ತಮಿಳುನಾಡು ಸರ್ಕಾರಿ ಉದ್ಯೋಗ ನೇಮಕಾತಿ ವಯೋಮಿತಿ 5 ವರ್ಷ ಹೆಚ್ಚಳ 
ದೇಶ

ತಮಿಳುನಾಡು ಯುವಜನತೆಗೆ ಸಿಎಂ ವಿಜಯ್ ದೀಪಾವಳಿ ಗಿಫ್ಟ್: ಸರ್ಕಾರಿ ಹುದ್ದೆಗಳ ವಯೋಮಿತಿ 5 ವರ್ಷ ಏರಿಕೆ! CM Vijay

ಚೆನ್ನೈ: ಸರ್ಕಾರಿ ನೌಕರಿ ಹಿಡಿಯಬೇಕು ಅಂತ ವರ್ಷಗಳಿಂದ ಹಗಲಿರುಳು ನಿದ್ದೆಗೆಟ್ಟು ಓದುತ್ತಿರುವ ಲಕ್ಷಾಂತರ ಯುವಜನರಿಗೆ ತಮಿಳುನಾಡು ಸರ್ಕಾರ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಸರ್ಕಾರಿ ಹುದ್ದೆಗಳ ನೇರ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು ಬರೋಬ್ಬರಿ 5 ವರ್ಷಗಳಷ್ಟು ಹೆಚ್ಚಿಸಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ವಯಸ್ಸು ಮೀರಿ ಹೋಯಿತಲ್ಲ ಅಂತ ಕಣ್ಣೀರಿಡುತ್ತಿದ್ದ ಆಕಾಂಕ್ಷಿಗಳಿಗೆ ಈ ನಿರ್ಧಾರ ಹೊಸ ಭರವಸೆ ಮೂಡಿಸಿದೆ. ವಿಶೇಷ ಅಂದರೆ, ಹಿಂದುಳಿದ ವರ್ಗಗಳು (BC), ಅತ್ಯಂತ ಹಿಂದುಳಿದ ವರ್ಗಗಳು (MBC), ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಅಭ್ಯರ್ಥಿಗಳಿಗೆ ಈಗಾಗಲೇ ಸಿಗುತ್ತಿರುವ ನಿಯಮಾನುಸಾರ ವಯೋಮಿತಿ ಸಡಿಲಿಕೆಯ ಜೊತೆಗೆ ಈ ಹೆಚ್ಚುವರಿ 5 ವರ್ಷಗಳ ವಿನಾಯಿತಿಯೂ ಸಿಗಲಿದೆ. 2026ರ ಅಕ್ಟೋಬರ್ 30 ರಿಂದಲೇ ಜಾರಿಗೆ ಬರುವಂತೆ ಮುಂದಿನ ಐದು ವರ್ಷಗಳ ಕಾಲ ಈ ನಿಯಮ ಚಾಲ್ತಿಯಲ್ಲಿರುತ್ತದೆ.

ಯಾವ ಪರೀಕ್ಷೆಗೆ ಎಷ್ಟು ವಯಸ್ಸು ಹೆಚ್ಚಳ? ಇಲ್ಲಿದೆ ಫುಲ್ ಡಿಟೇಲ್ಸ್!

ಗ್ರೂಪ್ 1 ಪರೀಕ್ಷೆ: ಜನರಲ್ ಕೆಟಗರಿ (ಸಾಮಾನ್ಯ ವರ್ಗ) ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯನ್ನು 32 ರಿಂದ 37 ವರ್ಷಕ್ಕೆ ಏರಿಸಲಾಗಿದೆ. ಮೀಸಲಾತಿ ವ್ಯಾಪ್ತಿಗೆ ಬರುವ ಅಭ್ಯರ್ಥಿಗಳಿಗೆ ಈ ಮಿತಿಯನ್ನು 37 ರಿಂದ 42 ವರ್ಷಕ್ಕೆ ಹೆಚ್ಚಿಸಲಾಗಿದೆ.

ಗ್ರೂಪ್ II ಮತ್ತು ಗ್ರೂಪ್ II-A: ಸಾಮಾನ್ಯ ವರ್ಗದ ಆಕಾಂಕ್ಷಿಗಳಿಗೆ ವಯೋಮಿತಿ 30 ರಿಂದ 35 ವರ್ಷಕ್ಕೆ ಏರಿಕೆಯಾಗಿದೆ. ಇನ್ನು ಮೀಸಲಾತಿ ಪಡೆಯುವ ಅಭ್ಯರ್ಥಿಗಳಿಗೆ ಯಾವುದೇ ಗರಿಷ್ಠ ವಯಸ್ಸಿನ ಮಿತಿಯೇ ಇರುವುದಿಲ್ಲ.

