ಸಾಂದರ್ಭಿಕ ಚಿತ್ರ  
ದೇಶ

ಟ್ರಾಫಿಕ್​​ ನಿಯಮ ಉಲ್ಲಂಘಿಸಿದ್ರೆ ಬ್ಯಾಂಕ್​ ಖಾತೆಯಿಂದಲೇ ನೇರವಾಗಿ ಹಣ ಕಡಿತ! ಇದೇನಿದು ಹೊಸ ವ್ಯಸಸ್ಥೆ? Traffic Challan

ಪ್ರಮುಖ ಮುಖ್ಯಾಂಶಗಳು

  • ವಾಹನ ಸವಾರರ ಎದೆ ಝಲ್​ ಎನ್ನುವಂತಹ ವ್ಯವಸ್ಥೆಯೊದು ಶೀಘ್ರದಲ್ಲೇ ಜಾರಿ
  • ಟ್ರಾಫಿಕ್​ ನಿಯಮ ಉಲ್ಲಂಘನೆ ಮಾಡಿದರೆ ಬ್ಯಾಂಕ್​ ಖಾತೆಯಿಂದಲೇ ಹಣ ಕಡಿತ
  • ಇಂಥದ್ದೊಂದು ವ್ಯವಸ್ಥೆ ಸದ್ಯ ತೆಲಂಗಾಣದಲ್ಲಿ ಬರಲಿದೆ ಎನ್ನುವ ಒಂದು ವರದಿ ಇದೆ
  • ಮುಂದೊಂದು ದಿನ ಕರ್ನಾಟಕದಲ್ಲೂ ಇಂಥದ್ದೊಂದು ವ್ಯವಸ್ಥೆ ಬಂದರೆ ಅಚ್ಚರಿಪಡಬೇಕಿಲ್ಲ
Traffic Challan : ಯಾವುದೇ ವಾಹನ ಸವಾರರು ಅಥವಾ ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದರೆ, ಟ್ರಾಫಿಕ್​ ಪೊಲೀಸರು ದಂಡದ ಚಲನ್‌ಗಳನ್ನು ನೀಡುತ್ತಾರೆ. ಅದನ್ನು ತಕ್ಷಣವೇ ಪಾವತಿಸಬೇಕು ಅಂತೇನಿಲ್ಲ. ಬೇಕು ಅನಿಸಿದಾಗ ದಂಡವನ್ನು ಕಟ್ಟಬಹುದು. ಆದರೆ, ಒಂದು ವಾಹನಕ್ಕೆ ಅತಿಯಾದ ಚಲನ್‌ಗಳು ಬಂದಾಗ ಆ ವಾಹನವನ್ನು ಟ್ರಾಫಿಕ್​ ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಾರೆ. ಇದಿಷ್ಟು ಈಗ ನಡೆಯುತ್ತಿರುವ ಪ್ರಕ್ರಿಯೆ. ಆದರೆ, ವಾಹನ ಸವಾರರ ಎದೆ ಝಲ್​ ಎನ್ನುವಂತಹ ವ್ಯವಸ್ಥೆಯೊದು ಶೀಘ್ರದಲ್ಲೇ ಜಾರಿಗೆ ಬರುವ ಸಾಧ್ಯತೆ. ಸದ್ಯ ಇಂಥದ್ದೊಂದು ವ್ಯವಸ್ಥೆ ತೆಲಂಗಾಣದಲ್ಲಿ ಬರಲಿದೆ ಎನ್ನುವ ವರದಿ ಇದೆ. ಅದೇ ರೀತಿ ಕರ್ನಾಟಕದಲ್ಲೂ ಮುಂದೊಂದು ದಿನ ಬಂದರೆ ಅಚ್ಚರಿಪಡಬೇಕಿಲ್ಲ.
ಅಂದಹಾಗೆ, ತೆಲಂಗಾಣದಲ್ಲಿ ಬರಲಿರುವ ಹೊಸ ವ್ಯವಸ್ಥೆಯಲ್ಲಿ, ನಿಮ್ಮ ವಾಹನಕ್ಕೆ ನಿಯಮ ಉಲ್ಲಂಘನೆಯ ಚಲನ್ ನೀಡಿದ ಕೆಲವೇ ಸಮಯದಲ್ಲಿ ನಿಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ಹಣವನ್ನು ಕಡಿತಗೊಳಿಸಲಾಗುತ್ತದೆ. ಇದು ನಿಜಕ್ಕೂ ಆಘಾತಕಾರಿ ಎನ್ನಬಹುದು. ಇಂಥದ್ದೊಂದು ಮಾತು ಆಡಿರುವುದು ಯಾವುದೇ ಅಧಿಕಾರಿಯಲ್ಲ, ಆ ರಾಜ್ಯದ ಮುಖ್ಯಮಂತ್ರಿಗಳೇ ಇಂಥದ್ದೊಂದು ಪ್ರಸ್ತಾವನೆ ಮುಂದಿಟ್ಟಿರುವುದು ಅಚ್ಚರಿಯ ಸಂಗತಿಯಾಗಿದೆ.
ಹೈದರಾಬಾದ್‌ನ ಯೂಸುಫ್‌ಗುಡದಲ್ಲಿ ಇತ್ತೀಚೆಗೆ 'ಅರೈವ್ ಅಲೈವ್' ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಆಗುತ್ತಿರುವ ಸಾವಿನ ಪ್ರಮಾಣ ಆತಂಕಕಾರಿಯಾಗಿದ್ದು, ಇದಕ್ಕೆ ಪ್ರಮುಖ ಕಾರಣವೆಂದರೆ ವೇಗದ ಚಾಲನೆ ಮತ್ತು ಕುಡಿದು ವಾಹನ ಚಲಾಯಿಸುವುದು ಎಂದು ಹೇಳಿದರು. ಅದೇ ಸಮಯದಲ್ಲಿ, ಸಿಎಂ ರೇವಂತ್ ರೆಡ್ಡಿ ಅವರು ಪೊಲೀಸರ ಮುಂದೆ ಒಂದು ಪ್ರಸ್ತಾವನೆ ಸಲ್ಲಿಸಿದರು.
