ಪಾಣಿಪತ್: ಸೊಸೆಯ ಅತಿಯಾದ ಸಾಮಾಜಿಕ ಜಾಲತಾಣದ(Social Media Impact) ವ್ಯಾಮೋಹ, ಉಡುಪು ಮತ್ತು ಜೀವನಶೈಲಿಯಿಂದ ಉಂಟಾದ ಕೌಟುಂಬಿಕ ಕಲಹವು ದಂಪತಿಯ ದುರಂತ ಅಂತ್ಯಕ್ಕೆ ಕಾರಣವಾಗಿರುವ ಘಟನೆ ಹರ್ಯಾಣದ ಪಾಣಿಪತ್ ಜಿಲ್ಲೆಯ ನಾರಾ ಗ್ರಾಮದಲ್ಲಿ ನಡೆದಿದೆ.
ಹೌದು, ಸೊಸೆಯ ನಡವಳಿಕೆಯಿಂದ ಮನನೊಂದ ಮಾವ ರಾಜೇಶ್ (46) ಮತ್ತು ಅತ್ತೆ ಸುಮನ್ (44) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಏನಿದು ಘಟನೆ?
ಮೃತರ ಕುಟುಂಬಸ್ಥರ ಪ್ರಕಾರ, ರಾಜೇಶ್ ಮತ್ತು ಸುಮನ್ ದಂಪತಿ ತಮ್ಮ ಮಗ ಆಶಿಶ್‌ಗೆ ದೆಹಲಿಯ ಮಾಡರ್ನ್ ಕುಟುಂಬದ ಹುಡುಗಿ ಸ್ನೇಹಾ ಎಂಬಾಕೆಯೊಂದಿಗೆ ಮದುವೆ ಮಾಡಿಸಿದ್ದರು. ದೆಹಲಿಯ ಮುಕ್ತ ವಾತಾವರಣದಲ್ಲಿ ಬೆಳೆದಿದ್ದ ಸ್ನೇಹಾ ಮದುವೆಯ ನಂತರ ಹಳ್ಳಿಯ ಪರಿಸರಕ್ಕೆ ಹೊಂದಿಕೊಳ್ಳಲು ನಿರಾಕರಿಸುತ್ತಿದ್ದಳು. ಇದು ಮನೆಯಲ್ಲಿ ನಿರಂತರ ಜಗಳಕ್ಕೆ ನಾಂದಿ ಹಾಡಿತ್ತು.
ರೀಲ್ಸ್ ಮತ್ತು ಬಟ್ಟೆಯದ್ದೇ ತಗಾದೆ!
ಸ್ನೇಹಾ ಸದಾ ಕಾಲ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳನ್ನು ಮಾಡುವುದು ಮತ್ತು ಆಧುನಿಕ ಉಡುಪುಗಳನ್ನು ಧರಿಸುವುದನ್ನು ಮಾವ ಮತ್ತು ಅತ್ತೆ ವಿರೋಧಿಸುತ್ತಿದ್ದರು. ಆಕೆ ಗ್ರಾಮದ ಸಂಪ್ರದಾಯದಂತೆ ಸೀರೆ ಅಥವಾ ಚೂಡಿದಾರ್ ಧರಿಸಬೇಕು ಎಂಬುದು ಅವರ ಆಶಯವಾಗಿತ್ತು. ಆದರೆ ತನ್ನ ಜೀವನಶೈಲಿಯ ಮೇಲೆ ನಿರ್ಬಂಧ ಹೇರುವುದನ್ನು ಸ್ನೇಹಾ ತೀವ್ರವಾಗಿ ವಿರೋಧಿಸುತ್ತಿದ್ದಳು. ಈ ವಿಷಯವಾಗಿ ಶನಿವಾರ ಮಧ್ಯಾಹ್ನ ಮನೆಯಲ್ಲಿ ಭಾರಿ ಜಗಳ ನಡೆದಿತ್ತು.
ಹೆತ್ತವರನ್ನೇ ದೂರ ತಳ್ಳಿದ ಮಗ
ದಂಪತಿಯನ್ನು ಇನ್ನಷ್ಟು ಕುಗ್ಗಿಸಿದ್ದು ಮಗ ಆಶಿಶ್‌ನ ನಡವಳಿಕೆ. ಮನೆಯಲ್ಲಿ ಜಗಳ ನಡೆದಾಗಲೆಲ್ಲ ಮಗ ತನ್ನ ಪತ್ನಿಯ ಪರವಾಗಿಯೇ ನಿಲ್ಲುತ್ತಿದ್ದ. ಅತ್ತೆ ಸುಮನ್ ಮೇಲೆ ಸೊಸೆ ದೈಹಿಕ ಹಲ್ಲೆ ನಡೆಸಿದ್ದಾಳೆ ಎಂಬ ಗಂಭೀರ ಆರೋಪವನ್ನೂ ಸಂಬಂಧಿಕರು ಮಾಡಿದ್ದಾರೆ. ಮಗನ ಬೆಂಬಲ ಸಿಗದ ಕಾರಣ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ದಂಪತಿ, ಶನಿವಾರ ಸಲ್ಫಾಸ್ ವಿಷ ಸೇವಿಸಿದ್ದಾರೆ.
ಆಸ್ಪತ್ರೆಯಲ್ಲಿ ಸಾವು
ವಿಷ ಸೇವಿಸಿದ ದಂಪತಿಯನ್ನು ತಕ್ಷಣ ಪಾನಿಪತ್‌ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಸುಮನ್ ಆಸ್ಪತ್ರೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ರಾಜೇಶ್ ಅವರನ್ನು ರೋಹ್ಟಕ್‌ನ ಪಿಜಿಐ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಭಾನುವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಪೊಲೀಸ್ ದೂರು ದಾಖಲು
ಘಟನೆಗೆ ಸಂಬಂಧಿಸಿದಂತೆ ಮೃತ ರಾಜೇಶ್ ಅವರ ಸಹೋದರ ರಮೇಶ್ ನೀಡಿದ ದೂರಿನ ಮೇರೆಗೆ ಸೊಸೆ ಸ್ನೇಹಾ ಮತ್ತು ಆಕೆಯ ಪೋಷಕರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಮಟ್ಲೌಡಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ರಾಕೇಶ್ ಕುಮಾರ್ ಅವರು ಈ ಕುರಿತು ತನಿಖೆ ನಡೆಸುತ್ತಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).