ಪೈರಸಿ ದಂಧೆಕೋರರಿಗೆ ಸಿಎಂ ವಿಜಯ್ ಬಿಗ್ ಶಾಕ್! ಚಿತ್ರರಂಗದ ಉಳಿವಿಗಾಗಿ ದಳಪತಿ ಮುಂದೆ ಕಮಲ್ ಇಟ್ಟ ಆ 6 ಬೇಡಿಕೆಗಳೇನು!
ಚೆನ್ನೈ: ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ನೂತನ ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕ ಮಾಡಿಕೊಂಡಿರುವ ವಿಜಯ್(Kamal Haasan Meets CM Vijay) ಅವರನ್ನು ಶನಿವಾರ ಹಿರಿಯ ನಟ ಮತ್ತು ಮಕ್ಕಳ್ ನೀಧಿ ಮೈಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಖುದ್ದಾಗಿ ಭೇಟಿಯಾಗಿದ್ದಾರೆ. ಈ ಸೌಹಾರ್ದಯುತ ಭೇಟಿಯ ವೇಳೆ ತಮಿಳು ಚಿತ್ರರಂಗ ಪ್ರಸ್ತುತ ಎದುರಿಸುತ್ತಿರುವ ಭೀಕರ ಸವಾಲುಗಳು ಮತ್ತು ಬಿಕ್ಕಟ್ಟುಗಳ ಕುರಿತು ಇಬ್ಬರು ನಾಯಕರು ಸುದೀರ್ಘವಾಗಿ ಚರ್ಚಿಸಿದರು. ಇದೇ ವೇಳೆ ಕಮಲ್ ಹಾಸನ್ ಅವರು ಚಿತ್ರರಂಗದ ಉಳಿವಿಗಾಗಿ 6 ಪ್ರಮುಖ ಬೇಡಿಕೆಗಳನ್ನೊಳಗೊಂಡ ಅಧಿಕೃತ ಮನವಿ ಪತ್ರವನ್ನು ಸಿಎಂ ವಿಜಯ್ ಅವರಿಗೆ ಹಸ್ತಾಂತರಿಸಿದ್ದಾರೆ.
ಅವರ ವಿನಯತೆ ನನ್ನಲ್ಲಿ ಹೆಮ್ಮೆ ಮೂಡಿಸಿತು - ಕಮಲ್ ಹಾಸನ್ ಭಾವುಕ ಟ್ವೀಟ್!
ಈ ಬಗ್ಗೆ ಭೇಟಿಯ ನಂತರ Xನಲ್ಲಿ ಸಿಎಂ ವಿಜಯ್ ಅವರೊಂದಿಗಿನ ಫೋಟೋಗಳನ್ನು ಹಂಚಿಕೊಂಡ ಕಮಲ್ ಹಾಸನ್ ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ. ಇಂದು ನಾನು ತಮಿಳುನಾಡಿನ ಗೌರವಾನ್ವಿತ ಮುಖ್ಯಮಂತ್ರಿ, ಸಹೋದರ ವಿಜಯ್ ಅವರನ್ನು ಖುದ್ದಾಗಿ ಭೇಟಿಯಾಗಿ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದೆ. ತಮಿಳುನಾಡಿನ ಪ್ರಗತಿಗಾಗಿ ಅವರು ಹೊಂದಿರುವ ನೂರಾರು ಕನಸುಗಳನ್ನು ನನ್ನೊಂದಿಗೆ ಅತ್ಯಂತ ಉತ್ಸಾಹದಿಂದ ಹಂಚಿಕೊಂಡರು. ಈ ಸಭೆಯ ಉದ್ದಕ್ಕೂ ಅವರು ತೋರಿದ ವಿನಯತೆ ಮತ್ತು ಆತ್ಮೀಯತೆ ನನ್ನಲ್ಲಿ ಅಪಾರ ಹೆಮ್ಮೆ ಮೂಡಿಸಿತು. ಪ್ರಸ್ತುತ ಹಲವು ಅಡೆತಡೆಗಳನ್ನು ಎದುರಿಸುತ್ತಿರುವ ತಮಿಳು ಚಿತ್ರರಂಗಕ್ಕೆ ತಮಿಳುನಾಡು ಸರ್ಕಾರದ ಬೆಂಬಲ ಅತ್ಯಗತ್ಯ ಎಂಬುದನ್ನು ಒತ್ತಿಹೇಳುತ್ತಾ, ನಾನು ಅವರಿಗೆ 6 ಪ್ರಮುಖ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದ್ದೇನೆ. ಒಳಿತೇ ಮರುಕಳಿಸಲಿ ಎಂದು ಬರೆದುಕೊಂಡಿದ್ದಾರೆ.
