ತಮಿಳುನಾಡಿನಲ್ಲಿ ಹೊಸ ‘ಜಾತ್ಯತೀತ ಮೈತ್ರಿಕೂಟ’ಕ್ಕೆ ಸಿಎಂ ವಿಜಯ್ ಮಾಸ್ಟರ್ ಪ್ಲಾನ್: ಜುಲೈ 1ಕ್ಕೆ ECR ರೆಸಾರ್ಟ್‌ನಲ್ಲಿ ಮಹತ್ವದ ಸಭೆ!
ಚೆನ್ನೈ: ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದು ಕೇವಲ ಎರಡೇ ತಿಂಗಳು ಕಳೆಯುವಷ್ಟರಲ್ಲಿ, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್(CM Vijay) ನೇತೃತ್ವದ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ರಾಜ್ಯ ರಾಜಕೀಯದಲ್ಲಿ ಮತ್ತೊಂದು ಭಾರಿ ಬಿರುಗಾಳಿ ಎಬ್ಬಿಸಿದೆ. ಡಿಎಂಕೆ ಮೈತ್ರಿಕೂಟದಲ್ಲಿದ್ದ ಬಹುತೇಕ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳನ್ನು ತನ್ನತ್ತ ಸೆಳೆದಿರುವ ಟಿವಿಕೆ, ಈಗ ತನ್ನದೇ ನೇತೃತ್ವದಲ್ಲಿ ಹೊಸ ಜಾತ್ಯತೀತ ಮೈತ್ರಿಕೂಟ ರಚಿಸಲು ಅತ್ಯಂತ ವೇಗವಾಗಿ ದಾಳ ಉರುಳಿಸಿದೆ.
ಈ ಹೊಸ ಮೈತ್ರಿಕೂಟದ ನೀಲನಕ್ಷೆ ಸಿದ್ಧಪಡಿಸಲು ಮತ್ತು ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಹಾಗೂ ಟಿವಿಕೆ ಅಧ್ಯಕ್ಷ ವಿಜಯ್ ಅವರು ಜುಲೈ 1 ರಂದು (ಬುಧವಾರ) ಚೆನ್ನೈನ ಪ್ರಸಿದ್ಧ ಈಸ್ಟ್ ಕೋಸ್ಟ್ ರೋಡ್ (ECR) ನಲ್ಲಿರುವ ಐಷಾರಾಮಿ ಪಂಚತಾರಾ ರೆಸಾರ್ಟ್‌ನಲ್ಲಿ ಮಿತ್ರಪಕ್ಷಗಳ ನಾಯಕರ ಮಹತ್ವದ ಸಭೆ ಕರೆದಿದ್ದಾರೆ.
ಡಿಎಂಕೆ ಮೈತ್ರಿಕೂಟವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದ ವಿಜಯ್!
2019 ರಿಂದ ಸತತ ಮೂರು ಚುನಾವಣೆಗಳನ್ನು ಗೆದ್ದು ಬೀಗುತ್ತಿದ್ದ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟವನ್ನು (SPA) ಸಿಎಂ ವಿಜಯ್ ಈಗ ಸಂಪೂರ್ಣವಾಗಿ ಮುರಿದು ಚೂರಾಗಿಸಿದ್ದಾರೆ. ಈ ಸಭೆಗೆ ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ, ಐಯುಎಂಎಲ್, ವಿಸಿಕೆ ಮತ್ತು ಎಂಡಿಎಂಕೆ ಪಕ್ಷಗಳ ಮುಖಂಡರಿಗೆ ಅಧಿಕೃತ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಟಿವಿಕೆಯ ಹಿರಿಯ ನಾಯಕರಾದ ಎನ್. ಆನಂದ್ ಮತ್ತು ಆಧವ್ ಅರ್ಜುನ ಅವರು ವೈಯಕ್ತಿಕವಾಗಿ ಎಲ್ಲಾ ಪಕ್ಷಗಳ ನಾಯಕರನ್ನು ಭೇಟಿಯಾಗಿ ಸಭೆಗೆ ಆಹ್ವಾನಿಸುತ್ತಿದ್ದಾರೆ.
