ಒಳ್ಳೆಯ ರಾಜಕಾರಣದ ಹುಡುಕಾಟದಲ್ಲಿರುವ ಓರ್ವ... ಭಾರಿ ಸಂಚಲನ ಮೂಡಿಸಿದ ಅಣ್ಣಾಮಲೈ ಎಕ್ಸ್​ ಬಯೋ ಅಪ್​ಡೇಟ್​! K Annamalai  
ದೇಶ

ಒಳ್ಳೆಯ ರಾಜಕಾರಣದ ಹುಡುಕಾಟದಲ್ಲಿರುವ ಓರ್ವ... ಭಾರಿ ಸಂಚಲನ ಮೂಡಿಸಿದ ಅಣ್ಣಾಮಲೈ ಎಕ್ಸ್​ ಬಯೋ ಅಪ್​ಡೇಟ್​! K Annamalai

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಜತೆಗಿನ ತಮ್ಮ ಸಂಬಂಧವನ್ನು ಮುರಿದುಕೊಂಡ ಮಾಜಿ ಐಪಿಎಸ್​ ಅಧಿಕಾರಿ ಕೆ. ಅಣ್ಣಾಮಲೈ
  • ರಾಜೀನಾಮೆ ಬೆನ್ನಲ್ಲೇ ತಮ್ಮ ಎಕ್ಸ್​ ಖಾತೆಯ ಬಯೋ ಬದಲಾಯಿಸಿಕೊಳ್ಳುವ ಮೂಲಕ ಭಾರಿ ಸಂಚಲನ
  • ಒಳ್ಳೆಯ ರಾಜಕಾರಣದ ಹುಡುಕಾಟದಲ್ಲಿರುವ ಒಬ್ಬ ಸಾಮಾನ್ಯ ಮನುಷ್ಯ ಎಂದು ಬಯೋ ಅಪ್​ಡೇಟ್​
ಚೆನ್ನೈ: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಜತೆಗಿನ ತಮ್ಮ ಸಂಬಂಧವನ್ನು ಮುರಿದುಕೊಂಡ ಬೆನ್ನಲ್ಲೇ ಕೆ. ಅಣ್ಣಾಮಲೈ ( K Annamalai ) ಅವರು ತಮ್ಮ ಎಕ್ಸ್​ (ಈ ಹಿಂದೆ ಟ್ವಿಟರ್) ಖಾತೆಯ ಬಯೋವನ್ನು ಬದಲಾಯಿಸಿಕೊಳ್ಳುವ ಮೂಲಕ ಭಾರಿ ಸಂಚಲನ ಮೂಡಿಸಿದ್ದಾರೆ.
ಕೆ. ಅಣ್ಣಾಮಲೈ ಅವರು ಭಾರತೀಯ ಜನತಾ ಪಾರ್ಟಿಗೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವಿನ್ ಅವರು ತಕ್ಷಣವೇ ಅಂಗೀಕರಿಸಿದ್ದು, ಬಿಜೆಪಿ ಜತೆಗಿನ ಎಲ್ಲ ಸಂಬಂಧವನ್ನು ಅಣ್ಣಾಮಲೈ ಅವರು ಕಡಿದುಕೊಂಡಿದ್ದಾರೆ.
ತಮ್ಮ ರಾಜೀನಾಮೆ ಅಂಗೀಕಾರವಾದ ಬೆನ್ನಲ್ಲೇ ಅಣ್ಣಾಮಲೈ ಅವರು ತಮ್ಮ ಎಕ್ಸ್​ ಬಯೋದಲ್ಲಿ “ಒಳ್ಳೆಯ ರಾಜಕಾರಣದ ಹುಡುಕಾಟದಲ್ಲಿರುವ ಒಬ್ಬ ಸಾಮಾನ್ಯ ಮನುಷ್ಯ!” ಎಂದು ಬರೆದುಕೊಂಡಿರುವುದು ನೆಟ್ಟಿಗರ ಗಮನ ಸೆಳೆದಿದೆ. ಈ ಒಂದು ವಾಕ್ಯವು ಬಿಜೆಪಿ ನಂತರದ ಅವರ ಮುಂದಿನ ನಡೆಯನ್ನು ಸ್ಪಷ್ಟಪಡಿಸುತ್ತಿದ್ದು, ತಮ್ಮನ್ನು ಒಬ್ಬ ಸಾಂಪ್ರದಾಯಿಕ ರಾಜಕಾರಣಿಯಂತೆ ಬಿಂಬಿಸಿಕೊಳ್ಳುವ ಬದಲು, ತಮಿಳುನಾಡು ರಾಜಕೀಯವನ್ನು "ಸ್ವಚ್ಛಗೊಳಿಸಲು" ಹೊರಟಿರುವ ಒಬ್ಬ ಹೊರಗಿನ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಚರ್ಚೆಯಾಗುತ್ತಿದೆ.
