ದೆಹಲಿಯ 5 ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಸೇವೆ ಸ್ಥಗಿತ
- ದೇಶದ ಪರೀಕ್ಷಾ ಅಕ್ರಮ ಖಂಡಿಸಿ ದೆಹಲಿಯಲ್ಲಿ ಕಾಕ್ರೋಜ್ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ‘ಚಲೋ ಸಂಸತ್’ ರ‍್ಯಾಲಿ
- ಟಿಕೆಟ್ ಇಲ್ಲದೆ ಮೆಟ್ರೋ ನಿಲ್ದಾಣಕ್ಕೆ ನುಗ್ಗಿದ ಪ್ರತಿಭಟನಾಕಾರರು
- ರಾಜೀವ್ ಚೌಕ್ ಸೇರಿದಂತೆ 5 ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಸೇವೆ ಸ್ಥಗಿತ
ನವದೆಹಲಿ: ನೀಟ್ ಸೇರಿದಂತೆ ದೇಶದಲ್ಲಿ ನಡೆಯುತ್ತಿರಯವ ಪರೀಕ್ಷಾ ಅಕ್ರಮವನ್ನು ವಿರೋಧಿಸಿ ಇಂದು (ಜು.20) ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಚಲೋ ಸಂಸತ್ ಎಂಬ ಪ್ರತಿಭಟನಾ ರ‍್ಯಾಲಿ ನಡೆಯುತ್ತಿದೆ.
ಈ ರ‍್ಯಾಲಿಗೆ ದೇಶದ ಮೂಲೆ-ಮೂಲೆಯಿಂದ ಹಾಗೂ ಮುಖ್ಯವಾಗಿ ದೆಹಲಿಯಿಂದ ಲಕ್ಷಾಂತರ ಜನ ಯುವಕ/ಯುವತಿಯರು ಆಗಮಿಸುತ್ತಿದ್ದಾರೆ. ಆದರೆ ಈ ಜನರನ್ನು ಸಂಭಾಳಿಸಲು ಕಷ್ಟವಾಗುತ್ತಿರುವ ಹಿನ್ನಲೆ ದೆಹಲಿಯಲ್ಲಿ 5 ಮೆಟ್ರೋ ನಿಲ್ದಾಣಗಳಲ್ಲಿ ಸಾರಿಗೆ ಸೇವೆಯನ್ನು ರದ್ದು (Delhi Metro Closed) ಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಪ್ರತಿಭಟಬಾ ರ‍್ಯಾಲಿಯು ಜಂತರ್-ಮಂತರ್ನಿಂದ ಸಂಸತ್ ಭವನದವರೆಗೆ ನಡೆಯಲಿದ್ದು, ಈ ಮಾರ್ಗದಲ್ಲಿರುವ ಮೆಟ್ರೋ ನಿಲ್ದಾಣಗಳಾದ ರಾಜೀವ್ ಚೌಕ್, ಜನಪಥ್, ಪಟೇಲ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್ ಮತ್ತು ಸೇವಾ ತೀರ್ಥ ಮೆಟ್ರೋ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನರನ್ನು ಕಂಟ್ರೋಲ್ ಮಾಡಲು ಆಗುತ್ತಿಲ್ಲ!
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮೆಟ್ರೋ ಅಧಿಕಾರಿಗಳು, ಇಂದು ಬೆಳಿಗ್ಗೆ ಎಂದಿನಂತೆ ಮೆಟ್ರೋ ಸೇವೆ ನೀಡಲಾಗುತ್ತಿತ್ತು. ಆದರೆ ಸಮಯ ಕಳೆದಂತೆ ಜನರ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದ್ದು, ಜನರು ಟಿಕೆಟ್ ಪಡೆಯದೇ, ಸುರಕ್ಷತಾ ತಪಾಸಣೆಗೆ ಒಳಗಾಗದೆ, ನುಗ್ಗುತ್ತಿದ್ದಾರೆ.
ಇದರಿಂದ ಮೆಟ್ರೋ ಸಿಬ್ಬಂದಿಗಳಿಗೆ ಹಾಗೂ ಮೆಟ್ರೋ ನಿಲ್ದಾಣಕ್ಕೆ ಸಾಕಷ್ಟು ಸಮಸ್ಯೆ ಎದುರಾಗುತ್ತಿದ್ದು, ಜನರನ್ನು ಕಂಟ್ರೋಲ್ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರ‍್ಯಾಲಿ ನಡೆಯುವ ಮಧ್ಯದಲ್ಲಿರುವ 5 ನಿಲ್ದಾಣಗಳಲ್ಲಿ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಜೆ.ಪಿ. ನಡ್ಡಾ ಜೊತೆ ಮಾತುಕತೆ!
ಇಂದಿನಿಂದ ರಾಷ್ಟ್ರ ರಾಜಧಾನಿಯಲ್ಲಿ ಮಳೆಗಾಲದ ಸಂಸತ್ ಅಧಿವೇಶನ ಆರಂಭವಾಗುತ್ತಿದ್ದು, ಇದೇ ಸಂದರ್ಭದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರು ಸಂಸತ್ಗೆ ಮುತ್ತಿಗೆ ಹಾಕಲು ಮುಂದಾಗಿದ್ದರೆಂದು ತಿಳಿದು ಬಂದಿದೆ.
ಈಗ ಸರ್ಕಾರದ ವತಿಯಿಂದ ಕೇಂದ್ರ ಸಚಿವ ಜೆ.ಪಿ. ನಡ್ಡಾ ಮಾತುಕತೆಗೆ ಮುಂದಾಗಿದ್ದಾರೆಂದು ಮಾಹಿತಿ ಲಭ್ಯವಾಗಿದೆ. ಈ ಕುರಿತು ಕಾಕ್ರೋಚ್ ಜನತಾ ಪಾರ್ಟಿ ವಕ್ತಾರ, ಸೌರವ್ ದಾಸ್, ಎಕ್ಸ್ ಪೋಸ್ಟ್ವೊಂದರಲ್ಲಿ, ಸೋಮವಾರ ಕಾಕ್ರೋಚ್ ಜನತಾ ಪಾರ್ಟಿಯ ನಾಯಕರು ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರನ್ನು ಬೇಟಿಯಾಗಲು ಹೋಗುತ್ತಿದ್ದಾರೆ. ಸರ್ಕಾರ ನಮ್ಮನ್ನು ಸಂಪರ್ಕಿಸಿದೆ ಹೀಗಾಗಿ ಆಶುತೋಷ್ ರಾಂಕಾ ನೇತೃತ್ವದಲ್ಲಿ ನಾವು ನಮ್ಮ ಬೇಡಿಕೆಯನ್ನು ಸಚಿವರಿಗೆ ಮನವರಿಕೆ ಮಾಡಿಕೊಡಲಿದ್ದು, ನಮಗೆ ಈ ಬಾರಿ ಜಯ ಸಿಗಲಿದೆ ಎಂದು ಬರೆದುಕೊಂಡಿದ್ದಾರೆ, (ಏಜನ್ಸೀಸ್).