Cockroach Janta Party | ಇಂಟರ್ನೆಟ್ ಜಗತ್ತಿನಲ್ಲಿ ಕಾಕ್ರೋಚ್ ಪಾರ್ಟಿ ಗ್ರಾಂಡ್ ಡೆಬ್ಯೂ!
Cockroach Janta Party: ಭಾರತದ ರಾಜಕೀಯ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (Cockroach Janta Party) ಎಂಬ ವ್ಯಂಗ್ಯಭರಿತ ಆನ್‌ಲೈನ್ ಚಳವಳಿಯು, ಇನ್‌ಸ್ಟಾಗ್ರಾಮ್‌ನಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಅಧಿಕೃತ ಖಾತೆಯನ್ನೇ ಹಿಂದಿಕ್ಕಿ ಅತಿ ವೇಗವಾಗಿ ಬೆಳೆದಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಎಂಬ ಹ್ಯಾಂಡಲ್ ಹೊಂದಿರುವ ಈ ಪೇಜ್, ಮೇ 20ರ ವೇಳೆಗೆ ಬರೋಬ್ಬರಿ 10 ಮಿಲಿಯನ್ ಫಾಲೋವರ್ಸ್‌ಗಳನ್ನು ದಾಟಿದೆ. ಸದ್ಯ ಬಿಜೆಪಿಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯು (@bjp4india) 8.7 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದರೆ, ಕಾಂಗ್ರೆಸ್ (@incindia) 13.2 ಮಿಲಿಯನ್ ಹಾಗೂ ಆಮ್ ಆದ್ಮಿ ಪಾರ್ಟಿ 1.9 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿವೆ.
ಕೋರ್ಟ್ ವಿಚಾರಣೆಯೊಂದರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನೀಡಿದ್ದಾರೆನ್ನಲಾದ ಕೆಲವು ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಮೇ 16 ರಂದು ಎಕ್ಸ್ (ಟ್ವಿಟರ್) ಪ್ಲಾಟ್‌ಫಾರ್ಮ್‌ನಲ್ಲಿ ಇದೊಂದು ಸಾಮಾನ್ಯ ಜೋಕ್ ಆಗಿ ಆರಂಭವಾಗಿತ್ತು. ಮೇ 17 ರಂದು ಇದರ ಇನ್‌ಸ್ಟಾಗ್ರಾಮ್ ಖಾತೆಯನ್ನು ತೆರೆಯಲಾಗಿದ್ದು, ಕೇವಲ ನಾಲ್ಕೇ ದಿನಗಳಲ್ಲಿ ಈ ಪೇಜ್ ಜಾಗತಿಕ ಮಟ್ಟದಲ್ಲಿ ವೈರಲ್ ಆಗಿದೆ.
ಯುವ ಸಮುದಾಯವನ್ನು ಸೆಳೆದ ವೈರಲ್ ಸಂದೇಶಗಳು
ಯುವಕರಿಗಾಗಿ, ಯುವಕರಿಂದಲೇ ರಚಿತವಾದ ರಾಜಕೀಯ ಚಳುವಳಿ ಎಂದು ತನ್ನನ್ನು ತಾನು ಬಣ್ಣಿಸಿಕೊಂಡಿರುವ ಈ ಅಭಿಯಾನವು ದೇಶದ ನಿರುದ್ಯೋಗ, ಪರೀಕ್ಷಾ ಪೇಪರ್ ಲೀಕ್ ಹಗರಣಗಳು ಮತ್ತು ರಾಜಕೀಯ ಹೊಣೆಗಾರಿಕೆಯಂತಹ ಗಂಭೀರ ವಿಷಯಗಳನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡಿದೆ.