ಚಿತ್ರರಂಗವನ್ನು ಬೆಚ್ಚಿಬೀಳಿಸಿದ ಕಮಲ್ ಹಾಸನ್ ಅವರ 6 ಮಹಾ ಬೇಡಿಕೆಗಳು
ಕಮಲ್ ಹಾಸನ್ ಅವರು ತಮಿಳುನಾಡು ಸರ್ಕಾರಕ್ಕೆ ಸಾರ್ವಜನಿಕವಾಗಿ ನೀಡಿರುವ ಬೇಡಿಕೆಗಳ ಪತ್ರದಲ್ಲಿ ಚಿತ್ರರಂಗದ ಚಿತ್ರಣವನ್ನೇ ಬದಲಿಸಬಲ್ಲ ಕೆಲವು ಕ್ರಾಂತಿಕಾರಿ ಪ್ರಸ್ತಾಪಗಳನ್ನು ಮುಂದಿಟ್ಟಿದ್ದಾರೆ. ಆ ಪ್ರಮುಖ ಬೇಡಿಕೆಗಳು ಇಲ್ಲಿವೆ.
ಸರ್ಕಾರಿ ಸ್ವಾಮ್ಯದ OTT ಪ್ಲಾಟ್‌ಫಾರ್ಮ್: ತಮಿಳು ಪ್ರೇಕ್ಷಕರಿಗೆ ತಮಿಳು ಸಿನಿಮಾಗಳು, ಸ್ವತಂತ್ರ ಚಲನಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ಅತ್ಯಂತ ಕಡಿಮೆ ಹಾಗೂ ಸಬ್ಸಿಡಿ ದರದಲ್ಲಿ ಒದಗಿಸಲು ತಮಿಳುನಾಡು ಸರ್ಕಾರವೇ ಖುದ್ದಾಗಿ ಒಂದು ಸರ್ಕಾರಿ ಒಟಿಟಿ ಸಂಸ್ಥೆಯನ್ನು ಪ್ರಾರಂಭಿಸಬೇಕು.
ಶೇ. 10 ರಷ್ಟು ಪ್ರೊಡಕ್ಷನ್ ಇನ್ಸೆಂಟಿವ್: ಭಾರತದ ಯಾವುದೇ ಚಲನಚಿತ್ರಗಳು ತಮ್ಮ ಶೇ. 50ಕ್ಕಿಂತ ಹೆಚ್ಚು ಶೂಟಿಂಗ್ ಅನ್ನು ತಮಿಳುನಾಡಿನಲ್ಲಿ ಪೂರ್ಣಗೊಳಿಸಿದರೆ, ಆ ಚಿತ್ರದ ಒಟ್ಟು ಬಜೆಟ್‌ನ ಶೇ. 10 ರಷ್ಟು ಹಣವನ್ನು ಸರ್ಕಾರವೇ ಪ್ರೋತ್ಸಾಹಕ ಧನವಾಗಿ ನೀಡಬೇಕು. ಇದರಿಂದ ತಮಿಳುನಾಡು ಮತ್ತೆ ದೇಶದ ನಂಬರ್ 1 ಶೂಟಿಂಗ್ ಹಬ್ ಆಗಿ ಹೊರಹೊಮ್ಮಲಿದ್ದು, ಪ್ರವಾಸೋದ್ಯಮ ಮತ್ತು ಸ್ಥಳೀಯರಿಗೆ ಭಾರಿ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ.
