ನವದೆಹಲಿ: ಚುನಾವಣಾ ಆಯೋಗದ ಹಾಗೂ ಚುನಾವಣಾ ಆಯುಕ್ತರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ, ಇದು ಆಮ್ ಆದ್ಮಿ ಪಕ್ಷದ ಬಿ-ಟೀಮ್ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಆರೋಪಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಆಡಳಿತವಿರುವ ಪಂಜಾಬ್ನಲ್ಲಿ ಡ್ರಗ್ಸ್ ವಿರೋಧಿ ಹೋರಾಟದಲ್ಲಿ ತೊಡಗಿದ್ದ ಪರ್ವಿಂದರ್ ಸಿಂಗ್, ಅಲಿಯಾಸ್ ಝೋಟಾ ಎಂಬಾತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಸಿಜೆಪಿ ಪಂಜಾಬ್ನಲ್ಲಿ ಏಕೆ ಯಾವುದೇ ಪ್ರತಿಭಟನೆ ಮಾಡುತ್ತಿಲ್ಲ ಎಂದು ಸಿಎಂ ರೇಖಾ ಪ್ರಶ್ನಿಸಿದ್ದಾರೆ.
ಪಂಜಾಬ್ನಲ್ಲಿ ಡ್ರಗ್ಸ್ ಜಾಲ ಯಾವ ಮಟ್ಟದಲ್ಲಿ ಹರಡಿದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷ ಇದರ ನಿಯಂತ್ರಣಕ್ಕೆ ಏನು ಕ್ರಮ ತೆಗೆದುಕೊಂಡಿದೆ? ಎಂದು ರೇಖಾ ಪ್ರಶ್ನಿಸಿದ್ದಾರೆ. ಮೃತ ಪರ್ವಿಂದರ್ ಸಿಂಗ್, ರಾಜ್ಯದಲ್ಲಿ ನಡೆಯುತ್ತಿದ್ದ ಡ್ರಗ್ಸ್ ಜಾಲದ ಬಗ್ಗೆ ಮಾಹಿತಿ ಬಿಚ್ಚಿಡುತ್ತಿದ್ದ. ನಿನ್ನೆ (ಅಕ್ಟೋಬರ್ 13) ಕೆಮಿಸ್ಟ್ ಅಂಗಡಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ದೊರೆತ ಹಿನ್ನಲೆ, ಸಿಂಗ್ ಅಲ್ಲಿಗೆ ಹೋದಾಗ ಅವನನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
ಆದರೆ, ಈ ಬಗ್ಗೆ ಈ ಕಾಕ್ರೋಚ್ ಪಾರ್ಟಿ ಚಕಾರ ಎತ್ತುತ್ತಿಲ್ಲ, ನಿವೇಕೆ ಒಂದು ಅಜೆಂಡಾ ಇಟ್ಟುಕೊಂಡು ಹೋರಾಟ ಮಾಡುತ್ತೀರಿ? ನಿಮಗೆ ಪಂಜಾಬ್ನಲ್ಲಿ ಆಗಿರುವ ಸಾವು ಕಾಣಿಸುತ್ತಿಲ್ಲವೇ? ಅಥವಾ ಕಾಣಿಸುತ್ತಿದ್ದರೂ ಬೇಕೆಂದೇ ಸುಮ್ಮನಿದ್ದಿರಾ? ನಿಮ್ಮ ವರ್ತನೆ ಹೋರಾಟ ಮತ್ತು ಸಿದ್ಧಾಂತ ನೋಡಿದರೆ, ನೀವು ಆಮ್ ಆದ್ಮಿ ಪಕ್ಷದ ಬಿ-ಟೀಮ್ ಎಂದು ಹೇಳಬಹುದಾಗಿದೆ ಎಂದು ಗುಡುಗಿದ್ದಾರೆ.
ಇನ್ನು ದೆಹಲಿಯಲ್ಲಿ ನಡೆಯುತ್ತಿರುವ ಎಸ್ಐಆರ್ ವಿರೋಧಿ ಪ್ರತಿಭಟನೆ ಬಗ್ಗೆ ಆಕ್ರೋಶ ಹೊರಹಾಕಿದ ರೇಖಾ ಗುಪ್ತಾ, ಪ್ರತಿಭಟನೆ ಮಾಡುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗಿದೆ. ಆದರೆ, ಇವರಿಗೆ ಎಲ್ಲಿ ಪ್ರತಿಭಟನೆಗೆ ಅನುಮತಿ ನೀಡಲಾಗಿದೆಯೋ ಅಲ್ಲಿ ಪ್ರತಿಭಟನೆ ಮಾಡುತ್ತಿಲ್ಲ, ಹಾಗೆಯೇ, ಇವರು ದೆಹಲಿ ನಿವಾಸಿಗಳ ನೆಮ್ಮದಿ ಹಾಳು ಮಾಡುತ್ತಿದ್ದು, ಅವರ ಜನ-ಜೀವನದ ಮೇಲೆನ ಕೆಟ್ಟ ಪರಿಣಾಮ ಬೀರುವಂತೆ ಮಾಡಿದ್ದಾರೆ.
ಅಂತೆಯೇ, ಹೋರಾಟದ ಹೆಸರಿನಲ್ಲಿ ರಾಜ್ಯದ ಹಾಗೂ ದೇಶದ ಸಾರ್ವಜನಿಕ ಸಂಪತ್ತನ್ನು ಹಾಳು ಮಾಡುವುದು, ದೇಶದಲ್ಲಿ ಅರಾಜಕತೆ ಮೂಡಿಸುವುದೇ ಇವರ ಸ್ಪಷ್ಟ ಉದ್ದೇಶವಾಗಿದೆ ಎಂದು ಸಿಎಂ ರೇಖಾ ಗುಪ್ತಾ ಕಿಡಿಕಾರಿದ್ದಾರೆ.
ಇನ್ನು ಎಸ್ಐಆರ್ ನೀತಿ ವಿರೋಧಿಸಿ ಹೋರಾಡುತ್ತಿರುವ ಕಾಂಗ್ರೆಸ್ ಮತ್ತು ಎಎಪಿ ಪಕ್ಷಗಳಿಗೆ ರೇಖಾ ಗುಪ್ತಾ ತರಾಟೆಗೆ ತೆಗೆದುಕೊಂಡಿದ್ದಾರೆ. ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ಚುನಾವಣೆಯಲ್ಲಿ ಗೆದ್ದು ಅಧಿಕಾರದಲ್ಲಿದೆ. ಹಾಗೆಯೇ ಕರ್ನಾಟಕ, ತೆಲಂಗಾಣ, ಕೇರಳ ಸೇರಿ ಇನ್ನು ಕೆಲ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಅಲ್ಲಿ ಎಸ್ಐಆರ್ ಮೂಲಕ ಚುನಾವಣೆ ಎದುರಿಸಿ ಗೆದ್ದರೆ, ಏನು ಸಮಸ್ಯೆ ಇರುವುದಿಲ್ಲ.
ಆದರೆ ಬಿಜೆಪಿ ಎಲ್ಲಿಯಾದರೂ ಅಧಿಕಾರಕ್ಕೆ ಬಂದರೆ ಅದು ಇವಿಎಂ ಹ್ಯಾಕ್, ಓಟ್ ಚೋರಿ, ಎಸ್ಐಆರ್ ದುರ್ಬಳಕೆ ಎಂದು ಬೊಬ್ಬೆ ಹಾಕುತ್ತಾರೆ. ಹೀಗೆಲ್ಲಾ ಹೇಳುವುದಕ್ಕೆ ನಾಚಿಕೆಯಾಗುವುದಿಲ್ಲವೇ? ಜನರು ನಿಮ್ಮೆಲ್ಲಾ ನಾಟಕಗಳನ್ನು ನೋಡುತ್ತಿದ್ದಾರೆಂದು ಅವರು ಹೇಳಿದ್ದಾರೆ, (ಏಜೆನ್ಸೀಸ್).