ಡಿಎಂಕೆ ಟೀಕೆಗೆ ಸಿಎಂ ವಿಜಯ್ ಪಂಚ್: ನಿಮ್ಮ ವಿಮರ್ಶೆಗಳು ಹೀಗೆಯೇ ಬರಲಿ, ನಾವು ಇನ್ನಷ್ಟು ಬೆಳೆಯುತ್ತೇವೆ ಎಂದ ದಳಪತಿ!
ತಿರುಚಿರಾಪಳ್ಳಿ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಜಯ ದಾಖಲಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ತಮಿಳಗ ವೆಟ್ರಿ ಕಳಗಂ (CM Vijay In Trichy Rally) ಪಕ್ಷದ ಸಂಸ್ಥಾಪಕ ಹಾಗೂ ಸಿಎಂ ದಳಪತಿ ವಿಜಯ್ ಅವರು ಸೋಮವಾರ ತಿರುಚಿರಾಪಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಕೃತಜ್ಞತಾ ಸಮಾವೇಶದಲ್ಲಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಆಡಳಿತವನ್ನು ಟೀಕಿಸುತ್ತಿರುವ ರಾಜಕೀಯ ವಿರೋಧಿಗಳಿಗೆ, ನಿಮ್ಮ ಟೀಕೆಗಳು ಹೀಗೆಯೇ ಮುಂದುವರಿಯಲಿ, ಅದು ನಾವು ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ ಎಂದು ಖಡಕ್ ಸಂದೇಶ ನೀಡಿದ್ದಾರೆ.
ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ ನಂತರ ನಡೆದ ಮೊದಲ ಬೃಹತ್ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ವಿಜಯ್, ಪ್ರಮುಖವಾಗಿ DMK ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಾವು ಅಧಿಕಾರಕ್ಕೆ ಬಂದು ಇನ್ನು ಕೆಲವು ವಾರಗಳೂ ಕಳೆದಿಲ್ಲ. ನಾವು ಅಧಿಕಾರ ವಹಿಸಿಕೊಂಡ ಆರು ತಿಂಗಳವರೆಗೆ ಸುಮ್ಮನಿರುತ್ತೇವೆ ಎಂದವರು, ಆರು ದಿನಗಳೂ ಕಾಯದೆ ಅರ್ಧ ಗಂಟೆಯಲ್ಲೇ ನಮ್ಮ ಸರ್ಕಾರದ ವಿರುದ್ಧ ದೂರು ನೀಡಲು ಆರಂಭಿಸಿದರು. ಆದರೆ ತಮಿಳುನಾಡಿನ ಜನತೆ, ವರ್ಷಗಳಿಂದ ಸರದಿಯಂತೆ ಅಧಿಕಾರ ನಡೆಸಿ ಜನರಿಗೆ ದ್ರೋಹ ಬಗೆದ ಎರಡು ದ್ರಾವಿಡ ಪಕ್ಷಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ನಾನು ಸಿಎಂ ಅಲ್ಲ, ನಿಮ್ಮ ಮುಖ್ಯ ಸೇವಕ!
