ಸಿಎಂ ವಿಜಯ್ ಮತ್ತು ಜ್ಯೋತಿಷಿ ರಾಧನ್ ಪಂಡಿತ್  
ದೇಶ

ವಿಶೇಷ ಕರ್ತವ್ಯಾಧಿಕಾರಿಯಾಗಿ ಜ್ಯೋತಿಷಿಯನ್ನು ನೇಮಿಸಿಕೊಂಡ ಸಿಎಂ ವಿಜಯ್; ಮಿತ್ರ ಪಕ್ಷಗಳು ಗರಂ; ಮರು ಪರಿಶೀಲನೆಗೆ ಒತ್ತಾಯ | CM Vijay

ಚೆನ್ನೈ: ತಮಿಳುನಾಡು ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ತಮಿಳಿಗ ವೆಟ್ರಿ ಕಳಗಂ ಮುಖ್ಯಸ್ಥ ನಟ ದಳಪತಿ ವಿಜಯ್(CM Vijay), ತಮ್ಮ ವಿಶೇಷ ಕರ್ತವ್ಯಾಧಿಕಾರಿಯಾಗಿ ಜ್ಯೋತಿಷಿಯೊಬ್ಬರನ್ನು ನೇಮಿಸಿಕೊಂಡಿದ್ದು ವಿವಾದಕ್ಕೀಡಾಗಿದೆ. ಮಿತ್ರ ಪಕ್ಷಗಳು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ನೇಮಕವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿವೆ.
ದಳಪತಿ ವಿಜಯ್ ಭರ್ಜರಿ ಗೆಲುವು ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದ ಜ್ಯೋತಿಷಿ ರಾಧನ್ ಪಂಡಿತ್ ಅವರನ್ನು ತಮಿಳುನಾಡು ಸರ್ಕಾರ ಸಿಎಂ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದೆ. ಈ ನೇಮಕಾತಿ ಬಗ್ಗೆ ಮಿತ್ರಪಕ್ಷ ಕಾಂಗ್ರೆಸ್ ನಾಯಕರು ಸೇರಿದಂತೆ ಹಲವು ಪಕ್ಷಗಳು ಖಂಡನೆ ವ್ಯಕ್ತಪಡಿಸಿವೆ.
ಈ ಕುರಿತು ಎಕ್ಸ್​ನಲ್ಲಿ ಪ್ರಶ್ನೆ ಮಾಡಿರುವ ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್, ನನಗೆ ಹೇಳೋದು ತುಂಬಾ ಕಷ್ಟ, ಜ್ಯೋತಿಷಿಗೆ OSD ಹುದ್ದೆ ಯಾಕೆ ಬೇಕು?? ಯಾರಾದರೂ ವಿವರಿಸಬಲ್ಲಿರಾ? ಎಂದು ಬರೆದುಕೊಂಡಿದ್ದಾರೆ.
ವಿಸಿಕೆ ಪ್ರಧಾನ ಕಾರ್ಯದರ್ಶಿ ಡಿ.ರವಿಕುಮಾರ್ ಸಹ, ಜಾತ್ಯತೀತ ಸರ್ಕಾರದಲ್ಲಿ ಇದು ಸ್ವೀಕಾರಾರ್ಹವಲ್ಲ. ಗೌರವಾನ್ವಿತ ಮುಖ್ಯಮಂತ್ರಿಗಳು ಇದನ್ನು ಮರುಪರಿಶೀಲಿಸಬೇಕು. ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸುವುದು ಸರ್ಕಾರದ ಕರ್ತವ್ಯ. ಸಿಎಂ ರಾಜಕೀಯ ವಿಭಾಗದ ಕಾರ್ಯದರ್ಶಿಯಾಗಿ ನೇಮಿಸಲ್ಪಟ್ಟ ರಿಕಿ ರಾಧನ್ ಪಂಡಿತ್ ಮೂಲತಃ ಜ್ಯೋತಿಷಿ. ಸರ್ಕಾರವು ಸಂವಿಧಾನಕ್ಕೆ ವಿರುದ್ಧವಾದ ಈ ಅವೈಜ್ಞಾನಿಕ ನೇಮಕಾತಿಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಹೇಳಿದ್ದಾರೆ.
ಅದೇ ರೀತಿ ಸಿಪಿಎಂನ ಕೇಂದ್ರ ಸಮಿತಿ ಸದಸ್ಯ ಷಣ್ಮುಗಂ, ಇಂತಹ ವ್ಯಕ್ತಿಯನ್ನು ಸರ್ಕಾರಿ ವೆಚ್ಚದಲ್ಲಿ ಅಧಿಕಾರಿಯಾಗಿ ನೇಮಿಸುವುದರಿಂದ ಜನರಲ್ಲಿ ಜ್ಯೋತಿಷ್ಯದ ಮೇಲಿನ ನಂಬಿಕೆ ಹೆಚ್ಚಾಗುತ್ತದೆ... ಸರ್ಕಾರದ ಈ ನೇಮಕಾತಿ ಸ್ವೀಕಾರಾರ್ಹವಲ್ಲ! ಅವರು ರಾಜಕೀಯ ಸಲಹೆ ನೀಡುತ್ತಾರೆ ಎಂಬುದು ಸಹ ಸ್ವೀಕಾರಾರ್ಹವಲ್ಲ ಎಂದಿದ್ದಾರೆ.
ಮಂಗಳವಾರ ಬೆಳಗ್ಗೆ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಆಪ್ತ ಜ್ಯೋತಿಷಿ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ವಕ್ತಾರರಾಗಿರುವ ರಿಕಿ ರಾಧನ್ ಪಂಡಿತ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿಯ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ತಮಿಳುನಾಡು ಸಾರ್ವಜನಿಕ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದ್ದು, ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಈ ನೇಮಕಾತಿ ಜಾರಿಗೆ ಬರಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ (ಏಜೆನ್ಸೀಸ್).