Company Fires Woman ಸಾಂದರ್ಭಿಕ ಚಿತ್ರ
Company Fires Woman: ಯಾವುದೇ ಪೂರ್ವಸೂಚನೆ ಅಥವಾ ಸ್ಪಷ್ಟ ತರಬೇತಿ ನೀಡದೆ, ಪ್ರೊಬೇಷನ್ (ಶಿಷ್ಯಾವಧಿ) ಅವಧಿ ಮುಗಿಯುತ್ತಿದ್ದಂತೆ ಉದ್ಯೋಗಿಯೊಬ್ಬರನ್ನು ಕೆಲಸದಿಂದ ವಜಾಗೊಳಿಸಿದ ಸಂಸ್ಥೆಗೆ ಎಂಪ್ಲಾಯ್‌ಮೆಂಟ್ ಕ್ಲೇಮ್ಸ್ ಟ್ರಿಬ್ಯೂನಲ್ (ECT) ಬಿಸಿ ಮುಟ್ಟಿಸಿದೆ. ಈ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು, ಉದ್ಯೋಗಿಯನ್ನು ತಕ್ಷಣವೇ ಮತ್ತು ಅಸಮಂಜಸವಾಗಿ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ತೀರ್ಪು ನೀಡಿದ್ದು, ಕಾನೂನಿನಡಿಯಲ್ಲಿ ಸಿಗುವ ಗರಿಷ್ಠ ಪರಿಹಾರವಾದ ಸುಮಾರು 19 ಲಕ್ಷ ರೂಪಾಯಿಯನ್ನು ಮಹಿಳೆಗೆ ನೀಡುವಂತೆ ಆದೇಶಿಸಿದ್ದಾರೆ.
ಏನಿದು ಪ್ರಕರಣ?
ಮಹಿಳೆಯೊಬ್ಬರು 2025ರ ಏಪ್ರಿಲ್‌ನಲ್ಲಿ ಸಂಸ್ಥೆಯೊಂದಕ್ಕೆ ಆಡಿಟ್ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು. ನಿಯಮದಂತೆ ಅವರಿಗೆ ಆರು ತಿಂಗಳ ಶಿಷ್ಯಾವಧಿ ಅವಧಿಯನ್ನು ನಿಗದಿಪಡಿಸಲಾಗಿತ್ತು. ಆದರೆ, ಪ್ರೊಬೇಷನ್ ಮುಗಿಯುವ ಹಂತದಲ್ಲಿ ಕಾರ್ಯಕ್ಷತೆ ಸರಿಯಾಗಿಲ್ಲ ಎಂಬ ಕಾರಣ ನೀಡಿ ಕಂಪನಿಯು ಅವರನ್ನು ದಿಢೀರನೆ ಕೆಲಸದಿಂದ ತೆಗೆದುಹಾಕಿತ್ತು.
ಇದನ್ನು ಪ್ರಶ್ನಿಸಿ ಮಹಿಳೆಯು ಎಂಪ್ಲಾಯ್‌ಮೆಂಟ್ ಕ್ಲೇಮ್ಸ್ ಟ್ರಿಬ್ಯೂನಲ್ ಮೆಟ್ಟಿಲೇರಿದ್ದರು. ತಮ್ಮ ಸೇವಾವಧಿಯಲ್ಲಿ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ ಕಂಪನಿಯು ಲಿಖಿತವಾಗಲಿ ಅಥವಾ ಮೌಖಿಕವಾಗಲಿ ಯಾವುದೇ ರೀತಿಯಲ್ಲೂ ಎಚ್ಚರಿಕೆ ನೀಡಿರಲಿಲ್ಲ. ಅಲ್ಲದೇ ತಮಗೆ ತಿಳಿಸದೇ ಇರುವ ಮೌಲ್ಯಮಾಪನ ಮಾನದಂಡಗಳ ಆಧಾರದ ಮೇಲೆ ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯದಲ್ಲಿ ಆರೋಪಿಸಿದ್ದಾರೆ.
ಸಂಸ್ಥೆಯ ವಾದಕ್ಕೆ ಸಿಗದ ಪುರಾವೆ
ಉದ್ಯೋಗಿಯ ವಾದವನ್ನು ಪುಷ್ಟೀಕರಿಸಿದ ಟ್ರಿಬ್ಯೂನಲ್ ಮ್ಯಾಜಿಸ್ಟ್ರೇಟ್ ಜೋಯಲ್ ಟಾನ್, 'ಕಾರ್ಯಕ್ಷಮತೆ ಕೊರತೆ' ಎಂಬ ಕಂಪನಿಯ ವಾದವನ್ನು ತಳ್ಳಿಹಾಕಿದರು. ಕಂಪನಿಯು ತನ್ನ ಶಿಷ್ಯಾವಧಿ ನೀತಿಯ ಪ್ರಕಾರ ಉದ್ಯೋಗಿಗೆ ವಾರ್ಷಿಕ ಅಥವಾ ನಿಯಮಿತ ಮೌಲ್ಯಮಾಪನ ನಡೆಸಿಲ್ಲ. ಮೌಲ್ಯಮಾಪನ ಅಂಕಗಳು ಮತ್ತು ರೇಟಿಂಗ್ ಸಿಸ್ಟಮ್ ಬಗ್ಗೆ ಪ್ರಾರಂಭದಲ್ಲಿ ವಿವರಣೆ ನೀಡಿರಲಿಲ್ಲ ಎಂಬುದನ್ನು ಉದ್ಯೋಗಿಯ ಮೇಲಾಧಿಕಾರಿಯೇ ಒಪ್ಪಿಕೊಂಡಿದ್ದಾರೆ.
