Akash Anand | ಅಳಿಯ ಆಕಾಶ್ ಆನಂದ್‌ನನ್ನು ಪಕ್ಷದಿಂದ ಉಚ್ಚಾಟಿಸಿದ ಮಾಯಾವತಿ!
ಲಖನೌ: ಮಾವ ಅಶೋಕ್ ಸಿದ್ಧಾರ್ಥ್ ರಾಜಕೀಯ ನಿವೃತ್ತಿ ಪಡೆದ ಬೆನ್ನಲ್ಲೇ, ಬಹುಜನ ಸಮಾಜ ಪಾರ್ಟಿ ಮುಖ್ಯಸ್ಥೆ ಮಾಯಾವತಿ ಅವರು ತಮ್ಮ ಸಂಬಂಧಿ ಆಕಾಶ್ ಆನಂದ್ (Akash Anand0 ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ.
ರಾಜ್ಯಸಭೆಯ ಮಾಜಿ ಸದಸ್ಯರಾಗಿರುವ ಸಿದ್ಧಾರ್ಥ್ ಅವರು ಇಂದು ಬೆಳಿಗ್ಗೆ ಭಾವನಾತ್ಮಕ ಪೋಸ್ಟ್ ಮಾಡುವ ಮೂಲಕ ಸಕ್ರಿಯ ರಾಜಕಾರಣಕ್ಕೆ ನಿವೃತಿ ಘೋಷಿಸುತ್ತಿದ್ದಂತೆ ಈ ಬೆಳವಣಿಗೆ ನಡೆದಿದೆ. ಕಳೆದ ವಾರ ಬಿಎಸ್‌ಪಿಯ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ವಜಾಗೊಳಿಸಲ್ಪಟ್ಟಿದ್ದ ಆಕಾಶ್ ಆನಂದ್ ಅವರನ್ನು ಪಕ್ಷದಿಂದಲೂ ವಜಾಗೊಳಿಸಲಾಗಿದೆ ಎಂದು ಮಾಯಾವತಿ ಘೋಷಿಸಿದರು.
ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಮಾಯಾವತಿ, ಆಕಾಶ್ ಆನಂದ್ ಅವರನ್ನು ಇಂದಿನಿಂದ ಪಕ್ಷದಿಂದ ಸಂಪೂರ್ಣವಾಗಿ ಮುಕ್ತಗೊಳಿಸಬೇಕು ಎಂಬುದು ಕಾರ್ಯಕರ್ತರ ಭಾವನೆಯಾಗಿದೆ. ಹೀಗಾಗಿ ಅವರು ಸ್ವತಂತ್ರವಾಗಿರಲು ಬಯಸಿದರೆ ಅದಕ್ಕೆ ಸಂಪೂರ್ಣ ಒಪ್ಪಿಗೆ ಇದೆ, ಅಂದರೆ ಅವರನ್ನು ಈಗ ಬಿಎಸ್‌ಪಿಯಿಂದ ಪೂರ್ಣವಾಗಿ ಮುಕ್ತಗೊಳಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನವೇ ಅಳಿಯ ಆಕಾಶ್ ಆನಂದ್ರನ್ನು ವಜಾಗೊಳಿಸಿರುವುದು ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಕಾದು ನೋಡಬೇಕಿದೆ.
ಅದರದ್ದು ದ್ವಂದ್ವ ಮನಸ್ಥಿತಿ ಎಂದ ಮಾಯಾವತಿ!...
ತಮ್ಮ ಈ ನಡೆಯನ್ನು ಸಮರ್ಥಿಸಿಕೊಂಡಿರುವ ಮಾಜಿ ಸಿಎಂ ಮಾಯಾವತಿ, ಆಕಾಶ್ ಆನಂದ್ ಅವರಿಗೆ ಪಕ್ಷದ ಯಶಸ್ಸಿಗಿಂತ ತಮ್ಮ ಕುಟುಂಬದ ಹಿತಾಸಕ್ತಿಗಳ ಮೇಲೆ ಹೆಚ್ಚಿನ ಒಲವಿತ್ತು. ಇದು ಅವರು ಪಕ್ಷಕ್ಕಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವೇ ಎಂಬ ಅನುಮಾನವನ್ನು ಹುಟ್ಟುಹಾಕಿತು ಎಂದು ಹೇಳಿದರು.