ಕಳೆದ ಶನಿವಾರವಷ್ಟೇ ಎಂಡಿಎಂಕೆ ಪಕ್ಷವು ಅಧಿಕೃತವಾಗಿ ಡಿಎಂಕೆ ಮೈತ್ರಿಕೂಟದಿಂದ ಹೊರಬಂದು ಟಿವಿಕೆಗೆ ಬೆಂಬಲ ಘೋಷಿಸಿದೆ. ಪ್ರಸ್ತುತ ಕಾಂಗ್ರೆಸ್, ವಿಸಿಕೆ ಮತ್ತು ಐಯುಎಂಎಲ್ ಪಕ್ಷಗಳು ಈಗಾಗಲೇ ವಿಜಯ್ ಸರ್ಕಾರದಲ್ಲಿ ಭಾಗಿಯಾಗಿವೆ. ಎಂಡಿಎಂಕೆಯ ಇಬ್ಬರು ಶಾಸಕರು ಡಿಎಂಕೆ ಚಿಹ್ನೆಯಡಿ ಸ್ಪರ್ಧಿಸಿ ಗೆದ್ದಿರುವುದರಿಂದ ತಾಂತ್ರಿಕ ಕಾರಣಗಳಿಗಾಗಿ ರಾಜೀನಾಮೆ ನೀಡಿಲ್ಲವಾದರೂ, ಪಕ್ಷವು ವಿಜಯ್ ಪರ ನಿಂತಿದೆ. ಇನ್ನು ಎಡಪಕ್ಷಗಳಾದ ಸಿಪಿಐ ಮತ್ತು ಸಿಪಿಐ(ಎಂ) ಈ ಹೊಸ ಮೈತ್ರಿಕೂಟಕ್ಕೆ ಹೇಗೆ ಪ್ರತಿಕ್ರಿಯಿಸಲಿವೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಡಿಎಂಕೆ ಒಂಟಿ, ವಿಜಯ್ ಸರ್ಕಾರ ಪತನದ ವದಂತಿಗಳಿಗೆ ಬ್ರೇಕ್
ಏಪ್ರಿಲ್ 23 ರಂದು ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೆ ಹಂಗ್ ಅಸೆಂಬ್ಲಿ ಸೃಷ್ಟಿಯಾಗಿತ್ತು. ಆಗ ಸಣ್ಣ ಪಕ್ಷಗಳಿಗೆ ಅಧಿಕಾರದಲ್ಲಿ ಪಾಲು ನೀಡುವ ವಿಜಯ್ ಅವರ ಆಫರ್‌ಗೆ ಮಾರುಹೋದ ಕಾಂಗ್ರೆಸ್, ಡಿಎಂಕೆ ಕೈಬಿಟ್ಟು ಟಿವಿಕೆಗೆ ಬೆಂಬಲ ನೀಡಿದ ಮೊದಲ ಪಕ್ಷವಾಗಿ ಹೊರಹೊಮ್ಮಿತ್ತು. ಪ್ರಸ್ತುತ 234 ಸದಸ್ಯರ ಬಲದ ವಿಧಾನಸಭೆಯಲ್ಲಿ ಟಿವಿಕೆ ಪಕ್ಷವು 107 ಸ್ವಂತ ಶಾಸಕರನ್ನು ಹೊಂದಿದ್ದು, ಇತರ ಪಕ್ಷಗಳ 13 ಶಾಸಕರು ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಎಐಎಡಿಎಂಕೆಯ ಹಲವು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಟಿವಿಕೆ ಸೇರುತ್ತಿರುವುದು ವಿರೋಧ ಪಕ್ಷಗಳ ಕಣ್ಣು ಕೆಂಪಾಗಿಸಿದೆ. ವಿಜಯ್ ಅವರು 'ಕುದುರೆ ವ್ಯಾಪಾರ'ದ ಮೂಲಕ ಬಹುಮತ ಸಾಬೀತುಪಡಿಸಲು ಹೊರಟಿದ್ದಾರೆ ಎಂದು ಡಿಎಂಕೆ ಟೀಕಿಸುತ್ತಿದೆ. ಅಷ್ಟೇ ಅಲ್ಲದೆ, ತಮಿಳುನಾಡಿನಲ್ಲಿ ಯಾವುದೇ ಕ್ಷಣದಲ್ಲಿ ಮಧ್ಯಂತರ ಚುನಾವಣೆ ಬರಬಹುದು, ವಿಜಯ್ ಸರ್ಕಾರ ಪತನವಾಗಲಿದೆ ಎಂದು ಡಿಎಂಕೆ ವದಂತಿ ಹಬ್ಬಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜುಲೈ 1 ರ ಸಭೆಯು ವಿಜಯ್ ಅವರ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಲಿದ್ದು, ರಾಜ್ಯದಲ್ಲಿ ಡಿಎಂಕೆ ಸಂಪೂರ್ಣ ಒಂಟಿಯಾಗಿದೆ ಎಂಬುದನ್ನು ಜಗತ್ತಿಗೆ ಸಾರಲು ಸಿಎಂ ವಿಜಯ್ ಈ ತಂತ್ರ ರೂಪಿಸಿದ್ದಾರೆ.
ಬಿಕ್ಕಟ್ಟಿನ ಸಮಯದಲ್ಲಿ ನಮಗೆ ಬೆಂಬಲ ನೀಡಿದ ಮಿತ್ರಪಕ್ಷಗಳ ನಾಯಕರಿಗೆ ಕೃತಜ್ಞತೆ ಸಲ್ಲಿಸುವುದು ಈ ಸಭೆಯ ಪ್ರಾಥಮಿಕ ಉದ್ದೇಶವಾಗಿದೆ. ತಮಿಳುನಾಡಿನಲ್ಲಿ ಸದ್ಯಕ್ಕೆ ಯಾವುದೇ ಚುನಾವಣೆ ಇಲ್ಲದಿದ್ದರೂ, ನಾವೆಲ್ಲರೂ ಒಂದಾಗಿದ್ದೇವೆ ಎಂಬ ಒಗ್ಗಟ್ಟಿನ ಸಂದೇಶವನ್ನು ರವಾನಿಸಲು ಸಿಎಂ ವಿಜಯ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಟಿವಿಕೆ ಪಕ್ಷದ ಮೂಲಗಳು ತಿಳಿಸಿವೆ.
ಈ ಐತಿಹಾಸಿಕ ಸಭೆಯಲ್ಲಿ ಮುಖ್ಯಮಂತ್ರಿ ವಿಜಯ್ ಅವರು ತಮ್ಮದೇ ನಾಯಕತ್ವದಲ್ಲಿ ಅಧಿಕೃತವಾಗಿ 'ಜಾತ್ಯತೀತ ರಂಗ' ರಚಿಸುವ ಪ್ರಸ್ತಾಪವನ್ನು ಮುಂದಿಡಲಿದ್ದಾರೆ. ಕಾಂಗ್ರೆಸ್, ವಿಸಿಕೆ, ಎಂಡಿಎಂಕೆ ಈ ಮೈತ್ರಿಗೆ ತಕ್ಷಣವೇ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದ್ದು, ಕರಾವಳಿ ತೀರದ ರೆಸಾರ್ಟ್ ರಾಜಕಾರಣ ತಮಿಳುನಾಡು ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲು ಸಜ್ಜಾಗಿದೆ,(ಏಜೆನ್ಸೀಸ್).