ಸಂಸದೆ ಕನಿಮೋಳಿ ಮತ್ತು ಎ.ಆರ್.ರೆಹಮಾನ್
ಚೆನ್ನೈ: ಕೋಮುವಾದ ಹೆಚ್ಚಳದ ಕಾರಣ ಕಳೆದ 8-10 ವರ್ಷಗಳಲ್ಲಿ ಬಾಲಿವುಡ್ನಲ್ಲಿ ನನಗೆ ಅಷ್ಟೊಂದು ಕೆಲಸ ಸಿಕ್ಕಿಲ್ಲ ಎಂಬ ಖ್ಯಾತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್(A R Rahman) ಹೇಳಿಕೆ ವಿವಾದದ ನಡುವೆ ತಮಿಳುನಾಡಿನ ಆಡಳಿತರೂಢ ಡಿಎಂಕೆ ನಾಯಕಿ ಮತ್ತು ಸಂಸದೆ ಕನಿಮೋಳಿ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಂಸದೆ ಕನಿಮೋಳಿ, ಆಸ್ಕರ್ ವಿಜೇತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಅವರ ಬೆಂಬಲಕ್ಕೆ ನಿಲ್ಲುತ್ತೇನೆ. ಧರ್ಮ, ಜಾತಿ ಹಾಗೂ ಭಾಷೆಯನ್ನು ಮೀರಿ ಕಲೆಯನ್ನು ಹೊಂದಿದ ಸಂಗೀತಗಾರರನ್ನು ಗುರಿಯಾಗಿಸುವುದು, ಅವರ ವಿರುದ್ಧದ ಟೀಕೆಗಳು ಕಳವಳಕಾರಿ. ದೇಶದಲ್ಲಿ ಅಧಿಕಾರದಲ್ಲಿರುವವರ ಮೌನವು ಆಘಾತಕಾರಿ.
ರೆಹಮಾನ್ ಭಾರತೀಯ ಸಂಗೀತವನ್ನು ಜಾಗತಿಕ ವೇದಿಕೆಗೆ ಕೊಂಡೊಯ್ದ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳ ಅಗ್ರಗಣ್ಯ ರಾಯಭಾರಿ. ಅವರು ಗೌರವ ಮತ್ತು ಕೃತಜ್ಞತೆಗೆ ಅರ್ಹರು. ಪೂರ್ವಗ್ರಹ ಮತ್ತು ದ್ವೇಷಕ್ಕೆ ಅಲ್ಲ. ಪ್ರಜಾಪ್ರಭುತ್ವ ಮತ್ತು ಬಹುತ್ದ ಸಮಾಜದಲ್ಲಿ ಅಂತ ಸಹಿಷ್ಣುತೆಗೆ ಯಾವುದೇ ಸ್ಥಾನವಿಲ್ಲ ಎಂದು ಹೇಳಿದ್ದಾರೆ.
ಎ.ಆರ್.ರೆಹಮಾನ್ ಹೇಳಿದ್ದೇನು?
ಬಿಬಿಸಿ ಏಷ್ಯನ್ ಚಾನಲ್ ಹರುನ್ ರಷೀದ್ ಅವರಿಗೆ ಎ.ಆರ್.ರೆಹಮಾನ್ ಸಂದರ್ಶನ ನೀಡಿದ್ದು, ಅದರಲ್ಲಿ ರಾಮಾಯಣ ಸಿನಿಮಾಗೆ ಸಂಗೀತ ನೀಡುವಲ್ಲಿ ನಿಮ್ಮ ಧಾರ್ಮಿಕ ನಂಬಿಕೆಗಳು ಪಾತ್ರ ವಹಿಸಿವೆಯೇ ಎಂಬ ಪ್ರಶ್ನೆಗೆ ಅವರು ಧೀರ್ಘವಾಗಿ ಉತ್ತರ ನೀಡಿದ್ದರು.
