ಅಕ್ರಮ ನುಸುಳುಕೋರರ ವಿರುದ್ಧ ಡಿಟೆಕ್ಟ್, ಡಿಲೀಟ್, ಡಿಪೋರ್ಟ್ ನೀತಿ ಘೋಷಣೆ: ಬಂಗಾಳದಲ್ಲಿ ಸಿಎಂ ಸುವೇಂದು ಮಾಸ್ಟರ್ ಸ್ಟ್ರೋಕ್!  
ದೇಶ

ಅಕ್ರಮ ನುಸುಳುಕೋರರ ವಿರುದ್ಧ ಡಿಟೆಕ್ಟ್, ಡಿಲೀಟ್, ಡಿಪೋರ್ಟ್ ನೀತಿ ಘೋಷಣೆ: ಬಂಗಾಳದಲ್ಲಿ ಸಿಎಂ ಸುವೇಂದು ಮಾಸ್ಟರ್ ಸ್ಟ್ರೋಕ್! Suvendu Adhikari

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಗಡಿಭಾಗಗಳಲ್ಲಿ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಅಕ್ರಮ ನುಸುಳುಕೋರರ ಸಮಸ್ಯೆಗೆ ಶಾಶ್ವತ ಬ್ರೇಕ್ ಹಾಕಲು ಮುಖ್ಯಮಂತ್ರಿ ಸುವೇಂದು ಅಧಿಕಾರಿ(Suvendu Adhikari) ಭರ್ಜರಿ ಆ್ಯಕ್ಷನ್ ಪ್ಲಾನ್ ಸಿದ್ಧಪಡಿಸಿದ್ದಾರೆ. ರಾಜ್ಯದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿರುವ ವಿದೇಶಿ ನುಸುಳುಕೋರರನ್ನು ಗುರಿಯಾಗಿಸಿಕೊಂಡು ಪತ್ತೆಹಚ್ಚಿ, ಮತದಾರರ ಪಟ್ಟಿಯಿಂದ ತೆಗೆದುಹಾಕಿ, ಗಡೀಪಾರು ಮಾಡಿ ಎಂಬ ಆಕ್ರಮಣಕಾರಿ ತ್ರಿಪಕ್ಷೀಯ ನೀತಿಯನ್ನು ಜಾರಿಗೆ ತಂದಿದ್ದಾರೆ.
ಅಷ್ಟೇ ಅಲ್ಲದೆ, ಗಡಿ ಸುರಕ್ಷತೆಯನ್ನು ಬಲಪಡಿಸುವ ಸಲುವಾಗಿ ಭಾರತ-ಬಾಂಗ್ಲಾದೇಶ ಗಡಿಯ 27 ಕಿಲೋಮೀಟರ್ ಪ್ರದೇಶದಲ್ಲಿ ತಂತಿಬೇಲಿ ಹಾಗೂ ಗಡಿ ಚೌಕಿಗಳ (BoPs) ನಿರ್ಮಾಣಕ್ಕಾಗಿ ಬಿಎಸ್ಎಫ್‌ಗೆ ಅಧಿಕೃತವಾಗಿ ಜಮೀನನ್ನು ಹಸ್ತಾಂತರಿಸುವ ಮೂಲಕ ಹಿಂದಿನ ಸರ್ಕಾರದ ವೋಟ್ ಬ್ಯಾಂಕ್ ರಾಜಕಾರಣಕ್ಕೆ ತೀವ್ರ ಆಘಾತ ನೀಡಿದ್ದಾರೆ.

'ಡಿಟೆಕ್ಟ್, ಡಿಲೀಟ್, ಡಿಪೋರ್ಟ್' ನಿಯಮ ಎಂದರೇನು..?

