತ್ತು. 2025ರಲ್ಲಿ 38,976 ಹೆಕ್ಟೇರ್ಗೆ ಇಳಿದಿದೆ.
ವಾಣಿಜ್ಯ ಬೆಳೆಗಳತ್ತ ಕಲ್ಯಾಣದ ಒಲವು
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ವಾಣಿಜ್ಯ ಬೆಳೆಗಳತ್ತ ಒಲವು ಹೆಚ್ಚಿದ್ದು, ಪ್ರಮುಖ ಬೆಳೆಯಾದ ತೊಗರಿ ಬೆಳೆಯಿಂದ ರೈತರು ವಿಮುಖರಾಗುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಹತ್ತಿ ಬೆಳೆಯಲು ಒಲವು ಹೆಚ್ಚಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಮೆಣಸಿನಕಾಯಿ ಹಾಗೂ ಜೋಳದ ಬಿತ್ತನೆ ಹೆಚ್ಚಿದೆ. ಕಲಬುರಗಿ ಜಿಲ್ಲೆಯಲ್ಲಿ ಬಿತ್ತನೆ ಪ್ರದೇಶ ಅಷ್ಟೇ ಇದೆ. ಆದರೆ ಮಳೆ ಕೊರತೆಯಿಂದ ಶೇ.50ರಿಂದ ಶೇ.65ರಷ್ಟು ತೊಗರಿ ಉತ್ಪಾದನೆ ಕಡಿಮೆಯಾಗಿದೆ. ಬೀದರ್ನಲ್ಲಿ ಸೋಯಾಬೀನ್ ಬೆಳೆಗೆ ಬೇಡಿಕೆ ಹೆಚ್ಚಿದೆ. ಯಾದಗಿರಿ ಜಿಲ್ಲೆಯಲ್ಲಿ ಹತ್ತಿ ಬೆಳೆಯುವ ಪ್ರದೇಶ ಹೆಚ್ಚಳವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ನೀರಿನ ಕೊರತೆಯಿಂದಾಗಿ ಭತ್ತ ಹಾಗೂ ಮೆಕ್ಕೆಜೋಳ ಬಿತ್ತನೆ ಪ್ರಮಾಣ ಕುಸಿದಿದೆ. ವಿಜಯನಗರ ಜಿಲ್ಲೆಯಲ್ಲಿ ದ್ವಿದಳ ಧಾನ್ಯಗಳ ಪ್ರಮಾಣ ಆತಂಕಕಾರಿ ಮಟ್ಟಕ್ಕೆ ಕುಸಿದಿದೆ.
ವಾಣಿಜ್ಯ ಬೆಳೆ ಹೆಚ್ಚಳ
ಬೆಳಗಾವಿ ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಗಳ ಉತ್ಪಾದನೆ ಹೆಚ್ಚಳವಾಗಿದೆ. ಆದರೆ, ಅತಿವೃಷ್ಟಿ, ಅನಾವೃಷ್ಟಿಯಿಂದ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಪ್ರಮಾಣ ಶೇ.28ರಷ್ಟು ಕಡಿಮೆಯಾಗಿದೆ. ಆಹಾರಧಾನ್ಯ ಉತ್ಪಾದನೆ ಶೇ.35ರಷ್ಟು ಕುಸಿತವಾಗಿದೆ. ಬಿತ್ತನೆ ಪ್ರದೇಶ 40 ಸಾವಿರ ಹೆಕ್ಟೇರ್ ಇಳಿಕೆಯಾಗಿದೆ.
ಇತಿಹಾಸ
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) 1979ರಲ್ಲಿ ಮೊದಲ ಬಾರಿಗೆ ವಿಶ್ವ ಆಹಾರ ದಿನವೆಂದು ಗುರುತಿಸಿತು. ಅಂದಿನಿಂದ ಪ್ರತಿವರ್ಷ ಅ.16 ಅನ್ನು ವಿಶ್ವ ಆಹಾರ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಆರಂಭದಲ್ಲಿ ಎಫ್ಎಒ ಸ್ಥಾಪನೆಯ ನೆನಪಿಗಾಗಿ ವಿಶ್ವ ಆಹಾರ ದಿನವನ್ನು ಪ್ರಾರಂಭಿಸಲಾಯಿತು. ಕ್ರಮೇಣ ಈ ಆಚರಣೆಯು ಜಾಗತಿಕವಾಗಿ ಬದಲಾಗುತ್ತ ಆಹಾರದ ಕೊರತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ.
ಈ ವರ್ಷದ ಥೀಮ್: "ಇಂದಿನ ನಾವೀನ್ಯತೆ, ನಾಳೆಯ ಪೋಷಣೆ' (Innovation for a better future.) ಈ ಥೀಮ್ನ ಸಂದೇಶ ಇಂದಿನ ಕಾಲಘಟ್ಟದಲ್ಲಿ ಕೃಷಿ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನಗಳು ಮತ್ತು ರೈತರ ಸಾಂಪ್ರದಾಯಿಕ ಜ್ಞಾನವನ್ನು ಸಂಯೋಜಿಸಿ ಬೆಳೆ ಉತ್ಪಾದನೆಯನ್ನು ಹೆಚ್ಚಿಸುವುದು. ಹವಾಮಾನ ವೈಪರೀತ್ಯ, ಮಳೆ ಅಭಾವ ಮತ್ತು ಕೃಷಿ ಭೂಮಿ ಪ್ರಮಾಣ ಇಳಿಕೆಯಂತಹ ಸವಾಲುಗಳನ್ನು ಎದುರಿಸಿ, ಮುಂಬರುವ ಪೀಳಿಗೆಗೆ ಸುರಕ್ಷಿತ ಹಾಗೂ ಪೌಷ್ಟಿಕ ಆಹಾರ ಪೂರೈಸುವುದನ್ನು ಈ ವರ್ಷದ ಥೀಮ್ ಪ್ರತಿನಿಧಿಸುತ್ತದೆ.