Suvendu Adhikari | ಯಾವಾಗ ಬೇಕಾದರೂ ಬನ್ನಿ, ಭದ್ರತೆ ನಮ್ಮದು ಎಂದ ಸಿಎಂ ಸುವೇಂಧು!
ಗಡೀಪಾರಾಗಿದ್ದ ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ ಸುಮಾರು 19 ವರ್ಷಗಳ ನಂತರ ಕೋಲ್ಕತ್ತಾಗೆ ಮರಳಿದ್ದು, ಅವರು ರಾಜ್ಯಕ್ಕೆ ಭೇಟಿ ನೀಡಿದಾಗಲೆಲ್ಲಾ ಸಂಪೂರ್ಣ ಭದ್ರತೆ ನೀಡುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂಧು ಅಧಿಕಾರಿ (Suvendu Adhikari) ಶನಿವಾರ ಭರವಸೆ ನೀಡಿದ್ದಾರೆ. ಅಲ್ಲದೆ, ಇದನ್ನು ಬಿಜೆಪಿ ಸರ್ಕಾರದ ಆಡಳಿತದಲ್ಲಿ ಬಂಗಾಳದಲ್ಲಿ ಉಂಟಾಗಿರುವ ಮೂಲಭೂತ ರಾಜಕೀಯ ಬದಲಾವಣೆಯ ಪ್ರತಿಬಿಂಬ ಎಂದು ಬಣ್ಣಿಸಿದ್ದಾರೆ.
ರವೀಂದ್ರ ಸದನದಲ್ಲಿ ಮೂಲಭೂತವಾದದ ವಿರುದ್ಧ ಆಯೋಜಿಸಲಾಗಿದ್ದ ಸಾಹಿತ್ಯಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಅಧಿಕಾರಿ, ನೀವು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದಾಗಲೆಲ್ಲಾ ನಿಮಗೆ ಭದ್ರತೆ ನೀಡುವುದು ಮುಖ್ಯಮಂತ್ರಿಯಾಗಿ ಮತ್ತು ಪೊಲೀಸ್ ಇಲಾಖೆಯ ಉಸ್ತುವಾರಿ ಸಚಿವನಾಗಿ ನನ್ನ ಕರ್ತವ್ಯವಾಗಿದೆ ಎಂದು ಅವರು ಹೇಳಿದರು. ಒಮ್ಮೆ ಮಾತ್ರವಲ್ಲ, ನೀವು ಇಷ್ಟಪಟ್ಟಾಗಲೆಲ್ಲಾ, ಎಷ್ಟು ಬಾರಿಯಾದರೂ ರಾಜ್ಯಕ್ಕೆ ಬನ್ನಿ. ನಿಮಗೆ ಸಂಪೂರ್ಣ ಭದ್ರತೆ ಸಿಗಲಿದೆ ಎಂದರು.
ಪಶ್ಚಿಮ ಬಂಗಾಳವು ಪ್ರಜಾಪ್ರಭುತ್ವ, ಸಾಂವಿಧಾನಿಕ ಮೌಲ್ಯಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ಹೊಸ ಹಂತಕ್ಕೆ ಕಾಲಿಟ್ಟಿದೆ ಎಂದು ಮುಖ್ಯಮಂತ್ರಿ ಹೇಳಿದರು. ಇದು ಸಂಕೋಲೆಗಳು ಮತ್ತು ಭಯದಿಂದ ಮುಕ್ತವಾದ ಪಶ್ಚಿಮ ಬಂಗಾಳ. ಸಂವಿಧಾನದ ಪ್ರತಿಯೊಂದು ಸ್ತಂಭವನ್ನು ಇಲ್ಲಿ ರಕ್ಷಿಸಲಾಗಿದೆ. ಪ್ರತಿಯೊಬ್ಬರಿಗೂ ಇಲ್ಲಿಗೆ ಬರಲು ಹಕ್ಕಿದೆ ಮತ್ತು ಪ್ರತಿಯೊಬ್ಬರಿಗೂ ತಮ್ಮನ್ನು ತಾವು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ ಎನ್ನುತ್ತಾ, ಬೆದರಿಸುವುದು ಮತ್ತು ಜನರ ಧ್ವನಿಯನ್ನು ಅಡಗಿಸುವ ಪ್ರಯತ್ನಗಳ ಯುಗ ಮುಗಿದಿದೆ ಎಂದು ಪರೋಕ್ಷವಾಗಿ ಟಿಎಂಸಿಗೆ ಕುಟುಕಿದರು.
