ದೀದಿ ಆಡಳಿತಾವಧಿಯ ಸಿಎಎ ಹಿಂಸಾಚಾರದ ಮರುತನಿಖೆಗೆ ಸಿಎಂ ಸುವೇಂದು ಆದೇಶ; ಸಾರ್ವಜನಿಕ ಆಸ್ತಿ ನಾಶ ಮಾಡಿದವರಿಂದಲೇ ವಸೂಲಾತಿ!
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿರುವ ನೂತನ ಬಿಜೆಪಿ ಸರ್ಕಾರವು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಡಳಿತಾವಧಿಯಲ್ಲಿ ನಡೆದಿದ್ದ ಘಟನೆಗಳ ವಿರುದ್ಧ ಕಾನೂನು ಸಮರ ಆರಂಭಿಸಿದೆ. 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA Protest Investigation ) ವಿರೋಧಿ ಪ್ರತಿಭಟನೆಗಳ ವೇಳೆ ಮುರ್ಷಿದಾಬಾದ್ ಸೇರಿದಂತೆ ರಾಜ್ಯದ ವಿವಿಧೆಡೆ ನಡೆದಿದ್ದ ಭೀಕರ ಹಿಂಸಾಚಾರ ಹಾಗೂ ರೈಲ್ವೆ ಆಸ್ತಿ ಪಾಸ್ತಿ ಧ್ವಂಸ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಲು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಆದೇಶಿಸಿದ್ದಾರೆ.
ಈ ಹಿಂಸಾಚಾರದ ಪ್ರಕರಣಗಳ ತನಿಖೆಗಾಗಿಯೇ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿಶೇಷ ತನಿಖಾ ತಂಡ ಒಂದನ್ನು ರಚಿಸಲಾಗುತ್ತಿದೆ. ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಕಿಡಿಗೇಡಿಗಳನ್ನು ತಕ್ಷಣವೇ ಪತ್ತೆ ಹಚ್ಚುವಂತೆ ಮುಖ್ಯಮಂತ್ರಿಗಳು ಪೊಲೀಸ್ ಮಹಾನಿರ್ದೇಶಕರಿಗೆ ಖಡಕ್ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಂಗೆಕೋರರಿಂದಲೇ ನಷ್ಟ ವಸೂಲಿ!
ಕೇವಲ ತನಿಖೆಯಷ್ಟೇ ಅಲ್ಲದೆ, ಅಂದು ರೈಲ್ವೆ ನಿಲ್ದಾಣಗಳಿಗೆ ಬೆಂಕಿ ಹಚ್ಚಿದ ಮತ್ತು ಸಾರ್ವಜನಿಕ ಆಸ್ತಿಯನ್ನು ಲೂಟಿ ಮಾಡಿದ ಆರೋಪಿಗಳಿಂದಲೇ ಸಂಪೂರ್ಣ ನಷ್ಟವನ್ನು ವಸೂಲಿ ಮಾಡಲು ಸರ್ಕಾರ ನಿರ್ಧರಿಸಿದೆ. ಕಾನೂನು ಪ್ರಕಾರ ಬಂಡುಕೋರರ ಆಸ್ತಿ ಮುಟ್ಟುಗೋಲು ಹಾಕಿಕೊಂಡು, ರೈಲ್ವೆ ಇಲಾಖೆಗೆ ಆಗಿರುವ ಕೋಟ್ಯಂತರ ರೂಪಾಯಿ ನಷ್ಟಕ್ಕೆ ಅವರಿಂದಲೇ ಪರಿಹಾರ ಕೊಡಿಸಲು ವಸೂಲಾತಿ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಉನ್ನತ ಮೂಲಗಳು ಖಚಿತಪಡಿಸಿವೆ. ಇದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ಮಾದರಿಯನ್ನು ನೆನಪಿಸುವಂತಿದೆ.
2019ರ ಸಿಎಎ ದಂಗೆಯ ಕರಾಳ ನೆನಪು
2019ರ ಡಿಸೆಂಬರ್‌ನಲ್ಲಿ ನಡೆದಿದ್ದ ಸಿಎಎ ವಿರೋಧಿ ಆಂದೋಲನವು ಪಶ್ಚಿಮ ಬಂಗಾಳದಾದ್ಯಂತ ಭಾರಿ ಹಿಂಸಾಚಾರಕ್ಕೆ ಕಾರಣವಾಗಿತ್ತು. ವಿಶೇಷವಾಗಿ ರೈಲ್ವೆ ಇಲಾಖೆಯು ಪ್ರತಿಭಟನಾಕಾರರ ಪ್ರಮುಖ ಗುರಿಯಾಗಿತ್ತು. ಅಧಿಕೃತ ದಾಖಲೆಗಳ ಪ್ರಕಾರ, 2019 ಡಿಸೆಂಬರ್ 13 ರಿಂದ ಆರಂಭಿಸಿ ಕೇವಲ ಎರಡು ದಿನಗಳಲ್ಲಿ ಪ್ರತಿಭಟನಾಕಾರರು ರಾಜ್ಯದಾದ್ಯಂತ 19 ರೈಲ್ವೆ ನಿಲ್ದಾಣಗಳು ಮತ್ತು ಬರೋಬ್ಬರಿ 20 ರೈಲುಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದರು.
