ಸಾಂದರ್ಭಿಕ ಚಿತ್ರ 
ದೇಶ

ಒಡಿಶಾದಲ್ಲಿ ಗುಟ್ಕಾ, ಪಾನ್ ಮಸಾಲಾ ಸಂಪೂರ್ಣ ಬ್ಯಾನ್: ತಂಬಾಕು ಮುಕ್ತ ರಾಜ್ಯದತ್ತ ಸರ್ಕಾರ ದಿಟ್ಟ ಹೆಜ್ಜೆ! Tabacco

ಪ್ರಮುಖ ಮುಖ್ಯಾಂಶಗಳು

  • ರಾಜ್ಯಾದ್ಯಂತ ತಂಬಾಕು ಉತ್ಪನ್ನಗಳನ್ನು ಬ್ಯಾನ್​ ಮಾಡಿದ ಓಡಿಶಾ ಸರ್ಕಾರ
  • ತಂಬಾಕು ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಸಾಗಣೆ, ವ್ಯಾಪಾರ ಮತ್ತು ಮಾರಾಟ ನಿಷೇಧ
  • ಜನರು ತಂಬಾಕು ಉತ್ಪನ್ನಗಳ ತಯಾರಿಸುವ, ಸಂಗ್ರಹ ಮಾಡುವ, ಮಾರಾಟ ಮಾಡುವ ಅಥವಾ ಸೇವಸಲು ನಿರ್ಬಂಧ
ಒಡಿಶಾ: ಒಡಿಶಾ ಸರ್ಕಾರವು ರಾಜ್ಯಾದ್ಯಂತ ತಂಬಾಕು (Tabacco) ಅಥವಾ ನಿಕೋಟಿನ್ ಹೊಂದಿರುವ ಎಲ್ಲಾ ಉತ್ಪನ್ನಗಳ ಮೇಲೆ ನಿಷೇಧವನ್ನು ಘೋಷಿಸಿದೆ. ಭಾರತದ ಸುಪ್ರೀಂ ಕೋರ್ಟ್ ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದ (FSSAI) ನಿರ್ದೇಶನಗಳನ್ನು ಅನುಸರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006 ರ ಭಾಗವಾಗಿರುವ ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ಮಾರಾಟದ ಮೇಲಿನ ನಿಷೇಧ ಮತ್ತು ನಿರ್ಬಂಧಗಳು) ನಿಯಮಗಳು, 2011 ರ ನಿಯಮ 2.3.4 ರ ಅಡಿಯಲ್ಲಿ, ಎಲ್ಲಾ ಪ್ರಕಾರದ ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಸಾಗಣೆ, ವ್ಯಾಪಾರ ಮತ್ತು ಮಾರಾಟವನ್ನು ನಿಷೇಧಿಸಿದೆ.
ಈ ನಿಷೇಧವು ಗುಟ್ಕಾ, ಪಾನ್ ಮಸಾಲಾ, ಜರ್ದಾ, ಖೈನಿ ಮತ್ತು ತಂಬಾಕು ಅಥವಾ ನಿಕೋಟಿನ್ ಹೊಂದಿರುವ ಯಾವುದೇ ಇತರ ಆಹಾರ ಪದಾರ್ಥಗಳನ್ನು ಒಳಗೊಂಡಿದೆ. ಇದು ಎಲ್ಲಾ ರೂಪಗಳಿಗೆ ಅನ್ವಯಿಸುತ್ತಿದ್ದು, ಅಗಿಯಬಹುದಾದ, ಹೊಗೆಯ ಮೂಲಕ ಸೇವಿಸುವ, ಸುವಾಸನೆಯ, ಪರಿಮಳಯುಕ್ತ, ಪ್ಯಾಕ್ ಮಾಡಿದ ಅಥವಾ ಪ್ಯಾಕ್ ಮಾಡದ ಸರ್ವ ಬಗೆಯ ತಂಬಾಕು ಉತ್ಪನ್ನಗಳನ್ನು ಓಡಿಶಾ ಸರ್ಕಾರ ನಿಷೇಧ ಹೇರಿದೆ.
ಜನರು ತಂಬಾಕು ಉತ್ಪನ್ನಗಳನ್ನು ತಯಾರಿಸುವ, ಸಂಗ್ರಹ ಮಾಡುವ, ಮಾರಾಟ ಮಾಡುವ ಅಥವಾ ಸೇವಸುವ ನಿರ್ಬಂಧವನ್ನು ಈ ನಿಷೇದಾಜ್ಞೆ ಒಳಗೊಂಡಿದೆ. ಈ ನಿರ್ಬಂಧವು ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಬಲಪಡಿಸುವ ಆಶಯವನ್ನು ಹೊಂದಿದ್ದು, ಇದರ ಉಲ್ಲಂಘನೆಯು ಕಠಿಣ ಶಿಕ್ಷೆಗೆ ಗುರಿಮಾಡಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಪದಾರ್ಥಗಳು ಗಂಟಲು ಕ್ಯಾನ್ಸರ್, ಬಾಯಿಯ ಕ್ಯಾನ್ಸರ್ ಮತ್ತು ಇತರ ಗಂಭೀರ ಆಂತರಿಕ ಅಂಗಗಳ ಕಾಯಿಲೆಗಳಿಗೆ ಪ್ರಮುಖ ಕಾರಣವೆಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಈ ರಾಸಾಯನಿಕಗಳು ಆರೋಗ್ಯದ ಮೇಲೆ ದೀರ್ಘಕಾಲೀನ ಋಣಾತ್ಮಕ ಪರಿಣಾಮಗಳನ್ನು ಬೀರುವುದರಿಂದ, ಮಕ್ಕಳು ಮತ್ತು ಯುವಜನರನ್ನು ಈ ತಂಬಾಕಿನ ಜಾಲದಿಂದ ತಪ್ಪಿಸಲು ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದು ಓಡಿಶಾದ ಅಧಿಕಾರಿಗಳು ತಿಳಿಸಿದ್ದಾರೆ,(ಏಜನ್ಸೀಸ್​).