ಉದ್ಯೋಗಿಯ ಕೆಲಸದ ಗುಣಮಟ್ಟದ ಬಗ್ಗೆ ಯಾವುದೇ ಗಂಭೀರ ದೂರುಗಳಿಲ್ಲದಿದ್ದರೂ, ಕೇವಲ ಆಡಳಿತಾತ್ಮಕ ಮತ್ತು ಸಣ್ಣಪುಟ್ಟ ಪ್ರಕ್ರಿಯೆಯ ವಿಚಾರಗಳನ್ನು ಎತ್ತಿಹಿಡಿದು ವಜಾಗೊಳಿಸಿದ್ದು ಸರಿಯಲ್ಲ. ಸ್ಪಷ್ಟವಾಗಿ ತಿಳಿಸದಿರುವ ಕಾರ್ಯಕ್ಷಮತೆಯ ಮಾನದಂಡಗಳನ್ನು ಉದ್ಯೋಗಿ ಪೂರೈಸಿಲ್ಲ ಎಂದು ನೆಪ ಒಡ್ಡಿ ಕೆಲಸದಿಂದ ತೆಗೆದುಹಾಕುವುದು ಅನುಚಿತ ಎಂದು ಮ್ಯಾಜಿಸ್ಟ್ರೇಟ್ ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆಯು ತಮ್ಮ ದೂರಿನಲ್ಲಿ, ತಮಗೆ ಕೊರಿಯನ್ ಭಾಷೆ ಬರುವುದಿಲ್ಲ ಎಂಬ ಕಾರಣಕ್ಕೆ ತಾರತಮ್ಯ ಮಾಡಿದ್ದಾರೆ ಮತ್ತು ಕಂಪನಿಯ ಆಂತರಿಕ ಆಡಿಟಿಂಗ್ ಲೋಪಗಳನ್ನು ಪ್ರಶ್ನಿಸಿದ್ದಕ್ಕೆ ತಮ್ಮನ್ನು ಗುರಿಮಾಡಲಾಗಿದೆ ಎಂದು ಆರೋಪಿಸಿದ್ದರು. ಆದರೆ, ಈ ಆರೋಪಗಳಿಗೆ ಸೂಕ್ತ ಪುರಾವೆಗಳಿಲ್ಲದ ಕಾರಣ ಟ್ರಿಬ್ಯೂನಲ್ ಇವುಗಳನ್ನು ವಜಾಗೊಳಿಸಿತು. ಕೇವಲ ಅಸಮಂಜಸ ವಜಾವನ್ನು ಮಾತ್ರ ಪರಿಗಣಿಸಿತು.
ಗರಿಷ್ಠ ಪರಿಹಾರ ಘೋಷಣೆ
ತಿಂಗಳಿಗೆ 11,500 ಸಿಂಗಾಪುರ್ ಡಾಲರ್ ವೇತನ ಪಡೆಯುತ್ತಿದ್ದ ಈ ಮಹಿಳೆಗೆ ನಿಯಮಾವಳಿ ಪ್ರಕಾರ 34,500 ಸಿಂಗಾಪುರ್ ಡಾಲರ್ ನಷ್ಟಪರಿಹಾರ ಸಿಗಬೇಕಿತ್ತು. ಆದರೆ, ಇಸಿಟಿ (ECT) ಕಾಯ್ದೆಯಡಿ ಪರಿಹಾರದ ಗರಿಷ್ಠ ಮಿತಿ 30,000 ಸಿಂಗಾಪುರ್ ಡಾಲರ್ (ಸುಮಾರು 19 ಲಕ್ಷ ರೂ.) ಆಗಿರುವುದರಿಂದ ಆ ಪೂರ್ಣ ಮೊತ್ತವನ್ನು ಅವರಿಗೆ ನೀಡಲು ಆದೇಶಿಸಲಾಗಿದೆ.
ಅಲ್ಲದೆ, ಶಾಸನಬದ್ಧ ಮಿತಿಯಿಲ್ಲದಿದ್ದರೆ ವಜಾಗೊಳಿಸಿದ್ದರಿಂದ ಉಂಟಾದ ಮಾನಸಿಕ ಕಿರುಕುಳಕ್ಕಾಗಿ ಹೆಚ್ಚುವರಿಯಾಗಿ ಎರಡು ತಿಂಗಳ ವೇತನ ಸೇರಿದಂತೆ ಒಟ್ಟು 57,500 ಸಿಂಗಾಪುರ್ ಡಾಲರ್ ನೀಡಬೇಕು ಎಂದು ಮ್ಯಾಜಿಸ್ಟ್ರೇಟ್ ಉಲ್ಲೇಖಿಸಿದ್ದಾರೆ. ಸ್ಪಷ್ಟಪಡಿಸದ ಮಾನದಂಡಗಳನ್ನು ಇಟ್ಟುಕೊಂಡು ಉದ್ಯೋಗಿಗಳನ್ನು ದಿಢೀರನೆ ತೆಗೆದುಹಾಕುವ ಸಂಸ್ಥೆಗಳಿಗೆ ಈ ತೀರ್ಪು ಪ್ರಮುಖ ಎಚ್ಚರಿಕೆಯಾಗಿದೆ (ಏಜೆನ್ಸೀಸ್).