ಚಲಿಸುವ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸುವುದು, ಟಿಕೆಟ್ ಕೌಂಟರ್‌ಗಳನ್ನು ಧ್ವಂಸಗೊಳಿಸುವುದು ಮತ್ತು ಹಳಿಗಳನ್ನು ಬ್ಲಾಕ್ ಮಾಡುವ ಕೆಲಸ ಮಾಡಲಾಗಿತ್ತು. ಈ ಭೀಕರ ಹಿಂಸಾಚಾರದ ಹಿನ್ನೆಲೆಯಲ್ಲಿ ಅಂದು ಒಟ್ಟು 655 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಇದರಿಂದಾಗಿ ಲಕ್ಷಾಂತರ ಪ್ರಯಾಣಿಕರು ಪರದಾಡುವಂತಾಗಿತ್ತು.
ದೀದಿ ಸರ್ಕಾರದ ವಿರುದ್ಧ ನಿರ್ಲಕ್ಷ್ಯದ ಆರೋಪ
ಇಷ್ಟೊಂದು ದೊಡ್ಡ ಪ್ರಮಾಣದ ಹಿಂಸಾಚಾರ ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿ ನಾಶವಾಗಿದ್ದರೂ, ಅಂದಿನ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರವು ಕೇವಲ 17 FIR ಗಳನ್ನು ಮಾತ್ರ ದಾಖಲಿಸಿತ್ತು. ಹಿಂಸಾಚಾರದ ವೇಳೆ ರೈಲ್ವೆ ಆಸ್ತಿಗಳಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಲು ಅಂದಿನ ಸರ್ಕಾರ ವಿಫಲವಾಗಿತ್ತು ಎಂದು ತಜ್ಞರು ಮತ್ತು ವಿರೋಧ ಪಕ್ಷಗಳು ಆರೋಪಿಸಿದ್ದವು.
ಅದರಲ್ಲೂ ವಿಶೇಷವಾಗಿ, ಅಂದಿನ ಸಿಎಂ ಮಮತಾ ಅವರು ಈ ಘಟನೆಗಳನ್ನು ಸಣ್ಣಪುಟ್ಟ ಘಟನೆಗಳು ಎಂದು ಕರೆದಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ದೀದಿ ಸರ್ಕಾರವು ಈ ದಂಗೆಯನ್ನು ಹತ್ತಿಕ್ಕಲು ಯಾವುದೇ ಗಂಭೀರ ಆಸಕ್ತಿ ತೋರಿಸದ ಕಾರಣ, ಕಿಡಿಗೇಡಿಗಳು ರಾಜಾರೋಷವಾಗಿ ಮೆರೆದಿದ್ದರು ಎಂಬ ಆರೋಪ ಈಗಿನ ತನಿಖೆಯಿಂದ ಮತ್ತೊಮ್ಮೆ ಮುಂಚೂಣಿಗೆ ಬಂದಿದೆ.
ಜೀರೋ ಟಾಲರೆನ್ಸ್ ಸಂದೇಶ ರವಾನಿಸಿದ ಸುವೇಂದು!
ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಈ ದಿಟ್ಟ ನಿರ್ಧಾರವು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಒಂದು ಮೈಲಿಗಲ್ಲಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿಗಳ ಮೇಲೆ ದಾಳಿ ಮಾಡುವವರ ವಿರುದ್ಧ ಹೊಸ ಸರ್ಕಾರವು ಜೀರೋ ಟಾಲರೆನ್ಸ್ ನೀತಿಯನ್ನು ಅನುಸರಿಸಲಿದೆ ಎಂಬ ಸ್ಪಷ್ಟ ಸಂದೇಶವನ್ನು ಕಿಡಿಗೇಡಿಗಳಿಗೆ ರವಾನಿಸಲಾಗಿದೆ. ಹಳೆಯ ಕೇಸ್‌ಗಳನ್ನು ಮರುಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳುವುದರಿಂದ, ಭವಿಷ್ಯದಲ್ಲಿ ಇಂತಹ ಹಿಂಸಾಚಾರಗಳಿಗೆ ಕೈಹಾಕಲು ಯಾರಿಗಾದರೂ ನಡುಕ ಹುಟ್ಟಲಿದೆ ಎಂಬುದು ಸರ್ಕಾರದ ಆಲೋಚನೆಯಾಗಿದೆ,(ಏಜೆನ್ಸೀಸ್).