ತಮ್ಮನ್ನು ಬೆಂಬಲಿಸಿದ ಜನಸಾಗರಕ್ಕೆ ತಲೆಬಾಗಿ ನಮಸ್ಕರಿಸಿದ ವಿಜಯ್, ನೀವು ನಿಮ್ಮ ಅಣ್ಣ ಅಥವಾ ತಮ್ಮನಾಗಿ ಈ ವಿಜಯ್‌ನನ್ನು ಆಯ್ಕೆ ಮಾಡಿದ್ದೀರಿ. ನಾನು ನಿಮ್ಮ ಮುಖ್ಯಮಂತ್ರಿಯಾಗಿ ಅಲ್ಲ, ನಿಮಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಬಂದಿರುವ ನಿಮ್ಮ ಮುಖ್ಯ ಸೇವಕ ಎಂದಿದ್ದಾರೆ. ನಾವು ಇನ್ನು ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದಿತ್ತು, ಆದರೂ ಟಿವಿಕೆಗೆ ನೀವು ನೀಡಿದ ಅಭೂತಪೂರ್ವ ಬೆಂಬಲಕ್ಕೆ ನಾನು ಚಿರಋಣಿ ಎಂದರು. ಮುಂಬರುವ ಚುನಾವಣೆಗಳಲ್ಲೂ ತಮ್ಮ ಪಕ್ಷ ಭಾರಿ ಬಹುಮತದೊಂದಿಗೆ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಚುನಾವಣೆಯಲ್ಲಿ ಟಿವಿಕೆ ಮತ್ತು ಡಿಎಂಕೆ ನಡುವೆ ನೇರ ಹಣಾಹಣಿ ನಡೆದಿತ್ತು. ಸರ್ಕಾರ ರಚನೆಗಾಗಿ ಶಾಸಕರ ಕುದುರೆ ವ್ಯಾಪಾರ ಮಾಡಲಾಗಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ತಿರಸ್ಕರಿಸಿದ ವಿಜಯ್, ನಮ್ಮ ಪಕ್ಷ ಅಧಿಕಾರಕ್ಕೆ ಬರದಂತೆ ತಡೆಯಲು ಡಿಎಂಕೆ ಮತ್ತು ಎಐಎಡಿಎಂಕೆ ತೆರೆಮರೆಯಲ್ಲಿ ವಿಲಕ್ಷಣ ಮೈತ್ರಿ ಮಾಡಿಕೊಂಡಿದ್ದವು. ಆದರೆ ಕುಟುಂಬ ರಾಜಕಾರಣ, ಮಾದಕ ದ್ರವ್ಯದ ಹಾವಳಿ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದಿಂದ ಬೇಸತ್ತಿದ್ದ ಜನತೆ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ನಮ್ಮ ಆಡಳಿತದಲ್ಲಿ ಭ್ರಷ್ಟಾಚಾರ ಮುಕ್ತ ಸರ್ಕಾರ ಹಾಗೂ ಜಾತಿ ರಹಿತ ರಾಜಕಾರಣಕ್ಕೆ ಮೊದಲ ಆದ್ಯತೆ ಎಂದು ಭರವಸೆ ನೀಡಿದ್ದಾರೆ.
ಕೋಟ್-ಸೂಟ್ ಧರಿಸುವುದರ ಹಿಂದಿನ ರಹಸ್ಯ ಬಿಚ್ಚಿಟ್ಟ ವಿಜಯ್!
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಾವು ಕೋಟ್ ಮತ್ತು ಸೂಟ್ ಧರಿಸುವ ಕುರಿತು ಕೇಳಿಬರುತ್ತಿರುವ ಪ್ರಶ್ನೆಗಳಿಗೆ ವಿಜಯ್ ಇದೇ ಮೊದಲ ಬಾರಿಗೆ ಉತ್ತರಿಸಿದ್ದಾರೆ. ನಮಗೆ ಕೋಟ್ ಮತ್ತು ಸೂಟ್ ಧರಿಸಲು ಅನುಮತಿಯಿಲ್ಲವೇ ಎಂದಿದ್ದಾರೆ. ಅಲ್ಲದೆ, ಅದು ಕೇವಲ ಅಧಿಕಾರದಲ್ಲಿರುವ ದೊಡ್ಡ ಜನರಿಗೆ ಮಾತ್ರ ಸೀಮಿತವೇ ಎಂದು ಪ್ರಶ್ನಿಸಿದ್ದಾರೆ. ಅಂತಹದ್ದೇನೂ ಇಲ್ಲ. ನಾನು ಹೆಚ್ಚು ಬಣ್ಣಗಳನ್ನು ಧರಿಸುತ್ತಿಲ್ಲ, ಕೇವಲ ಕಪ್ಪು ಮತ್ತು ಬಿಳಿ ಬಟ್ಟೆಗಳನ್ನು ಧರಿಸುತ್ತಿದ್ದೇನೆ. ಇದು ನಮ್ಮೆಲ್ಲರ ಹೃದಯದ ಬಣ್ಣ. ನಾನು ಎಲ್ಲದರಲ್ಲೂ ಕಪ್ಪು-ಬಿಳಿಯಷ್ಟೇ ಸರಳವಾಗಿ ಮತ್ತು ಪಾರದರ್ಶಕವಾಗಿ ಇರುತ್ತೇನೆ ಎಂಬುದನ್ನು ತೋರಿಸಲು ಈ ಬಣ್ಣಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡಿನ ಇತಿಹಾಸದಲ್ಲೇ ದಾಖಲಾದ ಗರಿಷ್ಠ ಶೇಕಡಾವಾರು ಮತದಾನವನ್ನು ಸ್ಮರಿಸಿದ ಸಿಎಂ ವಿಜಯ್, ದಿವಂಗತ ಸಿಎಂ ಎಂ.ಜಿ. ರಾಮಚಂದ್ರನ್ ಅವರು ಕೂಡ ತಮ್ಮ ಮೊದಲ ಚುನಾವಣೆಯಲ್ಲಿ ಇಷ್ಟೊಂದು ಮತಗಳಿಕೆಯನ್ನು ಪಡೆದಿರಲಿಲ್ಲ ಎಂದು ಹಿರಿಯರು ಹೇಳುತ್ತಿದ್ದಾರೆ. ಅಂತಹ ಮಹಾನ್ ಬೆಂಬಲವನ್ನು ನೀವು ಟಿವಿಕೆಗೆ ನೀಡಿದ್ದೀರಿ. ನಾನು ನನ್ನನ್ನು ಎಂಜಿಆರ್ ಅವರಿಗೆ ಹೋಲಿಸಿಕೊಳ್ಳುತ್ತಿಲ್ಲ. ಎಂಜಿಆರ್ ಅವರ ಸ್ಥಾನ ಎಂದಿಗೂ ಅವರಿಗೇ. ಆದರೆ ನಾನು ಎಂಜಿಆರ್, ಅಣ್ಣಾದೊರೈ ಮತ್ತು ಪೆರಿಯಾರ್ ಅವರು ತೋರಿಸಿದ ಹಾದಿಯಲ್ಲಿ ನಡೆಯುವ ನಿಮ್ಮ ಪ್ರೀತಿಯ ವಿಜಯ್ ಎಂದು ಭಾವುಕರಾಗಿದ್ದಾರೆ.
ಚೆನ್ನೈನ ಪೆರಂಬೂರ್ ಮತ್ತು ತಿರುಚಿ ಈಸ್ಟ್ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿ ಗೆದ್ದಿದ್ದ ವಿಜಯ್, ನಂತರ ತಿರುಚಿ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಆದರೆ ತ್ರಿಚಿಯ ಜನತೆ ತಮಗೆ ಎಂದಿಗೂ ಹೃದಯಕ್ಕೆ ಹತ್ತಿರವಾಗಿರುತ್ತಾರೆ ಎಂದು ಭರವಸೆ ನೀಡಿದ್ದಾರೆ. ತಮಿಳುನಾಡಿನ ಒಟ್ಟು 234 ಸ್ಥಾನಗಳ ಪೈಕಿ 108 ಸ್ಥಾನಗಳನ್ನು ಗೆದ್ದು ಟಿವಿಕೆ ಇತಿಹಾಸ ಸೃಷ್ಟಿಸಿದ್ದು, ವಿರೋಧ ಪಕ್ಷವಾದ ಎಐಎಡಿಎಂಕೆಯ ಹಲವು ನಾಯಕರು ಮತ್ತು ಶಾಸಕರು ಸದ್ಯ ಟಿವಿಕೆ ಸೇರುತ್ತಿರುವುದು ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ,(ಏಜೆನ್ಸೀಸ್).