ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರು ಬುಧವಾರ(ಮೇ 27) ನವದೆಹಲಿಗೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದ್ದು, ಸಿಎಂ ಆದ ಬಳಿಕ ಇದು ಅವರ ಮೊದಲ ದೆಹಲಿ ಭೇಟಿಯಾಗಲಿದ್ದು, ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇದೆ.
ಸಿಎಂ ವಿಜಯ್ ಅವರ ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ, ನಾಳೆಯ ದಿನ ಪೂರ್ತಿ ಭೇಟಿಯಾಗಿರಲಿದೆ. ಮತ್ತು ಮೇ 28ರಂದು ಚೆನ್ನೈಗೆ ಮರಳುವ ನಿರೀಕ್ಷೆಯಿದೆ. ಮತ್ತು ನಾಳೆ ಸಂಜೆ 4.30ರ ಸುಮಾರಿಗೆ ಪ್ರಧಾನಿ ಮೋದಿ ಮತ್ತು ಸಿಎಂ ವಿಜಯ್ ಭೇಟಿಗೆ ಸಮಯ ನಿಗದಿಯಾಗಿದೆ ಎನ್ನಲಾಗಿದೆ.
ಸಭೆಯಲ್ಲಿ ವಿಜಯ್ ತಮಿಳುನಾಡಿನ ಅವಶ್ಯಕತೆಗಳ ಕುರಿತು ವಿವರವಾದ ಮನವಿ ಪತ್ರವನ್ನು ಸಲ್ಲಿಸುವ ನಿರೀಕ್ಷೆಯಿದೆ. ಜೊತೆಗೆ ವಿವಿಧ ಯೋಜನೆಗಳಿಗೆ ಹಣ ಹಂಚಿಕೆ, ಅಭಿವೃದ್ಧಿ ಯೋಜನೆಗಳಿಗೆ ಬಾಕಿ ಇರುವ ಅನುಮತಿಗಳು, ಮೇಕೆದಾಟು ವಿಷಯ ಮತ್ತು ಪಿಎಂ ಶ್ರೀ ಯೋಜನೆ ಚರ್ಚಿಸುವ ಸಾಧ್ಯತೆ ಇದೆ.
ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ತಮಿಳುನಾಡು ಸರ್ಕಾರ ಸ್ಥಾಪಿಸಿರುವ ತಮಿಳು ಕವಿ-ಸಂತ ತಿರುವಳ್ಳುವರ್ ಅವರ ಪ್ರತಿಮೆಯನ್ನು ವಿಜಯ್ ಉದ್ಘಾಟಿಸಲಿದ್ದಾರೆ ಎನ್ನಲಾಗಿದೆ. ಬಳಿಕ ಸಿಎಂ ವಿಜಯ್ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. (ಏಜೆನ್ಸೀಸ್).