Abhijeet Dipke Instagram Hacked
- ಎಕ್ಸ್ ಖಾತೆ ನಿರ್ಬಂಧದ ಬಳಿಕ ಅಭಿಜಿತ್ ದೀಪ್ಕೆ ಇನ್ಸ್ಟಾಗ್ರಾಂ ಖಾತೆ ಹ್ಯಾಕ್
- ಪದೇ ಪದೇ ಪರಿಶೀಲಿಸಿದರು ಇನ್ಸ್ಟಾಗ್ರಾಂ ಲಾಗಿನ್ ಮಾಡಲಾಗುತ್ತಿಲ್ಲ ಎಂದ ದೀಪ್ಕೆ
- ಇನ್‌ಸ್ಟಾಗ್ರಾಮ್ ಹ್ಯಾಕ್, ಟ್ವಿಟರ್ ಖಾತೆ ನಿರ್ಬಂಧಿಸಲಾಗಿದೆ ಎಂದು ಅಭಿಜಿತ್ ದೀಪ್ಕೆ ಹೇಳಿಕೆ
ನವದೆಹಲಿ: ಹೌದು ನಾವು ಸೋಮಾರಿಗಳು, ನಿರುದ್ಯೋಗಿಗಳು ಎಂದು ದೇಶದ ಯುವ ಪೀಳಿಗೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ Cockroach Janta Partyಯ ಎಕ್ಸ್ ಖಾತೆಯನ್ನು ನಿರ್ಬಂಧಿಸಲಾಗಿತ್ತು. ಆ ಬೆನ್ನಲ್ಲೇ, ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಸಿಜೆಐ ಸೂರ್ಯಕಾಂತ್ ಅವರು ಯುವ ಪೀಳಿಗೆ ಜಿರಳೆ ಇದ್ದಂತೆ ಎಂದು ವಿಚಾರಣೆ ವೇಳೆ ಹೇಳಿಕೆ ಕೊಟ್ಟಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿರುದ್ಧ ಯುವ ಪೀಳಿಕೆ ಕಾಕ್ರೋಚ್ ಜನತಾ ಪಾರ್ಟಿಯನ್ನು ಆರಂಭಿಸಿತು. ಆ ಬೆನ್ನಲ್ಲೇ ದೀಪ್ಕೆ ಅವರ ವೈಯಕ್ತಿಕ ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ಡಿಜಿಟಲ್ ಜಗತ್ತಿನಲ್ಲಿ ಪಕ್ಷದ ಭಾರಿ ಬೆಳವಣಿಗೆಯ ನಡುವೆಯೇ ಸಿಜೆಪಿಯ ಬ್ಯಾಕಪ್ ಇನ್‌ಸ್ಟಾಗ್ರಾಮ್ ಖಾತೆಯನ್ನು ಸಹ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ದೀಪ್ಕೆ ಹೇಳಿದ್ದೇನು?
ದೀಪ್ಕೆ ಅವರು ಇನ್‌ಸ್ಟಾಗ್ರಾಮ್ ಹ್ಯಾಕ್ ಆಗಿರುವ ಬಗ್ಗೆ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಅದರ ಪ್ರಕಾರ ಸಂಸ್ಥೆಯ ರಿಕವರಿ ಪ್ರಕ್ರಿಯೆಯ ಮೂಲಕ ಅವರು ತಮ್ಮ ವೈಯಕ್ತಿಕ ಇನ್‌ಸ್ಟಾಗ್ರಾಮ್ ಖಾತೆಯನ್ನು ಮರುಪಡೆಯಲು ಪದೇ ಪದೇ ಪ್ರಯತ್ನಿಸಿದರೂ ವಿಫಲರಾಗಿದ್ದಾರೆ. ಅವರು 'ರಿಕವರ್ ಇಟ್ ನೌ' ಆಯ್ಕೆಯ ಮೇಲೆ ಕ್ಲಿಕ್ ಮಾಡಿದಾಗಲೆಲ್ಲಾ, ನಿಮ್ಮ ಸುರಕ್ಷತೆಗಾಗಿ ನಾವು ನಿಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಲಾಕ್ ಮಾಡಿದ್ದೇವೆ. ಖಾತೆಯನ್ನು ಮರುಪಡೆಯಲು ನಿಮ್ಮ ಗುರುತನ್ನು ಪರಿಶೀಲಿಸಬೇಕು ಮತ್ತು ಹೊಸ ಪಾಸ್‌ವರ್ಡ್ ರಚಿಸಬೇಕು ಎಂದು ಬರುತ್ತಿದೆ. ಎಷ್ಟೇ ಬಾರಿ ಪ್ರಯತ್ನಿಸಿದರೂ ಸಹ ಇದೇ ಪ್ರತಿಕ್ರಿಯೆ ಬರುತ್ತಿರುವುದರಿಂದ ಖಾತೆಯ ಮೇಲಿನ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತಿಲ್ಲ. ನನ್ನ ಇನ್‌ಸ್ಟಾಗ್ರಾಮ್ ಹ್ಯಾಕ್ ಮಾಡಲಾಗಿದೆ. ಟ್ವಿಟರ್ ಖಾತೆಯನ್ನು ತಡೆಹಿಡಿಯಲಾಗಿದೆ. ಬ್ಯಾಕಪ್ ಖಾತೆಯನ್ನು ಸಹ ತೆಗೆದುಹಾಕಲಾಗಿದೆ ಎಂದಿದ್ದಾರೆ.
ದಯವಿಟ್ಟು ಗಮನಿಸಿ ನಮ್ಮ ಎಲ್ಲ ಖಾತೆಯನ್ನು ನಿರ್ಬಂಧಿಸಲಾಗಿದೆ. ಹೀಗಾಗಿ, ಮುಂದೆ ಪ್ರಕಟಿಸುವ ಯಾವುದೇ ಪೋಸ್ಟ್ ಅನ್ನು ಕಾಕ್ರೋಚ್ ಜನತಾ ಪಾರ್ಟಿ ಪೋಸ್ಟ್ ಮಾಡಿದೆ ಎಂದು ಪರಿಗಣಿಸಬೇಡಿ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ದೀಪ್ಕೆಯವರ ಮತ್ತೊಂದು ಪೋಸ್ಟ್ನಲ್ಲಿ ಹೀಗಿದೆ, ಪ್ರಶ್ನೆ ಪತ್ರಿಕೆ ಸೋರಿಕೆಗೆ ಶಿಕ್ಷಣ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಸರ್ಕಾರದ ವೈಫಲ್ಯದಿಂದಾಗಿ ವಿದ್ಯಾರ್ಥಿಯೊಬ್ಬನ ಪ್ರಾಣ ಹೋಗಿದೆ. ಆದರೆ ನವ ಭಾರತದಲ್ಲಿ, ಹೊಣೆಗಾರಿಕೆಯನ್ನು ಒತ್ತಾಯಿಸಿದ್ದಕ್ಕಾಗಿ ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಸಿಜೆಪಿ ಮೇಲಿರುವ ಆರೋಪಗಳೇನು?
ಈ ಚಳವಳಿಯು ಆನ್‌ಲೈನ್‌ನಲ್ಲಿ ತೀವ್ರ ರಾಜಕೀಯ ಪ್ರತಿಕ್ರಿಯೆಗಳಿಗೂ ಕಾರಣವಾಗಿದೆ. ಆಡಳಿತಾರೂಢ ಬಿಜೆಪಿಯ ಬೆಂಬಲಿಗರು ಈ ಸಂಘಟನೆಯನ್ನು ರಾಷ್ಟ್ರೀಯ ಭದ್ರತೆಗೆ ಸಂಭಾವ್ಯ ಆಪತ್ತು ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೆ, ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಇದಕ್ಕೆ ಐಎಸ್‌ಐ ಜೊತೆ ಸಂಪರ್ಕವಿರುವ ಸಾಧ್ಯತೆ ಇದೆ ಮತ್ತು ವಿರೋಧ ಪಕ್ಷಗಳಿಂದ ಸಂಘಟಿತ ಬೆಂಬಲ ಸಿಗುತ್ತಿದೆ ಎಂದು ಆರೋಪಿಸಿದ್ದಾರೆ, (ಏಜೆನ್ಸೀಸ್).