Asmita Dey: 2026ರ ಗ್ಲಾಸ್ಗೋದಲ್ಲಿ ನಡೆದ ಮಹಿಳೆಯರ 48 ಕೆಜಿ ವಿಭಾಗದ ಜೂಡೋ ಫೈನಲ್‌ನಲ್ಲಿ ಕೆನಡಾದ ಹೈಡಿ ಕ್ವಾಚ್ ಅವರನ್ನು ಸೋಲಿಸಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಜೂಡೋ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಅಸ್ಮಿತಾ ಡೇ ಇತಿಹಾಸ ನಿರ್ಮಿಸಿದ್ದಾರೆ.
ಈ ಹಿಂದೆ ಯಾವುದೇ ಕ್ರೀಡಾಕೂಟದಲ್ಲಿ ಜೂಡೋ ವಿಭಾಗದಲ್ಲಿ ಭಾರತೀಯ ಕ್ರೀಡಾಳುಗಳು ಯಾವುದೇ ಅಗ್ರ ಪ್ರಶಸ್ತಿಯನ್ನು ಗೆದ್ದಿಲ್ಲದ ಕಾರಣ, 23 ವರ್ಷದ ಅಸ್ಮಿತಾ ಡೇ ಇದೇ ಮೊದಲ ಬಾರಿಗೆ ಚಿನ್ನ ಗೆಲ್ಲುವ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಜೂಡೋ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
1990ರಲ್ಲಿ ಆಕ್ಲೆಂಡ್‌ನಲ್ಲಿ ನಡೆದ CWGನಲ್ಲಿ ಜೂಡೋವನ್ನು ಪದಕ ಕ್ರೀಡೆಯಾಗಿ ಪರಿಚಯಿಸಿದಾಗಿನಿಂದ, ಭಾರತೀಯ ಜೂಡೋ ಪಟುಗಳು ಎಲ್ಲಾ ಆವೃತ್ತಿಗಳಲ್ಲಿ ಪದಕಗಳನ್ನು ಗೆದ್ದಿದ್ದರೂ, ಆದರೆ ಎಂದಿಗೂ ವೇದಿಕೆಯ ಉನ್ನತ ಸ್ಥಾನವನ್ನು ಅಲಂಕರಿಸುವ ಚಿನ್ನದ ಪದಕವನ್ನು ಗಳಿಸಿರಲಿಲ್ಲ.
ಫೈನಲ್ ಪಂದ್ಯ ಆರಂಭದಿಂದಲೂ ತೀವ್ರ ಪೈಪೋಟಿಯಿಂದ ಕೂಡಿತ್ತು. ಕ್ವಾಚ್ ಅವರ ಎಡಗೈಗೆ ಆರ್ಮ್-ಲಾಕ್ ಪ್ರಯತ್ನ ಮಾಡುವ ಮೂಲಕ ಅಸ್ಮಿತಾ ಆರಂಭದಲ್ಲಿ ಬೆದರಿಕೆ ಹಾಕಿದರು. ಆದರೆ ಕೆನಡಾದ ಆಟಗಾರ್ತಿ ಸಕಾಲದಲ್ಲಿ ಪಾರಾದರು. ನಂತರ ಕ್ವಾಚ್ ಯುಕೊ ಮೂಲಕ ಗೋಲು ಗಳಿಸಿದರೆ, ಅಸ್ಮಿತಾ ಕೂಡ ಶಿಡೋ ಪೆನಾಲ್ಟಿ ಪಡೆದರು. ಹಿಂದೆ ಸರಿಯಲು ನಿರಾಕರಿಸಿದ ಭಾರತೀಯ ಆಟಗಾರ್ತಿ ತನ್ನದೇ ಆದ ಯುಕೊ ಮೂಲಕ ಸ್ಕೋರ್‌ಗಳನ್ನು 1-1ರಿಂದ ಸಮಬಲಗೊಳಿಸಿದರು, ಇದು ಉದ್ವಿಗ್ನ ಅಂತ್ಯಕ್ಕೆ ಕಾರಣವಾಯಿತು.
ನಿಗದಿತ ಸಮಯದಲ್ಲಿ ಜೂಡೋಕರಿಬ್ಬರಿಗೂ ನಿರ್ಣಾಯಕ ಸ್ಕೋರ್ ಸಿಗಲಿಲ್ಲ, ಇದರಿಂದಾಗಿ ಸ್ಪರ್ಧೆಯು ಗೋಲ್ಡನ್ ಸ್ಕೋರ್‌ಗೆ ತಲುಪಿತು. ಒತ್ತಡದ ನಡುವೆಯೂ ಗಮನಾರ್ಹವಾದ ಶಾಂತತೆಯನ್ನು ಪ್ರದರ್ಶಿಸಿದ ಅಸ್ಮಿತಾ ಗೆಲುವಿನ ದಾಳಿಯನ್ನು ಪ್ರಾರಂಭಿಸಿ ಯುಕೊ ಗಳಿಸಿದರು. ಮತ್ತು ಐತಿಹಾಸಿಕ ಗೆಲುವನ್ನು ದಾಖಲಿಸಿದರು.
ಪುರುಷರ ವಿಭಾಗದಲ್ಲೂ ದಾಖಲೆ
ಪುರುಷರ 50 ಕೆಜಿ ವಿಭಾಗದ ಜೂಡೋದಲ್ಲಿ ಹರ್ಷ ಸಿಂಗ್ ಸಹ ಆಸ್ಟ್ರೇಲಿಯಾದ ಜೋಶುವಾ ಕಾಟ್ಜ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆಲ್ಲುವ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಪುರುಷ ಭಾರತೀಯ ಜೂಡೋ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಜೊತೆಗೆ ಇತಿಹಾಸ ನಿರ್ಮಿಸಿದ್ದಾರೆ (ಏಜೆನ್ಸೀಸ್).