ಇದು ದೇಶದ ಸಾಮಾಜಿ ಜಾಲತಾಣಗಳ ಬಳಕೆದಾರರನ್ನು ದೊಡ್ಡ ಮಟ್ಟದಲ್ಲಿ ಸೆಳೆದಿದ್ದು, ಕೇವಲ 78 ಗಂಟೆಗಳಲ್ಲಿ 3 ಮಿಲಿಯನ್ ಹಾಗೂ ನಾಲ್ಕು ದಿನಗಳಲ್ಲಿ 9 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಹೊಂದುವ ಮೂಲಕ ದಾಖಲೆ ಬರೆದಿದೆ. ವಿಶೇಷವೆಂದರೆ, ಕೇವಲ 56 ಪೋಸ್ಟ್‌ಗಳನ್ನು ಹಾಕಿರುವ ಈ ಪೇಜ್ ಇಷ್ಟೊಂದು ದೊಡ್ಡ ಮೈಲಿಗಲ್ಲು ತಲುಪಿದೆ. ಇತ್ತ 18,000ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಹೊಂದಿರುವ ಬಿಜೆಪಿಯ ಅಧಿಕೃತ ಪೇಜ್ ಅನ್ನು ಇದು ಹಿಂದಿಕ್ಕಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ವ್ಯಂಗ್ಯ ಮತ್ತು ರಾಜಕೀಯ ವ್ಯವಸ್ಥೆಯ ಮೇಲಿನ ವಾಗ್ದಾಳಿ
ಸ್ಥಾಪಿತ ರಾಜಕೀಯ ವ್ಯವಸ್ಥೆಗಳು ಮತ್ತು ಪಕ್ಷಗಳ ದೊಡ್ಡ ಹಕ್ಕುಗಳನ್ನು ಟಾರ್ಗೆಟ್ ಮಾಡಲು ಈ ಅಭಿಯಾನವು ತೀಕ್ಷ್ಣವಾದ ಹಾಸ್ಯ ಹಾಗೂ ಮೀಮ್ಸ್ ಬಳಸುತ್ತಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಬಿಜೆಪಿಯ ಫಾಲೋವರ್ಸ್ ಸಂಖ್ಯೆಯನ್ನು ದಾಟಿದ ತಕ್ಷಣವೇ ಸಂಭ್ರಮಿಸಿದ ಈ ಪೇಜ್, ಯುವಶಕ್ತಿಯನ್ನು ಎಂದಿಗೂ ಕೀಳಾಗಿ ಅಂದಾಜಿಸಬೇಡಿ ಎಂದು ರಾಜಕೀಯ ನಾಯಕರಿಗೆ ಪರೋಕ್ಷವಾಗಿ ಟಾಂಗ್ ನೀಡಿದೆ. ಮತ್ತೊಂದು ಪೋಸ್ಟ್‌ನಲ್ಲಿ, ಅವರು ವಿಶ್ವದ ಅತಿ ದೊಡ್ಡ ಪಕ್ಷ ಎಂದಿದ್ದರು ಎಂದು ಬರೆಯುವ ಮೂಲಕ ಬಿಜೆಪಿಯ ಸದಸ್ಯತ್ವವನ್ನು ಲೇವಡಿ ಮಾಡಿದೆ. ಕೇವಲ ಇನ್‌ಸ್ಟಾಗ್ರಾಮ್ ಅಷ್ಟೇ ಅಲ್ಲದೆ, ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲೂ ಮೇ 21ರ ವೇಳೆಗೆ ಈ ಖಾತೆಯು 1.65 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಸಂಪಾದಿಸಿದೆ.
1980ರಲ್ಲಿ ಸ್ಥಾಪನೆಯಾದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪ್ರಸ್ತುತ 14 ಕೋಟಿಗೂ ಅಧಿಕ ಪ್ರಾಥಮಿಕ ಸದಸ್ಯರನ್ನು ಹೊಂದುವ ಮೂಲಕ ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸತತ ಮೂರನೇ ಅವಧಿಗೆ ಎನ್‌ಡಿಎ ಸರ್ಕಾರವು ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದು, ಇದರ ನಡುವೆ ಆನ್‌ಲೈನ್‌ನಲ್ಲಿ ಹುಟ್ಟಿಕೊಂಡ ಈ ಕಾಕ್ರೋಚ್ ಜನತಾ ಪಾರ್ಟಿ ಅಭಿಯಾನ ಸದ್ಯ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ(ಏಜೆನ್ಸೀಸ್).