ದೀರ್ಘಾವಧಿಯ ಗಡೀಪಾರು ಕೊನೆಗೊಂಡಿದೆ ಎಂದ ನಸ್ರೀನ್
2007 ರ ನಂತರ ಮೊದಲ ಬಾರಿಗೆ ಕೋಲ್ಕತ್ತಾಗೆ ಹಿಂತಿರುಗಿದ ನಸ್ರೀನ್, ಈ ಭೇಟಿಯನ್ನು ಅತ್ಯಂತ ಭಾವುಕ ಎಂದು ಬಣ್ಣಿಸಿದರು. ಕೋಲ್ಕತ್ತಾಗೆ ಹಿಂತಿರುಗಿದ ನಂತರ, ನಾನು ಇಲ್ಲೇ ಬಿಟ್ಟುಹೋದ ಜೀವನದ ಒಂದು ಭಾಗಕ್ಕೆ ಹಿಂತಿರುಗಿದಂತೆ ಭಾಸವಾಗುತ್ತಿದೆ ಎಂದು ಅವರು ಹೇಳಿದರು. ತಾವು ಯಾವುದೇ ರಾಜಕೀಯ ಪಕ್ಷವನ್ನು ಪ್ರಚಾರ ಮಾಡಲು ಅಥವಾ ವಿರೋಧಿಸಲು ಬಂದಿಲ್ಲ, ಬದಲಿಗೆ ಮಹಿಳಾ ಹಕ್ಕುಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಮಾತನಾಡುವುದನ್ನು ಮುಂದುವರಿಸಲು ಬಂದಿದ್ದೇನೆ ಎಂದ 63 ವರ್ಷದ ಲೇಖಕಿ, ನಾನು ಇಲ್ಲಿ ಯಾವುದೇ ರಾಜಕೀಯ ಪಕ್ಷದ ಪರವಾಗಿ ಅಥವಾ ಯಾವುದೇ ಪಕ್ಷದ ವಿರುದ್ಧ ಮಾತನಾಡಲು ಬಂದಿಲ್ಲ. ನಾನು ಮಹಿಳಾ ಹಕ್ಕುಗಳ ಪರವಾಗಿ ಮಾತನಾಡಲು ಬಂದಿದ್ದೇನೆ ಎಂದು ಹೇಳಿದರು.
2007 ರಲ್ಲಿ ಕೋಲ್ಕತ್ತಾದಿಂದ ಹೊರಟಿದ್ದನ್ನು ನೆನಪಿಸಿಕೊಂಡ ನಸ್ರೀನ್, ಇಂದು, ಈ ಬಾಗಿಲು ತೆರೆದಿರುವುದು ಅನ್ಯಾಯವು ಸುದೀರ್ಘವಾಗಿರಬಹುದು, ಆದರೆ ಅದು ಶಾಶ್ವತವಾಗಿರಲು ಸಾಧ್ಯವಿಲ್ಲ ಎಂಬುದನ್ನು ನಿರೂಪಿಸುತ್ತದೆ. ಯಾರು ಬಾಗಿಲು ಮುಚ್ಚಿದರು ಮತ್ತು ಯಾರು ತೆರೆದರು ಎಂಬುದನ್ನು ಇತಿಹಾಸ ನೆನಪಿಸಿಕೊಳ್ಳುತ್ತದೆ ಎಂದು ಹೇಳಿದರು.
ತಸ್ಲಿಮಾ ನಸ್ರೀನ್ ಕೋಲ್ಕತ್ತಾ ತೊರೆದಿದ್ದೇಕೆ..?
ನಸ್ರೀನ್ ಆತ್ಮಚರಿತ್ರೆಯ ಕೃತಿ ದ್ವಿಖಂಡಿತೊ (Split: A Life) ನ ಭಾಗಗಳ ಕುರಿತು ಹಿಂಸಾತ್ಮಕ ಪ್ರತಿಭಟನೆಗಳು ನಡೆದ ನಂತರ, ಅವರು ನವೆಂಬರ್ 2007 ರಲ್ಲಿ ನಗರವನ್ನು ತೊರೆದಿದ್ದರು. ಆ ಘಟನೆಯ ನಂತರ ಕೋಲ್ಕತ್ತಾದಲ್ಲಿ ಇದು ಅವರ ಮೊದಲ ಸಾರ್ವಜನಿಕ ಕಾರ್ಯಕ್ರಮವಾಗಿದೆ. ಅಂದಿನ ಎಡರಂಗ ಸರ್ಕಾರವು ಪುಸ್ತಕವನ್ನು ನಿಷೇಧಿಸಿತು ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಕಾಳಜಿಯನ್ನು ಉಲ್ಲೇಖಿಸಿ, ಅವರು ಅಂತಿಮವಾಗಿ ರಾಜ್ಯವನ್ನು ತೊರೆಯುವ ಮೊದಲು ಅವರನ್ನು ಕೋಲ್ಕತ್ತಾದಿಂದ ಹೊರಗೆ ಸ್ಥಳಾಂತರಿಸಿತ್ತು.
ಬಾಂಗ್ಲಾದೇಶ ಮೂಲದ ಈ ಬರಹಗಾರ್ತಿ, ತಮ್ಮ ಬರವಣಿಗೆಗಳು ಮತ್ತು ಧಾರ್ಮಿಕ ಮೂಲಭೂತವಾದದ ಟೀಕೆಗಳಿಗಾಗಿ ಇಸ್ಲಾಮಿಕ್ ಗುಂಪುಗಳಿಂದ ಬೆದರಿಕೆಗಳನ್ನು ಎದುರಿಸಿದ ನಂತರ 1994 ರಿಂದ ಗಡೀಪಾರಿನಲ್ಲಿ ವಾಸಿಸುತ್ತಿದ್ದಾರೆ(ಏಜೆನ್ಸೀಸ್).