ಗ್ರೂಪ್ IV ಪರೀಕ್ಷೆ: ಗ್ರಾಮ ಆಡಳಿತಾಧಿಕಾರಿ ಸೇರಿದಂತೆ ಹಲವು ಹುದ್ದೆಗಳನ್ನೊಳಗೊಂಡ ಗ್ರೂಪ್-4 ಪರೀಕ್ಷೆಗೂ ಗರಿಷ್ಠ ವಯೋಮಿತಿಯನ್ನು 32 ರಿಂದ 37 ವರ್ಷಕ್ಕೆ ಹೆಚ್ಚಿಸಲಾಗಿದೆ.

ವಿಜಯ್ ಸರ್ಕಾರದ ಸಾಲು ಸಾಲು ಜನಪ್ರಿಯ ಯೋಜನೆಗಳು!

ಕೇವಲ ಉದ್ಯೋಗಾಕಾಂಕ್ಷಿಗಳಿಗೆ ಮಾತ್ರವಲ್ಲ, ಅಧಿಕಾರಕ್ಕೆ ಬಂದಾಗಿನಿಂದಲೂ ಸಿಎಂ ವಿಜಯ್ ಜನಪರ ನಿರ್ಧಾರಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಅರ್ಹ ಗೃಹಬಳಕೆದಾರರಿಗೆ ನೀಡಲಾಗುತ್ತಿದ್ದ ಉಚಿತ ಕರೆಂಟ್ ಪ್ರಮಾಣವನ್ನು ಪ್ರತಿ ಎರಡು ತಿಂಗಳಿಗೆ 100 ಯೂನಿಟ್‌ನಿಂದ 200 ಯೂನಿಟ್‌ಗೆ ಡಬಲ್ ಮಾಡಲಾಗಿತ್ತು.

ಶಾಲೆ, ಕಾಲೇಜು, ಧಾರ್ಮಿಕ ಸ್ಥಳಗಳು ಹಾಗೂ ಬಸ್ ನಿಲ್ದಾಣಗಳ ಸಮೀಪವಿದ್ದ 717 ‘ಟಾಸ್ಮಾಕ್’ (TASMAC) ಮದ್ಯದಂಗಡಿಗಳನ್ನು ಮುಚ್ಚಿಸಿ ಸಾರ್ವಜನಿಕರ, ಅದರಲ್ಲೂ ಮಹಿಳೆಯರ ಮೆಚ್ಚುಗೆ ಗಳಿಸಿದ್ದರು. ಮಹಿಳಾ ರಕ್ಷಣೆಗಾಗಿ ಪ್ರತ್ಯೇಕ ಪೊಲೀಸ್ ಪಡೆಯನ್ನೂ ಘೋಷಿಸಲಾಗಿದೆ. ಇನ್ನು ಶಿಕ್ಷಣ ಕ್ಷೇತ್ರದಲ್ಲೂ ವಿದ್ಯಾರ್ಥಿಗಳಿಗೆ ವಿಸ್ತೃತ ಉಪಹಾರ ಯೋಜನೆ, ಕಾಲೇಜು ಯುವಕ-ಯುವತಿಯರಿಗೆ ಲ್ಯಾಪ್‌ಟಾಪ್ ವಿತರಣೆಗಳು ಈಗಾಗಲೇ ಸದ್ದು ಮಾಡುತ್ತಿವೆ.

ಅನ್ನದಾತರಿಗೆ ಸಾಲ ಮನ್ನಾ, ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟೋ ಮಗುವಿಗೆ ಚಿನ್ನದ ಉಂಗುರ!

ರೈತರ ನೆರವಿಗೆ ಧಾವಿಸಿರುವ ಸರ್ಕಾರ, ಪ್ರಾಥಮಿಕ ಸಹಕಾರಿ ಕೃಷಿ ಸಾಲಗಳಲ್ಲಿ 75,000 ರೂಪಾಯಿವರೆಗೆ ಸಾಲ ಮನ್ನಾ ಮಾಡಿದೆ. ಅಲ್ಲದೆ 1 ಲಕ್ಷ ರೂಪಾಯಿವರೆಗಿನ ಸಾಲಗಳಿಗೂ ಹೆಚ್ಚುವರಿ ರಿಲೀಫ್ ನೀಡಿದ್ದು, ಸುಮಾರು 13.34 ಲಕ್ಷ ರೈತ ಕುಟುಂಬಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಸಾಮಾಜಿಕ ಕಳಕಳಿಯ ಭಾಗವಾಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಪ್ರತಿಯೊಂದು ಹಸುಗೂಸಿಗೂ 1 ಗ್ರಾಂ ತೂಕದ ಬಂಗಾರದ ಉಂಗುರ ಉಡುಗೊರೆ ನೀಡುವ ಯೋಜನೆ ಹಾಗೂ ಬಡ ಹೆಣ್ಣುಮಕ್ಕಳ ಮದುವೆಗೆ ಆರ್ಥಿಕ ನೆರವು ಕೊಡುವ ಯೋಜನೆಗಳು ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿವೆ, (ಏಜೆನ್ಸೀಸ್​).