ಆಕಾಶ್ ಆನಂದ್ ಅವರಿಗೆ ಪಕ್ಷದ ಹಾಗೂ ಚಳವಳಿಯ ನೈಜ ಹಿತಾಸಕ್ತಿ ಮತ್ತು ಅದಕ್ಕೆ ಸಂಬಂಧಿಸಿದ ತಮ್ಮ ಸ್ವಂತ ವೃತ್ತಿಜೀವನಕ್ಕಿಂತ ಹೆಚ್ಚಾಗಿ ಸಂಬಂಧಗಳ ಮೇಲಿನ ಒಲವೇ ಹೆಚ್ಚಿದ್ದರೆ, ಅಂತಹ ದ್ವಂದ್ವ ಮನಸ್ಥಿತಿಯಿಂದ ಅವರು ಬಿಎಸ್‌ಪಿ ಪಕ್ಷ ಮತ್ತು ಚಳವಳಿಗೆ ಹೇಗೆ ತಾನೇ ಒಳಿತನ್ನು ಮಾಡಲು ಸಾಧ್ಯ ಎಂಬ ಪ್ರಶ್ನೆ ಏಳುವುದು ಸಹಜ ಎಂದು ಮಾಯಾವತಿ ಸಮರ್ಥಿಸಿಕೊಂಡಿದ್ದಾರೆ.
ಆಕಾಶ್ ಆನಂದ್ ಅವರ ಮಾವ ಅಶೋಕ್ ಸಿದ್ಧಾರ್ಥ್ ಸಕ್ರಿಯ ರಾಜಕಾರಣದಿಂದ ನಿವೃತ್ತರಾಗುವ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದು ತಡವಾಗಿಯಾದರೂ ಸರಿಯಾದ ಹೆಜ್ಜೆ ಎಂದು ಕರೆದಿದ್ದಾರೆ. ಸಿದ್ಧಾರ್ಥ್ ಅವರು ರಾಜಕೀಯದಿಂದ ನಿವೃತ್ತರಾಗುವ ನಿರ್ಧಾರವು ತಡವಾಗಿಯಾದರೂ ಒಳಿತಾಯಿತು ಎಂಬ ಗಾದೆಯಂತೆ ಒಳ್ಳೆಯ ವಿಷಯ ಎಂದು ಹೇಳಿದ ಅವರು, ಬಿಎಸ್‌ಪಿ, ಅದರ ಚಳವಳಿ ಮತ್ತು ಆಕಾಶ್ ಆನಂದ್ ಅವರ ಭವಿಷ್ಯದ ಹಿತದೃಷ್ಟಿಯಿಂದ ಪಕ್ಷವು ಅವರ ನಿವೃತ್ತಿಯನ್ನು ಕೋರಿತ್ತು ಎಂದು ಹೇಳಿದರು.
ಸಿದ್ಧಾರ್ಥ್ ಅವರಿಗೆ ತಮ್ಮ ಅಳಿಯನ ಉಜ್ವಲ ಭವಿಷ್ಯದ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದ್ದಿದ್ದರೆ, ಅವರು ನಿನ್ನೆಯೇ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ತಕ್ಷಣ ಘೋಷಿಸುತ್ತಿದ್ದರು. ಯಾವುದೇ ವಿಳಂಬವಿಲ್ಲದಿದ್ದರೆ ಆಕಾಶ್ ಆನಂದ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಸಾಧ್ಯವಾಗುತ್ತಿತ್ತು ಎಂದು ಬಿಎಸ್‌ಪಿ ಮುಖ್ಯಸ್ಥೆ ಹೇಳಿದರು. ಆದರೆ ಹಾಗೆ ಆಗದಿರುವುದು ಅಶೋಕ್ ಸಿದ್ಧಾರ್ಥ್ ಅವರ ಉದ್ದೇಶಗಳಲ್ಲಿದ್ದ ನ್ಯೂನತೆ ಮತ್ತು ಆಕಾಂಕ್ಷೆಗಳು ಕಮ್ಮಿಯಾಗಿಲ್ಲ, ಬದಲಾಗಿ ಅವು ಈಗಲೂ ಹಾಗೆಯೇ ಇವೆ ಎಂಬುದನ್ನು ನಿರೂಪಿಸುತ್ತದೆ ಎಂದು ಮಾಯಾವತಿ ಆರೋಪಿಸಿದರು.