ಕಳೆದ ಸುಮಾರು ಐದು ವರ್ಷಗಳಿಂದ ಅಣ್ಣಾಮಲೈ ಅವರ ರಾಜಕೀಯ ಅಸ್ತಿತ್ವವು ಸಂಪೂರ್ಣವಾಗಿ ಬಿಜೆಪಿಯೊಂದಿಗೆ ಬೆಸೆದುಕೊಂಡಿತ್ತು. "ಸಿಂಗಂ" ಎಂದೇ ಜನಪ್ರಿಯರಾಗಿದ್ದ ಈ ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡಿನಲ್ಲಿ ಬಿಜೆಪಿಯ ಅತ್ಯಂತ ಪ್ರಮುಖ ಮತ್ತು ಗುರುತಿಸಲ್ಪಡುವ ಮುಖವಾಗಿ ಹೊರಹೊಮ್ಮಿದ್ದರು. ದ್ರಾವಿಡ ಪಕ್ಷಗಳ ಸಾಂಪ್ರದಾಯಿಕ ಪ್ರಾಬಲ್ಯವಿರುವ ತಮಿಳುನಾಡು ಮಣ್ಣಿನಲ್ಲಿ ಬಿಜೆಪಿಯ ಹೆಜ್ಜೆಗುರುತನ್ನು ಮತ್ತು ಪ್ರಭಾವವನ್ನು ವಿಸ್ತರಿಸಲು ಅಣ್ಣಾಮಲೈ ಅವರು ಅತ್ಯಂತ ಆಕ್ರಮಣಕಾರಿ ಹಾಗೂ ತೀವ್ರವಾದ ಪ್ರಚಾರಾಂದೋಲನದ ನೇತೃತ್ವ ವಹಿಸಿದ್ದರು. ಆದರೆ, ಯಾವುದೇ ಫಲ ನೀಡಲಿಲ್ಲ.
ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ ನಂತರ ಅಣ್ಣಾಮಲೈ ಅವರು ಪ್ರಸ್ತುತ ತಮ್ಮನ್ನು ಮತ್ತಷ್ಟು ವ್ಯಾಪಕವಾಗಿ ಬಿಂಬಿಸಿಕೊಳ್ಳಲು ಮುಂದಾಗಿದ್ದಾರೆ. ಸಾಂಪ್ರದಾಯಿಕ ಮತ್ತು ಪ್ರಭಾವಿ ರಾಜಕೀಯ ವ್ಯವಸ್ಥೆಗೆ ಪರ್ಯಾಯವಾಗಿ ‘ನಾಗರಿಕರ ನೇತೃತ್ವದ ಶಕ್ತಿ’ಯಾಗಿ ಹೊರಹೊಮ್ಮಲು ಅಣ್ಣಾಮಲೈ ಅವರು ಪ್ರಯತ್ನಿಸುತ್ತಿದ್ದಾರೆ. ತಮ್ಮ ಹೊಸ ನಿರ್ಧಾರವನ್ನು ಪ್ರಕಟಿಸುವ ಸಂದರ್ಭದಲ್ಲಿ, ತಾವು ಹೊಸ ರಾಜಕೀಯ ಚಳವಳಿಯೊಂದನ್ನು ಪ್ರಾರಂಭಿಸುವುದಾಗಿ ತಿಳಿಸಿರುವ ಅಣ್ಣಾಮಲೈ, ಪ್ರಸ್ತುತ ಇರುವ ರಾಜಕೀಯ ಆಯ್ಕೆಗಳನ್ನು ಮೀರಿ ತಮಿಳುನಾಡಿಗೆ ಈಗ ಒಂದು ಹೊಸ ರಾಜಕೀಯ ಶಕ್ತಿಯ ಅಗತ್ಯವಿದೆ ಎಂಬ ಸುಳಿವು ನೀಡಿದ್ದಾರೆ.
