ಸಿಎಂ ವಿಜಯ್ ಮತ್ತು ಮಾಜಿ ಸಿಎಂ ಎಂ.ಕೆ.ಸ್ಟಾಲಿನ್ 
ದೇಶ

ತಮಿಳುನಾಡಿನಲ್ಲಿ ಈಗ ವಿದ್ಯುತ್ ಕಡಿತ, ಮಚ್ಚಿನ ದಾಳಿಗಳ ನಡುವೆ ಮಾತ್ರ ಸ್ಪರ್ಧೆ: ಟಿವಿಕೆ ಸರ್ಕಾರದ ವಿರುದ್ಧ ಎಂ.ಕೆ.ಸ್ಟಾಲಿನ್ ವ್ಯಂಗ್ಯ | M K Stalin

ಚೆನ್ನೈ: ತಮಿಳುನಾಡಿನ ಟಿವಿಕೆ ಸರ್ಕಾರದ ಆಡಳಿತಾವಧಿಯಲ್ಲಿ ಈಗ ಕೇವಲ ಎರಡು ವಿಷಯಗಳ ನಡುವೆ ಸ್ಪರ್ಧೆ ಇದೆ, ಒಂದು ವಿದ್ಯುತ್ ಕಡಿತ ಮತ್ತೊಂದು ಮಚ್ಚಿನಿಂದ ದಾಳಿ. ಎರಡರಲ್ಲಿ ಯಾವುದು ಹೆಚ್ಚು ಎಂಬುದರ ಮೇಲೆ ಸ್ಪರ್ಧೆ ಇದೆ ಎಂದು ಡಿಎಂಕೆ ಅಧ್ಯಕ್ಷ ಮತ್ತು ಮಾಜಿ ಸಿಎಂ ಎಂ.ಕೆ. ಸ್ಟಾಲಿನ್(M K Stalin) ವ್ಯಂಗ್ಯವಾಡಿದ್ದಾರೆ.
ಶನಿವಾರ(ಸೆ. 19) ಚೆನ್ನೈನ ಡಿಎಂಕೆ ಕಚೇರಿ ಅಣ್ಣಾ ಅರಿವಾಲಯದಲ್ಲಿ ನಡೆದ ಪಕ್ಷದ 'ಮುಪ್ಪೆರುಮ್ ವಿಝಾ' ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಈ ಎಲ್ಲ ದೌರ್ಜನ್ಯಗಳಿಗೆ ಸಾಕ್ಷಿಯಾಗಲು ನಾನು ವಿಧಾನಸಭೆಯಲ್ಲಿ ಇಲ್ಲದಿರುವಂತೆ ಮಾಡಿದ ಕೊಳತ್ತೂರಿನ ಜನರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ಡಿಎಂಕೆ ತನ್ನ ಪ್ರಮುಖ ರಾಜಕೀಯ ಎದುರಾಳಿಯನ್ನು ಸರಿಯಾಗಿ ಗುರುತಿಸಿ ಅದಕ್ಕೆ ತಕ್ಕಂತೆ ಕೆಲಸ ಮಾಡಿದ್ದರೆ, ಪಕ್ಷದ ಸೋಲನ್ನು ತಪ್ಪಿಸಬಹುದಿತ್ತು. ಡಿಎಂಕೆಯೂ ತನ್ನ ರಾಜಕೀಯ ಪಯಣದಲ್ಲಿ ಹಲವು ಗೆಲುವು ಮತ್ತು ಸೋಲುಗಳನ್ನು ಕಂಡಿದೆ. ಅದು ಡಿಎಂಕೆಯ ಇತಿಹಾಸ ಮತ್ತು ಶಕ್ತಿ ಎಂದಿದ್ದಾರೆ.
ಮುಂದುವರೆದು ಸಿಎಂ ವಿಜಯ್ ವಿರುದ್ಧ ಕಿಡಿಕಾರಿದ ಅವರು, ಮುಖ್ಯಮಂತ್ರಿಗಳೇ, ನೀವು ಲಂಡನ್‌ಗೆ ಏಕೆ ಹೋಗಿದ್ದೀರಿ? ತಮಿಳುನಾಡಿಗೆ ಯಾವ ಹೂಡಿಕೆಗಳನ್ನು ತಂದಿದ್ದೀರಿ? ಲಂಡನ್‌ಗೆ ಹೋಗಿ ಭಾರತೀಯ ಕಂಪನಿಯೊಂದರೊಂದಿಗೆ ಒಪ್ಪಂದಗಳಿಗೆ ಸಹಿ ಹಾಕುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.

ಇನ್ನು ಮುಂದೆ ಚಲನಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಅವರು ಈ ಹಿಂದೆ ಹೇಳಿದ್ದರು, ಆದರೆ ಈಗಲೂ ಸಾರ್ವಜನಿಕರ ಮುಂದೆ ಅಭಿನಯಿಸುವುದನ್ನು ಮುಂದುವರಿಸಿದ್ದಾರೆ. ಹಿಂದೆ ಸ್ಥಳೀಯವಾಗಿ ಚಿತ್ರೀಕರಣ ನಡೆಯುತ್ತಿತ್ತು, ಈಗ ವಿದೇಶದಲ್ಲಿ ಚಿತ್ರೀಕರಣ ನಡೆಯುತ್ತಿದೆ ಎಂದು ಅಪಹಾಸ್ಯ ಮಾಡಿದ್ದಾರೆ.
ಇದೇ ವೇಳೆ ಮೀಸಾ ಅಡಿ ನನ್ನ ಬಂಧನ ಬಗ್ಗೆ ಮಾತನಾಡುವವರಿಗೆ ನಾನು ಒಂದೇ ಒಂದು ಮಾತನ್ನು ಹೇಳಬಯಸುತ್ತೇನೆ. ನನ್ನ ಬಂಧನದ ಬಗ್ಗೆ ನಿಮ್ಮಲ್ಲಿ ಯಾರಿಗೂ ನಾನು ಸಾಬೀತುಪಡಿಸುವ ಅಗತ್ಯವಿಲ್ಲ. ನನ್ನ ತ್ಯಾಗಕ್ಕೆ ಅಂಕಗಳನ್ನು ನೀಡುವ ಹಕ್ಕು ನಿಮ್ಮಲ್ಲಿ ಯಾರಿಗೂ ಇಲ್ಲ ಎಂದು ವಿರೋಧಿಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ (ಏಜೆನ್ಸೀಸ್).