ಮುಖ್ಯಮಂತ್ರಿ ವಿಜಯ್ ತೆಗೆದುಕೊಂಡ ಈ ಒಂದು ಕ್ರಮ ಸರಿಯಿಲ್ಲ... ಅಸಮಾಧಾನ ಹೊರಹಾಕಿದ ನಟ ವಿಶಾಲ್! CM Vijay
- ಚಿತ್ರರಂಗದ ಅನುಭವವಿಲ್ಲದ ಶಾಸಕ ರಾಜ್‌ಮೋಹನ್‌ಗೆ ಸಿನೆಮಾ ಇಲಾಖೆ ವಹಿಸಿರುವುದಕ್ಕೆ ನಟ ವಿಶಾಲ್ ಅಸಮಾಧಾನ
- ಚಿತ್ರರಂಗದ ಬಿಕ್ಕಟ್ಟು ಪರಿಹರಿಸಲು ಸರ್ಕಾರಿ ಟಿಕೆಟ್ ಬುಕಿಂಗ್, ಸ್ಥಳೀಯ ತೆರಿಗೆ ರದ್ದು ಹಾಗೂ ಸಣ್ಣ ಸಿನಿಮಾಗಳಿಗೆ ಸಬ್ಸಿಡಿಗೆ ಬೇಡಿಕೆ
- ಸರ್ಕಾರದ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ವಿಶಾಲ್ ಹೆಸರು ಹೇಳದೆ ನಟ ಅರುಣ್ ವಿಜಯ್ ತಿರುಗೇಟು
CM Vijay : ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಹೊಸ ಸರ್ಕಾರದಲ್ಲಿ ಎಗ್ಮೂರ್ ಕ್ಷೇತ್ರದ ಶಾಸಕ ರಾಜ್‌ಮೋಹನ್ ಅವರಿಗೆ ಚಲನಚಿತ್ರ ತಂತ್ರಜ್ಞಾನ ಮತ್ತು ಸಿನೆಮಾಟೋಗ್ರಾಫ್ ಕಾಯ್ದೆ (Film Technology and Cinematograph Act) ಯಂತಹ ಪ್ರಮುಖ ಇಲಾಖೆಗಳ ಜವಾಬ್ದಾರಿಯನ್ನು ನೀಡಿರುವುದಕ್ಕೆ ನಟ ವಿಶಾಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮಿಳು ಚಿತ್ರರಂಗವು ಪ್ರಸ್ತುತ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಸಾಕಷ್ಟು ಸುಧಾರಣೆಗಳ ಅಗತ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ಚಿತ್ರರಂಗದ ಬಗ್ಗೆ ಹೆಚ್ಚಿನ ಅನುಭವವಿಲ್ಲದ ವ್ಯಕ್ತಿಗೆ ಈ ಜವಾಬ್ದಾರಿ ನೀಡಿರುವುದು ಬೇಸರ ತಂದಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ವಿಶಾಲ್ ಬರೆದುಕೊಂಡಿದ್ದಾರೆ.
ದಶಕಗಳ ಕಾಲ ಚಿತ್ರರಂಗದಲ್ಲಿದ್ದ ಮುಖ್ಯಮಂತ್ರಿ ವಿಜಯ್ ಅವರೇ ಈ ಇಲಾಖೆಯನ್ನು ನಿರ್ವಹಿಸಲು ಸೂಕ್ತ ವ್ಯಕ್ತಿಯಾಗಿದ್ದರು ಎಂದು ಅಭಿಪ್ರಾಯಪಟ್ಟಿರುವ ವಿಶಾಲ್, ಚಿತ್ರಮಂದಿರಗಳಿಗೆ ಸರ್ಕಾರಿ ಟಿಕೆಟ್ ಬುಕಿಂಗ್ ವ್ಯವಸ್ಥೆ ತರುವುದು, ಸ್ಥಳೀಯ ಸಂಸ್ಥೆಗಳ ತೆರಿಗೆ ರದ್ದುಪಡಿಸುವುದು ಹಾಗೂ ಸಣ್ಣ ಬಜೆಟ್ ಸಿನಿಮಾಗಳಿಗೆ ಸಬ್ಸಿಡಿ ಹೆಚ್ಚಿಸುವಂತೆ ಹೊಸ ಸರ್ಕಾರಕ್ಕೆ ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ.