ನಾನು ಬ್ರಾಹ್ಮಣ ಶಾಲೆಯಲ್ಲಿ ಓದಿದ್ದೇನೆ. ರಾಮಾಯಣ ಮತ್ತು ಮಹಾಭಾರತದ ಕತೆಗಳನ್ನು ಪ್ರತಿ ವರ್ಷ ಹೇಳಿಕೊಡಲಾಗುತ್ತಿತ್ತು. ಆದ್ದರಿಂದ, ನನಗೆ ಕತೆಗಳು ಚೆನ್ನಾಗಿ ತಿಳಿದಿವೆ. ಈ ಕತೆಗಳು ಮಾನವ ದಯೆ, ಉನ್ನತ ಆದರ್ಶಗಳು ಮತ್ತು ಎಲ್ಲದರ ಬಗ್ಗೆ ತಿಳಿಸುತ್ತದೆ. ಜನರು ಏನೇ ವಾದಿಸಬಹುದು ಆದರೆ, ನಾನು ಎಲ್ಲ ಒಳ್ಳೆಯ ವಿಷಯಗಳನ್ನು ಗೌರವಿಸುತ್ತೇನೆ ಮತ್ತೆ ಒಳ್ಳೆಯ ವಿಷಯಗಳನ್ನು ಕಲಿತರೂ ತಪ್ಪಿಲ್ಲ ಎಂದಿದ್ದರು.
ಮುಂದುವರೆದು, ನಾನು ತೊಂಭತ್ತರ ದಶಕದಲ್ಲಿ ಕೆಲಸ ಆರಂಭಿಸಿದಾಗ ಯಾವುದೇ ಧಾರ್ಮಿಕ ಪೂರ್ವಾಗ್ರಹಗಳಿರಲಿಲ್ಲ. ಆದರೆ ಕಳೆದ 8 ವರ್ಷಗಳಲ್ಲಿ ಹಿಂದಿ ಚಿತ್ರಗಳಲ್ಲಿ ನನಗೆ ತುಂಬಾ ಕಡಿಮೆ ಕೆಲಸ ಬಂದಿದೆ. ಇದಕ್ಕೆ ಕಾರಣ ನನ್ನ ಪ್ರಯತ್ನದ ಕೊರತೆಯಲ್ಲ ಮತ್ತು ನಾನು ಕೆಲಸಕ್ಕಾಗಿ ಯಾರ ಬಳಿಯೂ ಹೋಗುವುದಿಲ್ಲ. ನನಗೆ ಕಡಿಮೆ ಕೆಲಸ ಸಿಗಲು ಅಧಿಕಾರದ ಹಸ್ತಾಂತರ ಕಾರಣ ಇರಬಹುದು ಅಥವಾ ಕೋಮು ಅಂಶಗಳು ಕೂಡ ಪ್ರಭಾವ ಬೀರಿರಬಹುದು ಎನ್ನುವ ಮೂಲಕ ತಾನು ಮುಸ್ಲಿಂ ಆಗಿರುವುದರಿಂದ ತನಗೆ ಅವಕಾಶಗಳು ಕಡಿಮೆ ಎಂಬ ಅರ್ಥದಲ್ಲಿ ರೆಹಮಾನ್ ಹೇಳಿದ್ದರು.
ಬಳಿಕ ವಿವಾದ ಆಗುತ್ತಿದ್ದಂತೆ ನಾನು ಸಂದರ್ಶನಲ್ಲಿ ಹೇಳಿದ ಮಾತಗಳು ಯಾರ ಭಾವನೆಗಳಿಗೂ ನೋವುಂಟುಮಾಡುವ ಉದ್ದೇಶ ಹೊಂದಿರಲಿಲ್ಲ, ತಮ್ಮ ಕೆಲಸದ ಮೂಲಕ ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದು ನನ್ನ ಜೀವಮಾನದ ಬದ್ಧತೆಯಾಗಿದೆ ಎಂದು ಸ್ಪಷ್ಟನೆ ನೀಡಿದ್ದರು (ಏಜನ್ಸೀಸ್).