ಸ್ಥಳೀಯ ಸಂಸ್ಥೆಗಳ ಮನರಂಜನಾ ತೆರಿಗೆ ರದ್ದು: ದಿನದಿಂದ ದಿನಕ್ಕೆ ಸಿನಿಮಾ ನಿರ್ಮಾಣ ವೆಚ್ಚ, ವಿತರಣೆ ಮತ್ತು ಚಿತ್ರಮಂದಿರಗಳ ನಿರ್ವಹಣಾ ವೆಚ್ಚ ಗಗನಕ್ಕೇರುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯ ವಿಧಿಸಲಾಗುತ್ತಿರುವ ಶೇ. 4 ರಷ್ಟು ಸ್ಥಳೀಯ ಸಂಸ್ಥೆಗಳ ಮನರಂಜನಾ ತೆರಿಗೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಚಿತ್ರರಂಗಕ್ಕೆ ಆರ್ಥಿಕ ರಿಲೀಫ್ ನೀಡಬೇಕು.
ಖಡಕ್ ಆಂಟಿ-ಪೈರಸಿ ಸೆಕ್ಯೂರಿಟಿ ಟೀಮ್: ಪೈರಸಿ ಜಾಲವು ಸಾವಿರಾರು ಕಲಾವಿದರು, ತಂತ್ರಜ್ಞರು ಮತ್ತು ನಿರ್ಮಾಪಕರ ಕಠಿಣ ಶ್ರಮ ಹಾಗೂ ಕೋಟ್ಯಂತರ ರೂಪಾಯಿ ಹೂಡಿಕೆಯನ್ನು ನಾಶಪಡಿಸುತ್ತಿದೆ. ಇದನ್ನು ತಡೆಯಲು ತಮಿಳುನಾಡು ಪೊಲೀಸ್ ಸೈಬರ್ ಕ್ರೈಮ್ ವಿಭಾಗದ ಅಡಿಯಲ್ಲಿ ಪ್ರತ್ಯೇಕ ಆಂಟಿ-ಪೈರಸಿ ಜಾರಿ ತಂಡವನ್ನು ರಚಿಸಬೇಕು. ಪೈರಸಿ ಕಂಟೆಂಟ್ ಕಂಡುಬಂದ ತಕ್ಷಣವೇ ಅದನ್ನು ಡಿಜಿಟಲ್ ಲೋಕದಿಂದ ಡಿಲೀಟ್ ಮಾಡುವ ಸರ್ವಾಧಿಕಾರವನ್ನು ಈ ತಂಡಕ್ಕೆ ನೀಡಬೇಕು.
ಕಾಲಿವುಡ್‌ಗೆ ಸಿಗುತ್ತಾ ಹೊಸ ಕಾಯಕಲ್ಪ..?
ಖುದ್ದಾಗಿ ಚಿತ್ರರಂಗದಿಂದಲೇ ಬಂದಿರುವ ದಳಪತಿ ವಿಜಯ್ ಈಗ ರಾಜ್ಯದ ಮುಖ್ಯಮಂತ್ರಿಯಾಗಿರುವುದರಿಂದ, ಸಿನಿಮಾ ರಂಗದ ಕಷ್ಟಗಳು ಅವರಿಗೆ ಚೆನ್ನಾಗಿ ತಿಳಿದಿವೆ. ಹೀಗಾಗಿ ಕಮಲ್ ಹಾಸನ್ ನೀಡಿರುವ ಈ ಬೇಡಿಕೆಗಳಿಗೆ ವಿಜಯ್ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ಎಲ್ಲಾ ಸಾಧ್ಯತೆಗಳಿವೆ. ವಿಶೇಷವಾಗಿ ತಮಿಳುನಾಡಿನಲ್ಲಿ ಶೂಟಿಂಗ್ ಮಾಡುವ ಚಿತ್ರಗಳಿಗೆ ಶೇ. 10 ರಷ್ಟು ಇನ್ಸೆಂಟಿವ್ ನೀಡುವ ಪ್ರಸ್ತಾಪ ಜಾರಿಯಾದರೆ, ಅದು ನೆರೆರಾಜ್ಯಗಳಾದ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ಚಿತ್ರರಂಗದ ಮೇಲೂ ಭಾರಿ ಪ್ರಭಾವ ಬೀರಲಿದೆ,(ಏಜೆನ್ಸೀಸ್).