ಸಂಚಾರ ನಿಯಮಗಳಿಗೆ ವಿರುದ್ಧವಾಗಿ ರಸ್ತೆಗಳಲ್ಲಿ ವಾಹನಗಳನ್ನು ಓಡಿಸುವ ವಾಹನ ಚಾಲಕರಿಗೆ ಇನ್ನು ಮುಂದೆ ಟ್ರಾಫಿಕ್ ಚಲನ್‌ಗಳಲ್ಲಿ ಯಾವುದೇ ರಿಯಾಯಿತಿಗಳು ಇರುವುದಿಲ್ಲ ಎಂದು ರೇವಂತ್ ರೆಡ್ಡಿ ಸ್ಪಷ್ಟಪಡಿಸಿದರು. ಅಲ್ಲದೆ, ಚಲನ್ ನೀಡಿದ ತಕ್ಷಣ ವಾಹನ ಚಾಲಕರ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಿಎಂ ರೇವಂತ್ ರೆಡ್ಡಿ ಇದೇ ವೇಳೆ ಪ್ರಸ್ತಾಪಿಸಿದರು. ಇದಕ್ಕಾಗಿ, ವಾಹನ ನೋಂದಣಿ ಸಮಯದಲ್ಲಿ ಮಾಲೀಕರ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬೇಕೆಂದು ರೇವಂತ್ ಸೂಚಿಸಿದರು. ಯಾವುದೇ ನಿಯಮವನ್ನು ಉಲ್ಲಂಘಿಸಿ ಚಲನ್ ನೀಡಿದರೆ, ದಂಡದ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸುವಂತೆ ತಂತ್ರಜ್ಞಾನವನ್ನು ಪರಿಚಯಿಸಲು ಸಿಎಂ ರೇವಂತ್ ರೆಡ್ಡಿ ನಿರ್ದೇಶಿಸಿದರು ಮತ್ತು ಅಧಿಕಾರಿಗಳು ಅದಕ್ಕೆ ಅನುಗುಣವಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ಶಾಲಾ ಹಂತದಿಂದಲೇ ಸಂಚಾರ ಶಿಸ್ತು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ರಸ್ತೆ ಸುರಕ್ಷತಾ ವಿಷಯಗಳನ್ನು ಸೇರಿಸಲು ಸಿಎಂ ರೇವಂತ್ ರೆಡ್ಡಿ ಶಿಕ್ಷಣ ಇಲಾಖೆಗೆ ಸೂಚಿಸಿದರು. ಸಾರಿಗೆ ಮತ್ತು ಪೊಲೀಸ್ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಿದಾಗ ಮಾತ್ರ ರಸ್ತೆ ಅಪಘಾತ ಮುಕ್ತ ತೆಲಂಗಾಣ ಸಾಧ್ಯ ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅಭಿಪ್ರಾಯಪಟ್ಟರು.
ರಸ್ತೆ ಸುರಕ್ಷತಾ ಇಲಾಖೆಯಲ್ಲಿ ಕೆಲಸ ಮಾಡುವುದನ್ನು ಶಿಕ್ಷೆ ಎಂದು ಪರಿಗಣಿಸುವ ಪ್ರವೃತ್ತಿ ಬದಲಾಗಬೇಕು. ಇನ್ನು ಮುಂದೆ ಈ ಇಲಾಖೆಗೆ ಡಿಜಿ ಅಥವಾ ಹೆಚ್ಚುವರಿ ಡಿಜಿ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗುವುದು ಮತ್ತು ಈ ವಲಯವನ್ನು ಹೈಡ್ರಾ ಅಥವಾ ಸೈಬರ್ ಕ್ರೈಮ್ ಇಲಾಖೆಗಳಂತೆ ಶಕ್ತಿಶಾಲಿಗೊಳಿಸಲಾಗುವುದು ಎಂದು ರೇವಂತ್ ರೆಡ್ಡಿ ಘೋಷಿಸಿದರು. ಪ್ರಸ್ತುತ ನಿಯಮಗಳು ಸಾಕಾಗುವುದಿಲ್ಲ ಮತ್ತು ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ ಹೊಸ ಸಾರಿಗೆ ಕಾನೂನನ್ನು ತರುವ ಅವಶ್ಯಕತೆಯಿದೆ ಎಂದು ಸಿಎಂ ರೇವಂತ್ ಅಭಿಪ್ರಾಯಪಟ್ಟರು, (ಏಜೆನ್ಸೀಸ್​).