Gaurav Gogoi Pak link | ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್
ದಿಸ್ಪುರ್: ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರ ಪಾಕಿಸ್ತಾನದೊಂದಿಗಿನ ಸಂಪರ್ಕದ (Gaurav Gogoi Pak link) ಪ್ರಕರಣವನ್ನು ಗೃಹ ಸಚಿವಾಲಯಕ್ಕೆ ಕಳುಹಿಸಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
ಇದೊಂದು ಗಂಭೀರ ವಿಷಯವಾಗಿದ್ದು, ರಾಷ್ಟ್ರಮಟ್ಟದಲ್ಲಿ ಇದರ ಪರಿಶೀಲನೆ ಅಗತ್ಯವಿದೆ, ಈ ಪ್ರಕರಣ ಅಸ್ಸಾಂನ್ನು ಮೀರಿದ್ದು, ಕೇಂದ್ರ ಸರ್ಕಾರ ನಿಭಾಯಿಸುವ ಅಗತ್ಯವಿದೆ ಎನ್ನುವುದು ಸಚಿವ ಸಂಪುಟದ ನಿಲುವಾಗಿದೆ ಎಂದು ಸಿಎಂ ಶರ್ಮಾ ಹೇಳಿದರು.
ಈ ಗಂಭೀರ ಪ್ರಕರಣ ಮೂರು ವ್ಯಕ್ತಿಗಳ ಸುತ್ತ ಸುತ್ತುತ್ತದೆ ಎಂದಿರುವ ಶರ್ಮಾ, ಹಾಲಿ ಸಂಸತ್ ಸದಸ್ಯರು, ಬ್ರಿಟಿಷ್ ಪ್ರಜೆಯಾಗಿರುವ ಅವರ ಪತ್ನಿ ಮತ್ತು ಅಲಿ ತೌಕೀರ್ ಶೇಖ್ ಎಂದು ಗುರುತಿಸಲಾದ ಪಾಕಿಸ್ತಾನಿ ಪ್ರಜೆ ಸೇರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಬ್ರಿಟಿಷ್ ಪ್ರಜೆ ಮತ್ತು ಸಂಸದರ ಜೊತೆಗೂಡಿ ಶೇಖ್ ನಡೆಸಿದ ರಾಷ್ಟ್ರ ವಿರೋಧಿ ಪಿತೂರಿಯ ತನಿಖೆಗಾಗಿ ಅಸ್ಸಾಂ ಸರ್ಕಾರವು ಎಸ್‌ಐಟಿಯನ್ನು ರಚಿಸಿತ್ತು. ವಿಷಯದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಅದನ್ನು ಗೃಹ ಸಚಿವಾಲಯಕ್ಕೆ ಹಸ್ತಾಂತರಿಸುವ ನಿರ್ಧರಕ್ಕೆ ಬರಲಾಗಿದೆ ಎಂದು ಅಸ್ಸಾಂ ಸಿಎಂ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪಾಕಿಸ್ತಾನದ ಗೂಢಚಾರ ಸಂಸ್ಥೆಯಾದ ಐಎಸ್‌ಐ ಜೊತೆ ಗೊಗೊಯ್ ಪತ್ನಿಯ ಸಂಪರ್ಕದ ಆರೋಪದ ಮೇಲೆ ಸಂಸದ ಗೊಗೊಯ್ ವಿರುದ್ಧ ತನಿಖೆ ನಡೆಯುತ್ತಿದೆ. ಭಾರತದ ಆಂತರಿಕ ವ್ಯವಹಾರಗಳಲ್ಲಿ ಕಾಂಗ್ರೆಸ್ ಸಂಸದರ ಬ್ರಿಟಿಷ್ ಪತ್ನಿ ಎಲಿಜಬೆತ್ ಕೋಲ್ಬರ್ನ್ ಜೊತೆ ಸಂಪರ್ಕ ಹೊಂದಿದ್ದಾರೆಂದು ಹೇಳಲಾದ ಪಾಕಿಸ್ತಾನಿ ಪ್ರಜೆ ಅಲಿ ತೌಕೀರ್ ಶೇಖ್ ಹಸ್ತಕ್ಷೇಪದ ಪ್ರಕರಣವನ್ನು ತನಿಖೆ ಮಾಡಲು ರಾಜ್ಯ ಸರ್ಕಾರ ಎಸ್‌ಐಟಿಯನ್ನು ರಚಿಸಿತ್ತು.
ನಾವು ಮಾಡಿರುವುದು ಕೇವಲ 10 ಪ್ರತಿಶತ, ಉಳಿದ 90 ಪ್ರತಿಶತ ಇನ್ನೂ ಪತ್ತೆಯಾಗಿಲ್ಲ, ಪಾಕಿಸ್ತಾನದೊಂದಿಗೆ ಗೊಗೊಯ್ರ ಸಂಪರ್ಕದ ಆರೋಪಗಳು ಮೊದಲು ಕೇಳಿ ಬಂದಾಗ ಸ್ಥಳೀಯ ಟಿವಿ ಚಾನೆಲ್‌ಗಳ ಮುಂದೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ತಪ್ಪು ಮಾಹಿತಿಯನ್ನು ನೀಡಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ.
ಸಿಎಂ ಕುಟುಂಬದಿಂದ ಭೂಕಬಳಿಕೆ: ಕಾಂಗ್ರೆಸ್ ಆರೋಪ
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕುಟುಂಬವು ರಾಜ್ಯಾದ್ಯಂತ ಅಕ್ರಮವಾಗಿ ದೊಡ್ಡ ಪ್ರಮಾಣದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಆರೋಪಿಸಿದ ಬಳಿಕ ಅಸ್ಸಾಂನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಗೊಗೊಯ್, ಅಸ್ಸಾಂನ ವಿವಿಧ ಪ್ರದೇಶಗಳಲ್ಲಿ ಹರಡಿರುವ ಸುಮಾರು 12,000 ಬಿಘಾ ಭೂಮಿಯನ್ನು ಮುಖ್ಯಮಂತ್ರಿಯ ಕುಟುಂಬವು ಕಬಳಿಸಿದೆ ಎಂದು ಹೇಳಿದ್ದಾರೆ. ಈ ಆರೋಪವನ್ನು ಮುಖ್ಯಮಂತ್ರಿ ಶರ್ಮಾ ತಳ್ಳಿಹಾಕಿದ್ದು, ಕಾಂಗ್ರೆಸ್ ಸಂಸದನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಘೋಷಿಸಿದರು(ಏಜೆನ್ಸೀಸ್).