ರಾಜ್ಯ ಸಚಿವಾಲಯ ನಬನ್ನ'ದಲ್ಲಿ ಬಿಎಸ್ಎಫ್ ಪ್ರಧಾನ ನಿರ್ದೇಶಕ (DG) ಪ್ರವೀಣ್ ಕುಮಾರ್ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಗಡಿಭಾಗದ ಭದ್ರತೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕರು (DGP) ಮತ್ತು ಗೃಹ ಕಾರ್ಯದರ್ಶಿಗಳಿಗೆ ತಕ್ಷಣದ ಆದೇಶ ನೀಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಬಾರದ ಪ್ರತಿಯೊಬ್ಬ ವ್ಯಕ್ತಿಯೂ ಈ ಮಣ್ಣಿನಲ್ಲಿ ಸಂಪೂರ್ಣ ಅಕ್ರಮ ನುಸುಳುಕೋರ. ರಾಜ್ಯ ಪೊಲೀಸರು ಅಂತಹವರನ್ನು ಪತ್ತೆಹಚ್ಚಿ, ಬಂಧಿಸಿ ಬಿಎಸ್ಎಫ್‌ಗೆ ಒಪ್ಪಿಸುತ್ತಾರೆ. ಬಿಎಸ್ಎಫ್ ಅಧಿಕಾರಿಗಳು ಬಾಂಗ್ಲಾದೇಶದ ಗಡಿ ರಕ್ಷಣಾ ಪಡೆ ಜೊತೆ ಮಾತುಕತೆ ನಡೆಸಿ ಅವರನ್ನು ನೇರವಾಗಿ ಗಡೀಪಾರು ಮಾಡಲಿದ್ದಾರೆ. ಇದು ದೇಶದ ಮತ್ತು ಪಶ್ಚಿಮ ಬಂಗಾಳದ ಭದ್ರತೆಯ ಹಿತದೃಷ್ಟಿಯಿಂದ ಇಂದಿನಿಂದಲೇ ಜಾರಿಗೆ ಬರುತ್ತಿದೆ ಎಂದು ಸಿಎಂ ಸುವೇಂದು ಅಧಿಕಾರಿ ಗುಡುಗಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಸಿಎಎ ನಿಯಮಾವಳಿಗಳನ್ನು ಹಿಂದಿನ ಸರ್ಕಾರ ಬಂಗಾಳದಲ್ಲಿ ಸರಿಯಾಗಿ ಅನುಷ್ಠಾನಕ್ಕೆ ತಂದಿರಲಿಲ್ಲ. ಆದರೆ ನಮ್ಮ ಸರ್ಕಾರದಲ್ಲಿ ಸಿಎಎ ಅಡಿಯಲ್ಲಿ ರಕ್ಷಣೆ ಪಡೆದಿರುವ ಹಿಂದೂ ನಿರಾಶ್ರಿತರು ಮತ್ತು ಇತರ ಅರ್ಹ ಸಮುದಾಯಗಳನ್ನು ಹೊರತುಪಡಿಸಿ, ಉಳಿದ ಅಕ್ರಮ ಒಳನುಸುಳುವಿಕೆಯನ್ನು ಶೂನ್ಯ ಸಹಿಷ್ಣುತೆ ಆಧಾರದಲ್ಲಿ ಹತ್ತಿಕ್ಕಲಾಗುವುದು ಎಂದು ಬಂಗಾಳ ಸಿಎಂ ಸ್ಪಷ್ಟಪಡಿಸಿದ್ದಾರೆ.

ಬಿಎಸ್ಎಫ್‌ಗೆ 75 ಎಕರೆ ಭೂಮಿ ಹಸ್ತಾಂತರ: ಚುನಾವಣಾ ವಾಗ್ದಾನ ಈಡೇರಿಕೆ!

