'ಜಿರಳೆ ಪಕ್ಷ'ಕ್ಕೆ ಜೈ ಎಂದ ಅನುರಾಗ್ ಕಶ್ಯಪ್, ಉರ್ಫಿ ಜಾವೇದ್!  
ದೇಶ

ಇಂಟರ್ನೆಟ್‌ನಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕ್ರೇಜ್​: 'ಜಿರಳೆ ಪಕ್ಷ'ಕ್ಕೆ ಜೈ ಎಂದ ಅನುರಾಗ್ ಕಶ್ಯಪ್, ಉರ್ಫಿ ಜಾವೇದ್! Cockroach Janata Party

ಮುಂಬೈ: ನೀವು ದಿನನಿತ್ಯ ಸೋಷಿಯಲ್ ಮೀಡಿಯಾ ಬಳಕೆ ಮಾಡುವ ಹವ್ಯಾಸ ಹೊಂದಿದ್ದರೆ, ನಿಮಗೆ 'ಕಾಕ್ರೋಚ್ ಜನತಾ ಪಾರ್ಟಿ' (Cockroach Janata Party) ಬಗ್ಗೆ ಖಂಡಿತವಾಗಿ ಕೇಳಿರುತ್ತಿರಾ.
ಸದ್ಯ ಇಂಟರ್ನೆಟ್ ಪ್ರಪಂಚದಲ್ಲಿ ಒಂದು ವಿಚಿತ್ರ ರಾಜಕೀಯ ಪಕ್ಷ ರಾತ್ರೋರಾತ್ರಿ ಜನ್ಮತಾಳಿದ್ದು, ಭಾರಿ ಸಂಚಲನ ಮೂಡಿಸಿದೆ. ಮಜಾ ಅಂದ್ರೆ, ಬರೀ ಸಾಮಾನ್ಯ ಯುವಕರಷ್ಟೇ ಅಲ್ಲ, ಈಗ ಗ್ಲಾಮರ್ ದುನಿಯಾದ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಮತ್ತು ಬಾಲಿವುಡ್ ಮಂದಿ ಕೂಡ ಈ ಜಿರಳೆ ಪಕ್ಷಕ್ಕೆ ಜೈ ಎನ್ನುತ್ತಾ ಸಾಲಾಗಿ ಬಂದು ಸೇರಿಕೊಳ್ಳುತ್ತಿದ್ದಾರೆ.

ಕಾಕ್ರೋಚ್ ಗೆ ಜೈ ಎಂದ ಅನುರಾಗ್ ಕಶ್ಯಪ್, ಉರ್ಫಿ ಜಾವೇದ್!

ಇನ್‌ಸ್ಟಾಗ್ರಾಮ್‌ನಲ್ಲಿ ಮೂರು ಮಿಲಿಯನ್‌ಗಿಂತಲೂ (30 ಲಕ್ಷ) ಹೆಚ್ಚು ಫಾಲೋವರ್ಸ್ ಹೊಂದಿರುವ ಈ 'ಕಾಕ್ರೋಚ್ ಜನತಾ ಪಾರ್ಟಿ'ಯ ಅಧಿಕೃತ ಪೇಜ್ ಅನ್ನು ಪ್ರಖ್ಯಾತ ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್, ನಟಿಯರಾದ ಕೊಂಕಣ ಸೇನ್ ಶರ್ಮಾ ಮತ್ತು ಇಶಾ ಗುಪ್ತಾ ಅವರೂ ಕೂಡ ಈ ಸಿಜೆಪಿ (CJP) ಹ್ಯಾಂಡಲ್ ಅನ್ನು ಫಾಲೋ ಮಾಡಲು ಶುರು ಮಾಡಿದ್ದಾರೆ.
ಇಷ್ಟೇ ಅಲ್ಲದೆ, ಟಿವಿ ಲೋಕದ ಸ್ಟಾರ್‌ಗಳಾದ ಉಮರ್ ರಿಯಾಜ್, ಅಭಿಷೇಕ್ ನಿಗಮ್, ವಿವಾದಿತ ನಟಿ ಉರ್ಫಿ ಜಾವೇದ್, ನಗ್ಮಾ ಮಿರಾಜ್ಕರ್, ಪುರವ್ ಝಾ, ಶಫಕ್ ನಾಜ್ ಮತ್ತು ಶೀಜಾನ್ ಖಾನ್ ಕೂಡ ಈ ಪಕ್ಷದ ಅಭಿಮಾನಿಗಳಾಗಿದ್ದಾರೆ. ಪ್ರಸಿದ್ಧ ಹಾಸ್ಯನಟ ಕುನಾಲ್ ಕಮ್ರಾ ಮತ್ತು ಪಂಜಾಬಿ ಸಿಂಗರ್ ಹಿಮಾಂಶಿ ಖುರಾನಾ ಕೂಡ ಈ ಸೋಶಿಯಲ್ ಮೀಡಿಯಾ ಕ್ರೇಜ್‌ಗೆ ಫಿದಾ ಆಗಿ ಬಂದು ಕೈಜೋಡಿಸಿದ್ದಾರೆ.

ಏನಿದು 'ಕಾಕ್ರೋಚ್ ಜನತಾ ಪಾರ್ಟಿ'? ಹುಟ್ಟಿಕೊಂಡಿದ್ದು ಹೇಗೆ?

