ಸಿಎಂ ರೇವಂತ್ ರೆಡ್ಡಿ ಮತ್ತು ಪ್ರಧಾನಿ ಮೋದಿ 
ದೇಶ

ಕ್ಷೇತ್ರ ಪುನರ್ವಿಂಗಡಣೆ ಕುರಿತು ಪ್ರಧಾನಿಗೆ ಪತ್ರ ಬರೆದ ಸಿಎಂ ರೇವಂತ್ ರೆಡ್ಡಿ; ದಕ್ಷಿಣ ಭಾರತದ ರಾಜ್ಯಗಳು ಒಂದಾಗುವಂತೆ ಕರೆ | CM Revanth Reddy

ಹೈದರಾಬಾದ್: ಕ್ಷೇತ್ರ ಪುನರ್ವಿಂಗಡಣೆ ಮತ್ತು ಲೋಕಸಭಾ ಸ್ಥಾನಗಳ ಹೆಚ್ಚಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಈ ಕುರಿತು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ಇದು ನಮ್ಮ ಪ್ರಜಾಪ್ರಭುತ್ವ ಮತ್ತು ದೇಶದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ನಾಳೆಯಿಂದ ಆರಂಭವಾಗಲಿರುವ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಬಗ್ಗೆ ಸಾಂವಿಧಾನಿಕ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವ ಹಿನ್ನೆಲೆ ಈ ಪತ್ರ ಬರೆದಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಅನುಷ್ಠಾನದ ಕುರಿತು ಚರ್ಚಿಸಲು ಸಾಧ್ಯವಾದಷ್ಟು ಬೇಗ ಸರ್ವಪಕ್ಷ ಸಭೆ ಕರೆಯುವಂತೆ ಪ್ರಧಾನಿ ಮೋದಿಯನ್ನು ಒತ್ತಾಯಿಸಿರುವ ಅವರು, ಜನಸಂಖ್ಯೆಯ ಆಧಾರದ ಮೇಲೆ ಲೋಕಸಭಾ ಸ್ಥಾನಗಳನ್ನು ಹೆಚ್ಚಿಸುವುದರಿಂದ ದಕ್ಷಿಣ ಮತ್ತು ಉತ್ತರ ರಾಜ್ಯಗಳ ನಡುವಿನ ಅಸಮಾನತೆ ಉಂಟಾಗುತ್ತದೆ.
ಬದಲಾಗಿ, ಕೇಂದ್ರ ಒಂದು ಅಥವಾ ಎರಡು ದಶಕಗಳ ರಾಜ್ಯಗಳ ಆರ್ಥಿಕ ಸೂಚ್ಯಂಕಗಳನ್ನು ಪರಿಗಣಿಸಿ ರಾಜ್ಯಗಳಿಗೆ ಅವುಗಳ GSDP ಕೊಡುಗೆಗಳ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡಬೇಕು ಒತ್ತಾಯಿಸಿದ್ದಾರೆ.
ಈ ಬಗ್ಗೆ ದಕ್ಷಿಣ ಭಾರತದ ರಾಜ್ಯಗಳು ಒಂದಾಗುವಂತೆ ಕರೆ ನೀಡಿರುವ ಅವರು, ಪಕ್ಕದ ಆಂಧ್ರ ಪ್ರದೇಶ, ಕೇರಳ, ಕರ್ನಾಟಕ ಪಾಂಡಿಚೇರಿ ಹಾಗೂ ತಮಿಳುನಾಡು ಸಿಎಂಗಳಿಗೆ ಪತ್ರ ಬರೆದಿದ್ದಾರೆ. ಮಹಿಳಾ ಮೀಸಲಾತಿ ಮಸೂದೆ, ಕ್ಷೇತ್ರ ಪುನರ್ವಿಂಗಡಣೆ ಮತ್ತು ಸೀಟುಗಳ ಹೆಚ್ಚಳವು ಪ್ರತ್ಯೇಕವಾಗಿವೆಯೇ ಹೊರತು ಪರಸ್ಪರ ಸಂಬಂಧ ಹೊಂದಿಲ್ಲ. ಕೇವಲ ಒಂದು ಸಣ್ಣ ಪ್ರತಿಕ್ರಿಯೆ ಈ ಹೋರಾಟಕ್ಕೆ ಸಾಕಾಗುವುದಿಲ್ಲ, ಎಲ್ಲಾ ದಕ್ಷಿಣ ಭಾರತದ ರಾಜ್ಯಗಳು ಒಂದಾಗಬೇಕು ಎಂದು ಕರೆ ನೀಡಿದ್ದಾರೆ (ಏಜೆನ್ಸೀಸ್).