ರಾಜಕೀಯದಲ್ಲಿ ‘ಸಾಮಾನ್ಯ ಮನುಷ್ಯ’ (ಕಾಮನ್ ಮ್ಯಾನ್) ಎಂಬ ಪದಕ್ಕೆ ಭಾರಿ ಪ್ರಾಮುಖ್ಯತೆಯಿದೆ. ಭಾರತದಾದ್ಯಂತ ಪ್ರಭಾವಿ ರಾಜಕೀಯ ಶಕ್ತಿಗಳ ವಿರುದ್ಧ ತಮ್ಮನ್ನು ತಾವು ಗುರುತಿಸಿಕೊಳ್ಳಲು ನಾಯಕರು ಈ ಪದವನ್ನು ಆಗಾಗ ಬಳಸುತ್ತಾ ಬಂದಿದ್ದಾರೆ. ಇದೀಗ ಅಣ್ಣಾಮಲೈ ಅವರು "ಒಳ್ಳೆಯ ರಾಜಕಾರಣದ ಹುಡುಕಾಟದಲ್ಲಿ" ಎಂದು ಹೇಳಿಕೊಳ್ಳುವ ಮೂಲಕ, ತಮ್ಮ ಚಳವಳಿಯು ಸಾಂಪ್ರದಾಯಿಕ ಪಕ್ಷದ ಚೌಕಟ್ಟುಗಳಿಗಿಂತ ಹೆಚ್ಚಾಗಿ ಉತ್ತಮ ಆಡಳಿತ, ಹೊಣೆಗಾರಿಕೆ ಮತ್ತು ರಾಜಕೀಯ ಸುಧಾರಣೆಗಳ ಮೇಲೆ ಕೇಂದ್ರೀಕರಿಸಲಿದೆ ಎಂಬ ಸಂದೇಶ ರವಾನಿಸುತ್ತಿದ್ದಾರೆ. ಇದು ಪ್ರಾದೇಶಿಕ ಡಿಎಂಕೆ-ಎಐಎಡಿಎಂಕೆ ಹಾಗೂ ರಾಷ್ಟ್ರೀಯ ಪಕ್ಷಗಳೆರಡರಿಂದಲೂ ಬೇಸತ್ತಿರುವ ಮತದಾರರನ್ನು ಸೆಳೆಯುವ ತಂತ್ರವಾಗಿದೆ. ತಾವು ರಾಜಕೀಯದಿಂದ ದೂರ ಸರಿಯುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಅವರು, ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧಿಸುವ ಮತ್ತು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಮುಂದುವರಿಯುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ.
ಇದೇ ಕಾರಣಕ್ಕಾಗಿ ಕೆ. ಅಣ್ಣಾಮಲೈ ಅವರ ಈ ಹೊಸ 'ಬಯೋ' ಅತ್ಯಂತ ಮಹತ್ವದ್ದಾಗಿ ಹೊರಹೊಮ್ಮಿದ್ದು, ಇದು ಬಿಜೆಪಿಯ ನಂತರದ ಅವರ ರಾಜಕೀಯ ಪ್ರಯಾಣದ ಮೊದಲ ಘೋಷಣೆಯಾಗಿದೆ). ಒಳ್ಳೆಯ ರಾಜಕಾರಣದ ಹುಡುಕಾಟದಲ್ಲಿರುವ ಒಬ್ಬ ಸಾಮಾನ್ಯ ಮನುಷ್ಯ ಎಂಬ ಈ ಹೊಸ ಆಲೋಚನೆ ತಮಿಳುನಾಡಿನ ಮತದಾರರ ಮನಸ್ಸನ್ನು ಎಷ್ಟರಮಟ್ಟಿಗೆ ಗೆಲ್ಲುತ್ತದೆ ಎಂಬುದನ್ನು ಕಾಲವೇ ನಿರ್ಣಯಿಸಬೇಕಿದೆ. ಆದರೆ, ಸದ್ಯದ ಮಟ್ಟಿಗಂತೂ, ಅಣ್ಣಾಮಲೈ ಅವರು ತಮ್ಮನ್ನು ಒಬ್ಬ ಮಾಜಿ ಬಿಜೆಪಿ ನಾಯಕನಾಗಿ ನೋಡುವ ಬದಲು, ಒಂದು ಹೊಸ ರಾಜಕೀಯ ಪ್ರಯೋಗದ ಪ್ರಮುಖ ಮುಖವಾಗಿ ಗುರುತಿಸಿಕೊಳ್ಳಲು ಬಯಸುತ್ತಿದ್ದಾರೆ ಎಂಬುದಕ್ಕೆ ಇದು ಸ್ಪಷ್ಟ ಪುರಾವೆಯಾಗಿದೆ, (ಏಜೆನ್ಸೀಸ್​).