ರಾಜ್‌ಮೋಹನ್ ಅವರಿಗೆ ವೈಯಕ್ತಿಕವಾಗಿ ಅವಮಾನ ಮಾಡುವ ಯಾವುದೇ ಉದ್ದೇಶ ತಮಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ವಿಶಾಲ್, ಚಿತ್ರರಂಗವು ದೀರ್ಘಕಾಲದಿಂದ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಮತ್ತು ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಈ ಕ್ಷೇತ್ರದಲ್ಲಿ ನೇರ ಅನುಭವವಿರುವ ವ್ಯಕ್ತಿಯ ಅಗತ್ಯವಿದೆ ಎಂದು ವಿಶಾಲ್ ಅಭಿಪ್ರಾಯಪಟ್ಟಿದ್ದಾರೆ.
ತಮಿಳು ಚಿತ್ರರಂಗವು ಪ್ರಸ್ತುತ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಇಡೀ ಚಿತ್ರರಂಗ, ಅದರಲ್ಲೂ ಮುಖ್ಯವಾಗಿ ಚಲನಚಿತ್ರ ನಿರ್ಮಾಪಕರು ಮತ್ತು ನಿರ್ಮಾಣ ಸಂಸ್ಥೆಗಳು ಹೊಸ ಸರ್ಕಾರದಿಂದ ದೊಡ್ಡದೊಂದು ಭರವಸೆಯ ಕಿರಣಕ್ಕಾಗಿ ಕಾಯುತ್ತಿವೆ ಎಂದು ವಿಶಾಲ್ ಹೇಳಿದ್ದಾರೆ.
ಈ ನಡುವೆ, ನಟ ವಿಶಾಲ್ ಅವರ ಈ ಟೀಕೆಗೆ ಪ್ರತಿಕ್ರಿಯಿಸಿರುವ ಮತ್ತೊಬ್ಬ ಜನಪ್ರಿಯ ನಟ ಅರುಣ್ ವಿಜಯ್, ಸರ್ಕಾರದ ಉನ್ನತ ನಿರ್ಧಾರಗಳಲ್ಲಿ ಸಾರ್ವಜನಿಕರು ಹಸ್ತಕ್ಷೇಪ ಮಾಡಬಾರದು ಎಂದು ವಿನಂತಿಸಿದ್ದಾರೆ. ಸ್ವತಃ ಚಿತ್ರರಂಗದ ಹಿನ್ನೆಲೆಯಿಂದಲೇ ಬಂದಿರುವ ಮುಖ್ಯಮಂತ್ರಿ ವಿಜಯ್ ಅವರಿಗೆ ಚಿತ್ರರಂಗ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಂಪೂರ್ಣ ಅರಿವಿದ್ದು, ಅವರ ನಿರ್ಧಾರಗಳನ್ನು ಗೌರವಿಸಿ ಫಲಿತಾಂಶಕ್ಕಾಗಿ ಕಾಯಬೇಕು ಎಂದು ಅರುಣ್ ವಿಜಯ್ ಹೇಳಿದ್ದಾರೆ. ವಿಶೇಷವೆಂದರೆ, ಅವರು ವಿಶಾಲ್ ಅವರ ಹೆಸರನ್ನು ಎಲ್ಲೂ ನೇರವಾಗಿ ಪ್ರಸ್ತಾಪಿಸದೆ ಈ ತಿರುಗೇಟು ನೀಡಿದ್ದಾರೆ.
ಅಂದಹಾಗೆ, ಎಗ್ಮೂರ್ ಕ್ಷೇತ್ರದ ಶಾಸಕರಾದ ರಾಜ್‌ಮೋಹನ್ ಅವರಿಗೆ ಶಿಕ್ಷಣ, ತಮಿಳು ಅಭಿವೃದ್ಧಿ, ಮಾಹಿತಿ ಮತ್ತು ಪ್ರಚಾರ, ಪುರಾತತ್ವ ಇಲಾಖೆ ಹಾಗೂ ತಮಿಳು ಸಂಸ್ಕೃತಿಯೊಂದಿಗೆ ಸಿನೆಮಾ ಸಂಬಂಧಿತ ಇಲಾಖೆಗಳ ಜವಾಬ್ದಾರಿಯನ್ನೂ ನೀಡಲಾಗಿದೆ. (ಏಜೆನ್ಸೀಸ್).