ಎಲ್ಲೋ ನಡೆದ ಒಂದು ಘಟನೆ ಇಂಟರ್ನೆಟ್‌ನಲ್ಲಿ ಹೇಗೆ ದೊಡ್ಡ ಆಂದೋಲನವಾಗುತ್ತದೆ ಅನ್ನೋದಕ್ಕೆ ಈ ಪಕ್ಷವೇ ಸಾಕ್ಷಿ. ಇತ್ತೀಚೆಗೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ದೇಶದ ನಿರುದ್ಯೋಗಿ ಯುವಕರನ್ನು ಜಿರಳೆಗಳಿಗೆ (Cockroaches) ಹೋಲಿಸಿ ಮಾತನಾಡಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು. ಇದರಿಂದ ಆಕ್ರೋಶಗೊಂಡ ಯುವಕರು ಕೋಪ ಮಾಡಿಕೊಳ್ಳುವ ಬದಲು, ವಿಡಂಬನಾತ್ಮಕವಾಗಿ (Satirical) ಉತ್ತರ ಕೊಡಲು ಪ್ಲಾನ್ ಮಾಡಿದರು.
ಇದರ ಫಲವಾಗಿಯೇ ಅಭಿಜೀತ್ ದೀಪ್ಕೆ ಎಂಬುವವರು ಮೇ 16 ರಂದು ಆನ್‌ಲೈನ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯನ್ನು ಸ್ಟಾರ್ಟ್ ಮಾಡಿದರು. ಎಕ್ಸ್ (ಟ್ವಿಟರ್) ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಲಾಂಚ್ ಆದ ಕೆಲವೇ ದಿನಗಳಲ್ಲಿ ಈ ಕಾಲ್ಪನಿಕ ಪಕ್ಷ ಲಕ್ಷಾಂತರ ಯುವಕರನ್ನು ಸೆಳೆಯಿತು. ಕೇವಲ ತಮಾಷೆಗೆ ಶುರುವಾದ ಒಂದು ಜೋಕ್, ಇಂದು ಇಂಟರ್ನೆಟ್‌ನ ಅತಿ ದೊಡ್ಡ ವೈರಲ್ ರಾಜಕೀಯ ಚಳುವಳಿಯಾಗಿ ಬದಲಾಗಿದೆ.

ಜಿರಳೆ ಪಕ್ಷದ 'ಸೋಮಾರಿ' ಪ್ರಣಾಳಿಕೆ

ಸದ್ಯ ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಮೀಮ್ ಪೇಜ್‌ಗಳಲ್ಲಿ ಈ ಜಿರಳೆ ಪಕ್ಷದ್ದೇ ಅಬ್ಬರ. ಯುವಕರು ತಮಗಿರುವ ವಿಚಿತ್ರ ಹಾಗೂ ಮುಜುಗರದ ಜೀವನ ಕೌಶಲ್ಯಗಳನ್ನು ಮುಂದಿಟ್ಟುಕೊಂಡು, ನಾನು ಈ ಪಕ್ಷದ ಎಂಎಲ್‌ಎ ಸೀಟಿಗೆ ಅರ್ಹ ಅಭ್ಯರ್ಥಿ, ದಯವಿಟ್ಟು ನನಗೆ ಟಿಕೆಟ್ ಕೊಡಿ ಎಂದು ತಮಾಷೆಯಾಗಿ ಬೇಡಿಕೊಳ್ಳುತ್ತಿದ್ದಾರೆ.
ಈ ಪಕ್ಷದ ಪ್ರಣಾಳಿಕೆ (Manifesto) ಅಂತೂ ಬಿದ್ದು ಬಿದ್ದು ನಗುವಂತಿದೆ. ತಮ್ಮ ಪಕ್ಷವನ್ನು ಜಾತ್ಯತೀತ, ಸಮಾಜವಾದಿ, ಪ್ರಜಾಪ್ರಭುತ್ವ ಮತ್ತು ಸೋಮಾರಿ ಪಕ್ಷ ಎಂದು ಕರೆದುಕೊಂಡಿರುವ CJP, ಕೆಲವು ಸಖತ್ ಡಿಮ್ಯಾಂಡ್‌ಗಳನ್ನು
ಮುಖ್ಯ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ ಯಾವುದೇ ರಾಜ್ಯಸಭಾ ಸೀಟುಗಳನ್ನು ನೀಡಬಾರದು. ಸಂಸತ್ತಿನ ಒಟ್ಟು ಬಲವನ್ನು ಹೆಚ್ಚಿಸದೆಯೇ ಮಹಿಳೆಯರಿಗೆ ಶೇ. 50 ರಷ್ಟು ಕಡ್ಡಾಯ ಮೀಸಲಾತಿ ಕೊಡಬೇಕು. ಪಕ್ಷಾಂತರ ಮಾಡುವ (ರೆಸಾರ್ಟ್ ರಾಜಕೀಯ ಮಾಡುವ) ಎಂಎಲ್‌ಎ ಮತ್ತು ಎಂಪಿಗಳಿಗೆ 20 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಬ್ಯಾನ್ ಮಾಡಬೇಕು. ಇದು ಈ ಪಕ್ಷದ ಪ್ರನಾಳಿಕೆಯಾಗಿದೆ,(ಏಜನ್ಸೀಸ್​).