ದೇಶ

ಜಮ್ಮು-ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ ಕೋರಿ ಸಿಎಂ ಓಮರ್ ಅಬ್ದುಲ್ಲಾ ನಿರ್ಣಯ ಮಂಡನೆ: ವಿಧಾನಸಭೆಯಲ್ಲಿ ಭಾರಿ ಹೈಡ್ರಾಮ | Jammu and Kashmir

ಜಮ್ಮು-ಕಾಶ್ಮೀರಕ್ಕೆ ಮತ್ತೆ ಪೂರ್ಣ ರಾಜ್ಯ ಸ್ಥಾನಮಾನ ಕೋರಿ ಸಿಎಂ ಓಮರ್ ಅಬ್ದುಲ್ಲಾ ಅವರು ಶುಕ್ರವಾರ(ಸೆ. 25) ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದು, ಬಿಜೆಪಿ ಸದಸ್ಯರು ಅದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸದನದಲ್ಲಿ ಭಾರಿ ಹೈಡ್ರಾಮ ನಡೆದಿದೆ.

ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ಮತ್ತೆ ಪೂರ್ಣ ರಾಜ್ಯ ಸ್ಥಾನಮಾನ ಕೋರಿ ಸಿಎಂ ಓಮರ್ ಅಬ್ದುಲ್ಲಾ ಅವರು ಶುಕ್ರವಾರ(ಸೆ. 25) ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದು, ಬಿಜೆಪಿ ಸದಸ್ಯರು ಅದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸದನದಲ್ಲಿ ಭಾರಿ ಹೈಡ್ರಾಮ ನಡೆದಿದೆ.

ನಿರ್ಣಯದಲ್ಲಿ 2000ನೇ ಇಸವಿಯಲ್ಲಿ ಜಮ್ಮು-ಕಾಶ್ಮೀರ ವಿಧಾನಸಭೆಯು ಅಂಗೀಕರಿಸಿದ್ದ ಸ್ವಾಯತ್ತತೆ ನಿರ್ಣಯ ಸೇರಿದಂತೆ, ಈ ಹಿಂದೆ ಅಂಗೀಕರಿಸಲಾದ ನಿರ್ಣಯಗಳನ್ನು ಒಮರ್ ಅಬ್ದುಲ್ಲಾ ಅವರು ಪುನಃ ಪ್ರಸ್ತಾಪಿಸಿದ್ದು ಬಿಜೆಪಿ ಶಾಸಕರ ವಿರೋಧಕ್ಕೆ ಕಾರಣವಾಗಿದೆ.

ಪ್ರಸ್ತಾವನೆಯನ್ನು ವಿರೋಧಿಸಿ ಬಿಜೆಪಿ ಶಾಸಕರು, ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು. ಮತ್ತು ನಿರ್ಣಯದ ಪ್ರತಿಗಳನ್ನು ಹರಿದು ಹಾಕಿದರು. ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಶಾಸಕರು ಕೂಡ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಸದನದಲ್ಲಿ ಭಾರಿ ಕೋಲಾಹಲವನ್ನು ಸೃಷ್ಟಿಸಿತು.

ಸಿಎಂ ಮಂಡಿಸಿದ ನಿರ್ಣಯದಲ್ಲಿ, ಈ ಸದನವು ಜೂನ್ 26, 2000 ಮತ್ತು ನವೆಂಬರ್ 6, 2024 ರಂದು ಅಂಗೀಕರಿಸಿದ ನಿರ್ಣಯಗಳ ಜೊತೆಗೆ, ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ರಾಜ್ಯ ಸ್ಥಾನಮಾನವನ್ನು ತಕ್ಷಣ ಮತ್ತು ತುರ್ತಾಗಿ ಪುನಃಸ್ಥಾಪಿಸಲು ಭಾರತ ಸರ್ಕಾರವನ್ನು ಸದನವು ಒತ್ತಾಯಿಸುತ್ತದೆ ಮತ್ತು ಈ ನಿರ್ಣಯವನ್ನು ಭಾರತ ಸರ್ಕಾರಕ್ಕೆ ರವಾನಿಸಬೇಕೆಂದು ನಿರ್ಧರಿಸುತ್ತದೆ ಎಂದು ತಿಳಿಸಲಾಗಿದೆ.

ಸಿಎಂ ನಿರ್ಣಯವನ್ನು ಮಂಡಿಸುತ್ತಿದ್ದಂತೆಯೇ, ಆಡಳಿತ ಪಕ್ಷದ ಸದಸ್ಯರು ತಮ್ಮ ಮೇಜುಗಳನ್ನು ತಟ್ಟುವ ಮೂಲಕ ಅದನ್ನು ಸ್ವಾಗತಿಸಿದರು. ಆದರೆ, 2000ನೇ ಇಸವಿಯ ನಿರ್ಣಯದ ಪ್ರಸ್ತಾಪವನ್ನು ವಿರೋಧಿಸಿ ಬಿಜೆಪಿ ಶಾಸಕರು ಸದನದ ಭಾವಿಗಿಳಿದು ಪ್ರತಿಭಟನೆ ನಡೆಸಿದರು. ಸ್ಪೀಕರ್ ಸದನವನ್ನೂ ಸೋಮವಾರಕ್ಕೆ ಮುಂದೂಡಿದ್ದಾರೆ. ಅಂದು ನಿರ್ಣಯವನ್ನು ಮತಕ್ಕೆ ಹಾಕುವ ಸಾಧ್ಯತೆಯಿದೆ.