ಬಂಗಾಳ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಗಡಿ ಭದ್ರತೆಯನ್ನು ಗಟ್ಟಿಗೊಳಿಸಲು ಬಿಎಸ್ಎಫ್‌ಗೆ ಅಗತ್ಯ ಭೂಮಿ ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ ಕೇವಲ ಎರಡು ವಾರಗಳಲ್ಲೇ ಈ ಭರವಸೆಯನ್ನು ಸುವೇಂದು ಸರ್ಕಾರ ಈಡೇರಿಸಿದೆ. ಐದು ಗಡಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ 27 ಕಿ.ಮೀ ಉದ್ದದ ಬೇಲಿ ನಿರ್ಮಾಣಕ್ಕಾಗಿ ಒಟ್ಟು 75 ಎಕರೆ ಭೂಮಿಯನ್ನು (ಇದರಲ್ಲಿ ರೈತರಿಂದ ನೇರವಾಗಿ ಖರೀದಿಸಿದ 43 ಎಕರೆ ಮತ್ತು 32 ಎಕರೆ ಸರ್ಕಾರಿ ಭೂಮಿ ಸೇರಿದೆ) ಬಿಎಸ್ಎಫ್‌ಗೆ ಹಸ್ತಾಂತರಿಸಲಾಗಿದೆ.
ಕಳೆದ ಹಲವು ವರ್ಷಗಳಿಂದ ಕೇಂದ್ರ ಗೃಹ ಸಚಿವಾಲಯ ಹಾಗೂ ಖುದ್ದಾಗಿ ಅಮಿತ್ ಷಾ ಅವರು ವಿನಂತಿಸಿದರೂ, ಹಿಂದಿನ ಮಮತಾ ಬ್ಯಾನರ್ಜಿ ಸರ್ಕಾರವು ಕೇವಲ ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬಿಎಸ್ಎಫ್‌ಗೆ ಭೂಮಿ ನೀಡದೆ ತಡೆ ಹಿಡಿದಿತ್ತು. ಗಡಿಗಳು ತೆರೆದುಕೊಂಡಿದ್ದರಿಂದಲೇ ರಾಜ್ಯದಲ್ಲಿ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಬಲವಂತದ ಮತಾಂತರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿದ್ದವು. ಈಗ ಆ ದಿನಗಳು ಮುಗಿದಿವೆ. ಮುಂದಿನ 600 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಭೂಮಿಯ ಅಗತ್ಯವಿದೆಯೋ, ಅದನ್ನು ತಕ್ಷಣವೇ ಸ್ವಾಧೀನಪಡಿಸಿಕೊಂಡು ಬಿಎಸ್ಎಫ್‌ಗೆ ನೀಡಲಾಗುವುದು ಎಂದು ಸಿಎಂ ಸಾರಿದ್ದಾರೆ.

ರಾಷ್ಟ್ರೀಯ ಭದ್ರತೆಗೆ ಆನೆಬಲ: ಬಿಎಸ್ಎಫ್ ಶ್ಲಾಘನೆ

ಬಂಗಾಳ ಸರ್ಕಾರದ ಈ ಅದ್ಭುತ ಸಹಕಾರವನ್ನು ಬಿಎಸ್ಎಫ್ ಡಿಜಿ ಪ್ರವೀಣ್ ಕುಮಾರ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಗಡಿ ಕಾರ್ಯಾಚರಣೆ ಹಾಗೂ ತಂತಿಬೇಲಿ ನಿರ್ಮಾಣಕ್ಕೆ ದೀರ್ಘಕಾಲದಿಂದ ಅಗತ್ಯವಿದ್ದ ಆಡಳಿತಾತ್ಮಕ ಸಹಕಾರವು ಈಗ ನೂತನ ಸರ್ಕಾರದ ಅಡಿಯಲ್ಲಿ ಸಿಗುತ್ತಿದೆ. ಇದು ಗಡಿ ನುಸುಳುವಿಕೆ, ನಕಲಿ ನೋಟು ಚಲಾವಣೆ ಮತ್ತು ಮಾದಕ ದ್ರವ್ಯಗಳ ಕಳ್ಳಸಾಗಣೆಯನ್ನು ಸಂಪೂರ್ಣವಾಗಿ ತಡೆಯಲು ಬಿಎಸ್ಎಫ್‌ಗೆ ಆನೆಬಲ ತಂದಿದೆ ಎಂದು ತಿಳಿಸಿದ್ದಾರೆ.
ಅಸ್ಸಾಂನ ಹಿಮಂತ ಬಿಸ್ವ ಶರ್ಮಾ ಸರ್ಕಾರದ ಗಡಿ ನಿರ್ವಹಣಾ ಮಾದರಿಯನ್ನೇ ಈಗ ಪಶ್ಚಿಮ ಬಂಗಾಳದಲ್ಲೂ ಸುವೇಂದು ಅಧಿಕಾರಿ ಜಾರಿಗೆ ತರುತ್ತಿರುವುದು ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಬಿಎಸ್ಎಫ್ ಅಧಿಕಾರಿಗಳ ನಡುವೆ ಪ್ರತಿ ವಾರ ಕಡ್ಡಾಯ ಸಮನ್ವಯ ಸಭೆಗಳನ್ನು ನಡೆಸಲು ಸೂಚಿಸಲಾಗಿದ್ದು, ಬಂಗಾಳದಾದ್ಯಂತ ತೀವ್ರ ನಿಗಾ ವಹಿಸಲಾಗಿದೆ,(ಏಜೆನ್ಸೀಸ್​).