ಅಶೋಕ್ ಸಿದ್ಧಾರ್ಥ್ ಭಾವುಕ ಪೋಸ್ಟ್!
ಮಾಜಿ ರಾಜ್ಯಸಭಾ ಸದಸ್ಯ ಅಶೋಕ್ ಸಿದ್ಧಾರ್ಥ್ ಅವರು ಸಾಮಾಜಿಕ ಜೀವನದಿಂದ ನಿವೃತ್ತಿ ಘೋಷಿಸಿದರು. ಮಾಯಾವತಿಯವರು ತಮ್ಮ ಸಂಬಂಧಿ ಹಾಗೂ ಸಿದ್ಧಾರ್ಥ್ ಅವರ ಅಳಿಯ ಆಕಾಶ್ ಆನಂದ್ ಅವರಿಗೆ ಮತ್ತೆ ಪಕ್ಷದ ಜವಾಬ್ದಾರಿಗಳನ್ನು ನೀಡುವುದಕ್ಕೆ, ಅಶೋಕ್ ಸಿದ್ಧಾರ್ಥ್ ಅವರ ರಾಜಕೀಯ ನಿವೃತ್ತಿಯನ್ನೇ ಷರತ್ತನ್ನಾಗಿ ವಿಧಿಸಿದ ನಂತರ ಅವರು ಈ ನಿರ್ಧಾರ ತಳೆದರು.
ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಸಿದ್ಧಾರ್ಥ್, ತಾವು ಈ ಕ್ಷಣದಿಂದಲೇ ರಾಜಕೀಯ ಮತ್ತು ಸಾಮಾಜಿಕ ಜೀವನದಿಂದ ನಿವೃತ್ತಿಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಎಂದಾದರೂ ಮಾಯಾವತಿ ಅವರಿಗಾಗಿ ಪ್ರಾಣ ನೀಡಬೇಕಾಗಿ ಬಂದರೂ ಅದು ತಮಗೆ ಹೆಮ್ಮೆಯ ವಿಷಯ ಎಂದಿದ್ದಾರೆ. ಅತ್ಯಂತ ಭಾವನಾತ್ಮಕವಾಗಿ ಪೋಸ್ಟ್ ಮಾಡಿರುವ ಸಿದ್ಧಾರ್ಥ್, ಮಾಯಾವತಿಯವರ ಆದೇಶದ ಮುಂದೆ ಪ್ರತಿಯೊಂದು ಸಂಬಂಧವೂ ನಗಣ್ಯ ಎಂದು ಹೇಳಿದ್ದಾರೆ. ನನ್ನಂತ ಸಣ್ಣ ಕಾರ್ಯಕರ್ತನನ್ನು ನಿಮ್ಮ ಕುಟುಂಬದ ಸದಸ್ಯನನ್ನಾಗಿ ಮಾಡಿದ್ದೀರಿ. ಈ ಸಾಲವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ಎಂದು ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ತಾವು ಎಂದಿಗೂ ಬಿಎಸ್‌ಪಿ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡಿಲ್ಲ ಎಂದಿರುವ ಸಿದ್ಧಾರ್ಥ್, ಆಕಾಶ್ ಆನಂದ್ ಅವರ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂಬ ಮಾಯಾವತಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, ತಮ್ಮ ಅಳಿಯನಿಗೆ ಸಲಹೆ ನೀಡುವುದು ಎರಡನೇ ಮಾತು, ಕಳೆದ ಕೆಲವು ತಿಂಗಳುಗಳಿಂದ ಅವರನ್ನು ಭೇಟಿಯಾಗಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ(ಏಜೆನ್ಸೀಸ್).