ಹಿಂದಿನ ನಿರ್ಣಯಕ್ಕೆ ಯಾಕೆ ವಿರೋಧ?

ಓಮರ್ ಅಬ್ದುಲ್ಲಾ ಅವರ ತಂದೆ ಫಾರೂಕ್ ಅಬ್ದುಲ್ಲಾ ನೇತೃತ್ವದ ಎನ್‌ಸಿ ಸರ್ಕಾರವು, 2000 ಜೂನ್ 26ರಂದು ಜಮ್ಮು ಮತ್ತು ಕಾಶ್ಮೀರವು ರಾಜ್ಯವಾಗಿದ್ದಾಗ 1953ರ ಆಗಸ್ಟ್ 9ರ ಮೊದಲು ಇದ್ದಂತಹ ಹೆಚ್ಚಿನ ಸ್ವಾಯತ್ತತೆಯನ್ನು ಮರುಸ್ಥಾಪಿಸುವಂತೆ ಕೋರಿ ನಿರ್ಣಯವನ್ನು ಅಂಗೀಕರಿಸಿತ್ತು. ಇದು ಪ್ರತ್ಯೇಕ ಪ್ರಧಾನ ಮಂತ್ರಿ ಮತ್ತು ಸದರ್-ಎ-ರಿಯಾಸತ್ (ಅಧ್ಯಕ್ಷ) ಹುದ್ದೆಗಳನ್ನು ಪ್ರಸ್ತಾಪಿಸುತ್ತದೆ. ಮತ್ತು ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗದ ವ್ಯಾಪ್ತಿಗೆ ಒಳಪಡುವುದಿಲ್ಲ.

ಇನ್ನೂ 2024ರ ನವೆಂಬರ್ 6ರಂದು ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸುವಂತೆ ಕೋರುವ ಮತ್ತೊಂದು ನಿರ್ಣಯವನ್ನು ಸದನವು ಅಂಗೀಕರಿಸಿತು. ಎರಡೂ ನಿರ್ಣಯಗಳನ್ನು ಬಿಜೆಪಿ ಶಾಸಕರು ವಿರೋಧಿಸಿದ್ದಾರೆ.

ಬಿಜೆಪಿ ಪ್ರಮಾಣ ಪತ್ರ ಅಗತ್ಯವಿಲ್ಲ

ಇನ್ನೂ ಸದನ ಮುಂದೂಡಿದ ಬಳಿಕ ನಿರ್ಣಯದ ಬಗ್ಗೆ ಮಾತನಾಡಿರುವ ಸಿಎಂ ಓಮರ್ ಅಬ್ದುಲ್ಲಾ, ಕಳೆದ ಎರಡು ವರ್ಷಗಳಿಂದ ನಾನು ರಾಜ್ಯ ಸ್ಥಾನಮಾನ ಮರುಸ್ಥಾಪನೆಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ ಆದರೆ ಏನೂ ಮಾಡಿಲ್ಲ. ಸ್ಥಳೀಯ ಬಿಜೆಪಿ ನಾಯಕತ್ವವು ರಾಜ್ಯ ಸ್ಥಾನಮಾನ ವಿರೋಧಿಸುತ್ತದೆ ಎಂಬುದು ಇವತ್ತು ಜಗ್ಗಜಾಹೀರಾಗಿದೆ ಎಂದಿದ್ದಾರೆ.

ರಾಜ್ಯ ಸ್ಥಾನಮಾನ ನನ್ನ ಸರ್ಕಾರಕ್ಕಲ್ಲ, ನನ್ನ ಪಕ್ಷಕ್ಕಲ್ಲ. ಅದು ಜಮ್ಮು ಮತ್ತು ಕಾಶ್ಮೀರದ ಗುರುತಿಗಾಗಿ. ಜಮ್ಮು ಮತ್ತು ಕಾಶ್ಮೀರದ ಜನರಿಗಗಾಗಿ ಈ ನಿರ್ಣಯ. ಈ ನಿರ್ಣಯವು ರಾಜ್ಯತ್ವದ ಪುನಃಸ್ಥಾಪನೆಯನ್ನು ಯಾರು ಬಯಸುತ್ತಾರೆ ಮತ್ತು ವಿರೋಧಿಸುವವರು ಯಾರು? ಜಮ್ಮು ಮತ್ತು ಕಾಶ್ಮೀರದ ನಿಜವಾದ ಶತ್ರುಗಳನ್ನು ಯಾರು ಎಂಬುದನ್ನು ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.

ಮುಂದುವರೆದು, ನ್ಯಾಷನಲ್ ಕಾನ್ಫರೆನ್ಸ್ ನಾಯಕತ್ವವನ್ನು ರಾಷ್ಟ್ರವಿರೋಧಿ ಎಂದು ಕರೆದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಅವರು, ನಮಗೆ ಬಿಜೆಪಿಯಿಂದ ಯಾವುದೇ ಪ್ರಮಾಣಪತ್ರ ಅಗತ್ಯವಿಲ್ಲ. ನಾವು ದೇಶಕ್ಕಾಗಿ ಅನೇಕ ತ್ಯಾಗಗಳನ್ನು ಮಾಡಿದ್ದೇವೆ ಮತ್ತು ಅವರ ರಾಷ್ಟ್ರವಿರೋಧಿ ಹೇಳಿಕೆಗಳ ಬಗ್ಗೆ ನಮಗೆ ಯಾವುದೇ ಚಿಂತೆಯಿಲ್ಲ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).