ನವದೆಹಲಿ: ಸತತ 25 ವರ್ಷಗಳ ಕಾಲ ಸರ್ಕಾರದ ಮುಖ್ಯಸ್ಥರಾಗಿ ಅಧಿಕಾರ ಪೂರೈಸಿದ ಹಿನ್ನೆಲೆ ಬುಧವಾರ(ಅ. 07) ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಶ್ರೀ ವಿನಾಯಕ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದು, ರಾಷ್ಟ್ರ ಸೇವೆ ಮಾಡುವ ಪ್ರತಿಜ್ಞೆಯನ್ನು ಪುನರುಚ್ಚರಿಸಿದ್ದಾರೆ.
ಪ್ರಧಾನಿ ಮೋದಿಯವರು 2001 ಅಕ್ಟೋಬರ್ 7ರಂದು ಮೊದಲ ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಸತತ ಮೂರು ಅವಧಿಗೆ ಸಿಎಂ ಆಗಿ ಅಧಿಕಾರ ನಡೆಸಿದ ಬಳಿಕ 2014ರಲ್ಲಿ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಐತಿಹಾಸಿಕ ಗೆಲುವಿನತ್ತ ಕೊಂಡೊಯ್ದು ಪ್ರಧಾನಿ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅದಾದ ಬಳಿಕ ಸತತ ಮೂರು ಅವಧಿಗೆ ಪ್ರಧಾನಿಯಾಗಿ ಆಡಳಿತ ನಡೆಸುತ್ತಿದ್ದಾರೆ.
ಇನ್ನೂ ಮಂಗಳವಾರ(ಅ. 06) ಕೇಂದ್ರ ಸಚಿವ ಸಂಪುಟ ಸಭೆ ನಡೆಸಿ, ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳ ನಿರಂತರ ನಾಯಕತ್ವವನ್ನು ಪೂರ್ಣಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸುವ ನಿರ್ಣಯವನ್ನು ಅಂಗೀಕರಿಸಿತು.
ಈ ಮೈಲಿಗಲ್ಲು ಕೇವಲ ಸಾಂಪ್ರದಾಯಿಕ ಗೌರವವಲ್ಲ ಎಂದು ಬಣ್ಣಿಸಿದ ಸಂಪುಟ ಸಭೆಯ ನಿರ್ಣಯವು, ಮೋದಿಯವರ ನಾಯಕತ್ವ ಇದು ರಾಷ್ಟ್ರ ಮೊದಲು ಮತ್ತು ನಾಗರಿಕ ಮೊದಲು ಎಂಬ ತತ್ವದಿಂದ ಮಾರ್ಗದರ್ಶಿಸಲ್ಪಟ್ಟ ಅವರ ಅಸಾಧಾರಣ ಪ್ರಯಾಣವನ್ನು ಆಚರಿಸುತ್ತದೆ. ಗುಜರಾತ್‌ನಲ್ಲಿ ಮೂರು ಅಗಾಧ ಜನಾದೇಶಗಳು ಮತ್ತು ಸತತ ಮೂರು ಲೋಕಸಭಾ ಚುನಾವಣೆಗಳಲ್ಲಿನ ಬೆಂಬಲವು, ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಸಾರ್ವಜನಿಕರು ಇಟ್ಟಿರುವ ಶಾಶ್ವತ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದೆ.
ಈ ನಿರ್ಣಯವು ಪ್ರಧಾನಿ ಮೋದಿಯವರ ಅಧಿಕಾರಾವಧಿಯ 10 ಅಂಶಗಳನ್ನು ವಿವರಿಸಿದೆ. ಗುಜರಾತ್‌ನಿಂದ ರಾಷ್ಟ್ರೀಯ ವೇದಿಕೆಗೆ ಅವರ ಪ್ರಯಾಣವನ್ನು ಗುರುತಿಸುತ್ತದೆ. ಮತ್ತು ಅಭಿವೃದ್ಧಿ, ಕಲ್ಯಾಣ, ಸುಧಾರಣೆ, ತಂತ್ರಜ್ಞಾನ, ರಾಷ್ಟ್ರೀಯ ಭದ್ರತೆ, ರಾಜತಾಂತ್ರಿಕತೆ ಮತ್ತು ಸಾಂಸ್ಕೃತಿಕ ಪರಂಪರೆಯಾದ್ಯಂತ ಉಪಕ್ರಮಗಳು ಮತ್ತು ನೀತಿಗಳನ್ನು ಎತ್ತಿ ತೋರಿಸುತ್ತದೆ (ಏಜೆನ್ಸೀಸ್).