ಸಿಎಂ ವಿಜಯ್ 
ದೇಶ

ತಮಿಳುನಾಡು ವಿಧಾನಸಭೆಯಲ್ಲಿ ಮೇಕೆದಾಟು ಆಣೆಕಟ್ಟು ವಿರುದ್ಧ ನಿರ್ಣಯ ಮಂಡಿಸಿದ ಸಿಎಂ ವಿಜಯ್: ಕಾಂಗ್ರೆಸ್, ವಿಸಿಕೆ ಬೆಂಬಲ | Mekedatu dam

ಚೆನ್ನೈ: ಕರ್ನಾಟಕ ಸರ್ಕಾರ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಮುಂದಾಗಿರುವ ಮೇಕೆದಾಟು ಅಣೆಕಟ್ಟು(Mekedatu dam) ಯೋಜನೆಯನ್ನು ತೀವ್ರವಾಗಿ ವಿರೋಧಿಸಿ ತಮಿಳುನಾಡು ಸಿಎಂ ಸಿ ಜೋಸೆಫ್ ವಿಜಯ್ ಶುಕ್ರವಾರ(ಜೂ. 19) ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದು, ಎಲ್ಲರೂ ಸರ್ವಾನುಮತದಿಂದ ನಿರ್ಣಯವನ್ನು ಬೆಂಬಲಿಸುವಂತೆ ಒತ್ತಾಯಿಸಿದ್ದಾರೆ.
ಸಿಎಂ ವಿಜಯ್ ಮಂಡಿಸಿದ ನಿರ್ಣಯಕ್ಕೆ ಟಿವಿಕೆ ಮಿತ್ರ ಪಕ್ಷಗಳಾದ ಕಾಂಗ್ರೆಸ್ ಮತ್ತು ವಿಸಿಕೆ ಬೆಂಬಲ ನೀಡಿದ್ದು, ಕಾಂಗ್ರೆಸ್ ನಾಯಕ ರಾಕೇಶ್ ಕುಮಾರ್ ಮತ್ತು ವಿಸಿಕೆ ನಾಯಕ ಮತ್ತು ಸಚಿವ ವನ್ನಿಯರಸು ಅಂತರರಾಜ್ಯ ನದಿ ನೀರಿನ ವಿವಾದದ ಬಗ್ಗೆ ಒಗ್ಗಟ್ಟಿನ ನಿಲುವಿನ ಅಗತ್ಯವನ್ನು ಪ್ರತಿಪಾದಸಿದ್ದಾರೆ.
ನಿರ್ಣಯ ಮಂಡಿಸಿದ ಸಿಎಂ ವಿಜಯ್, ಪ್ರಸ್ತಾವಿತ ಯೋಜನೆಯು ಅಸ್ತಿತ್ವದಲ್ಲಿರುವ ಕಾನೂನು ನಿಬಂಧನೆಗಳನ್ನು ಉಲ್ಲಂಘಿಸುತ್ತದೆ. ಮತ್ತು ಕಾವೇರಿ ನೀರಿನ ಮೇಲಿನ ತಮಿಳುನಾಡಿನ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ನಿರ್ಣಯದಲ್ಲಿ 2007 ಫೆಬ್ರವರಿ 5ರ ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪು ಮತ್ತು 2018 ಫೆಬ್ರವರಿ 16ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಗೌರವಿಸದೆ, ಸಂಬಂಧಪಟ್ಟ ಜಲಾನಯನ ರಾಜ್ಯಗಳ ಒಪ್ಪಿಗೆ ಪಡೆಯದೆ ಮತ್ತು ಕೇಂದ್ರ ಸರ್ಕಾರದಿಂದ ಯಾವುದೇ ಅನುಮೋದನೆಯನ್ನು ಪಡೆಯದೆ, ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಕರ್ನಾಟಕ ಸರ್ಕಾರವು ಏಕಪಕ್ಷೀಯವಾಗಿ ಮಾಡಿದ ಪ್ರಯತ್ನಕ್ಕೆ ಈ ಸದನವು ತನ್ನ ಬಲವಾದ ಆಕ್ಷೇಪಣೆಯನ್ನು ದಾಖಲಿಸುತ್ತದೆ ಎಂದು ಉಲ್ಲೇಖಿಸಲಾಗಿದೆ.
ಜೊತೆಗೆ ಯೋಜನೆಗೆ ಅಗತ್ಯವಿರುವ ಎಲ್ಲಾ ಅನುಮೋದನೆಗಳನ್ನು ನಿರಾಕರಿಸುವಂತೆ ನಿರ್ಣಯವು ಕೇಂದ್ರವನ್ನು ಒತ್ತಾಯಿಸಿದ್ದು, ಕರ್ನಾಟಕ ಸರ್ಕಾರವು ಪ್ರಸ್ತಾಪಿಸಿರುವ ಮೇಕೆದಾಟು ಅಣೆಕಟ್ಟು ಯೋಜನೆಗೆ ತಾಂತ್ರಿಕ ಮತ್ತು ಪರಿಸರ ಅನುಮತಿಗಳು ಸೇರಿದಂತೆ ಯಾವುದೇ ರೀತಿಯ ಅನುಮೋದನೆಯನ್ನು ನೀಡಬಾರದು. ಕಾವೇರಿ ವಿವಾದವನ್ನು ತಮಿಳುನಾಡು ಮತ್ತು ಕರ್ನಾಟಕದ ನಡುವಿನ ಸೂಕ್ಷ್ಮ ವಿಷಯವೆಂದು ಬಣ್ಣಿಸಿ, ಕಾನೂನು ಮತ್ತು ಕಾರ್ಯವಿಧಾನದ ಅವಶ್ಯಕತೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೇಳಲಾಗಿದೆ (ಏಜೆನ್ಸೀಸ್).