Corrupt Mouth | ಸಿಎಂ ಯೋಗಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ
ಲಖನೌ: ಇತ್ತೀಚಿನ ದಿನಗಳಲ್ಲಿ ಸಿಎಂ ಎಂದರೆ ಭ್ರಷ್ಟ ಬಾಯಿ (Corrupt Mouth) ಎಂದರ್ಥ, ನಮ್ಮ ಮುಖ್ಯಮಂತ್ರಿ ಖಿಲಾಡಿಯಾಗಿದ್ದು, ಆದರೆ ಅವರಿಗೆ ಆಟವಾಡಲು ಸಾಧ್ಯವಾಗುತ್ತಿಲ್ಲ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದರು.
ಮಾಜಿ ಸಚಿವ ನಸೀಮುದ್ದೀನ್ ಸಿದ್ದಿಕಿ ಪಕ್ಷ ಸೇರ್ಪಡೆ ಮಾಡಿಕೊಂಡ ಬಳಿಕ ಮಾತನಾಡಿದ ಅಖಿಲೇಶ್, ಕೇಂದ್ರ ಮತ್ತು ಉತ್ತರ ಪ್ರದೇಶದ ಸರ್ಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ದೆಹಲಿ ಮತ್ತು ಲಕ್ನೋ ಎರಡರಲ್ಲೂ ರಾಜಕೀಯ ವಾತಾವರಣ ಕೆಟ್ಟದಾಗಿದೆ ಎಂದು ಆರೋಪಿಸಿರುವ ಎಸ್‌ಪಿ ನಾಯಕ, ಎರಡೂ ಹಂತಗಳಲ್ಲಿ ಆಡಳಿತ ವೈಫಲ್ಯಗಳಿವೆ ಎಂದರು.
ಶಂಕರಾಚಾರ್ಯರಿಗೆ ಅಗೌರವ
ಕೆಲವು ನಾಯಕರು ಶಂಕರಾಚಾರ್ಯರನ್ನು ಅಗೌರವಿಸಿದ್ದಾರೆ ಎಂದು ಆರೋಪಿಸಿದ ಯಾದವ್, ಕೆಲವರು ನಮ್ಮ ಪೂಜ್ಯ ಶಂಕರಾಚಾರ್ಯರನ್ನು ಅವಮಾನಿಸುತ್ತಿದ್ದಾರೆ, ಕೇಸರಿ ನಿಲುವಂಗಿಯನ್ನು ಧರಿಸುವ ಯಾರನ್ನಾದರೂ ನಾವು ಗೌರವದಿಂದ ನೋಡುತ್ತೇವೆ, ಆದರೆ ಅವರು ಯಾವ ರೀತಿಯ ಭಾಷೆಯನ್ನು ಬಳಸುತ್ತಿದ್ದಾರೆ? ಅವರು ಬಾಯಿ ತೆರೆದಾಗಲೆಲ್ಲಾ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಹೇಳಿದರು.
ಇತರರ ಪ್ರಮಾಣಪತ್ರಗಳನ್ನು ಕೇಳುತ್ತಿರುವವರು, ಮೊದಲು ತಮ್ಮ ಸ್ವಂತ ಪ್ರಮಾಣಪತ್ರಗಳನ್ನು ಎಲ್ಲಿಟ್ಟಿದ್ದಾರೆ ಎನ್ನುವುದನ್ನು ರಾಜ್ಯದ ಜನತೆಯ ಮುಂದೆ ಬಹಿರಂಗಪಡಿಸಲಿ ಎಂದು ಸವಾಲ್ ಹಾಕಿದರು.
ರಫೇಲ್ ಮೇಲಿನ ದಾಳಿ, 'ಮೇಕ್ ಇನ್ ಇಂಡಿಯಾ'
ನಾವು ಬೇರೆ ದೇಶದಿಂದ ನೂರಾರು ಕೋಟಿ ಮೌಲ್ಯದ ರಫೇಲ್ ವಿಮಾನಗಳನ್ನು ಖರೀದಿಸುವುದಾದರೆ ಮೇಕ್ ಇನ್ ಇಂಡಿಯಾ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅಖಿಲೇಶ್, ಕೇಂದ್ರದ ಆರ್ಥಿಕ ನಿರೂಪಣೆಯಲ್ಲಿ ವಿರೋಧಾಭಾಸಗಳಿವೆ ಎಂದು ಟೀಕಿಸಿದರು.
ಎಪ್ಸ್ಟೀನ್ ಫೈಲ್‌ಗಳ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಮಾಜಿ ಸಿಎಂ ಯಾದವ್, ಅಂತರರಾಷ್ಟ್ರೀಯ ವಿಷಯಗಳ ಬದಲು, ನಮ್ಮ ಗಮನವು ದೇಶೀಯ ಕಾಳಜಿಗಳ ಮೇಲೆ ಉಳಿದಿದೆ ಎಂದು ಹೇಳಿದರು.
ಮತದಾರರ ಪಟ್ಟಿ ಅಕ್ರಮದ ಆರೋಪ
ಬಿಜೆಪಿ ಮತದಾರರ ಪಟ್ಟಿಗಳಲ್ಲಿ ದೊಡ್ಡ ಪ್ರಮಾಣದ ತಿರುಚುವಿಕೆ ನಡೆಸಿದೆ ಎಂದಿರುವ ಎಸ್‌ಪಿ ಮುಖ್ಯಸ್ಥ ಯಾದವ್, ಪಂಚಾಯತ್ ಚುನಾವಣೆಗಳಲ್ಲಿ ವಿಳಂಬಕ್ಕೆ ಇದೇ ಕಾರಣ ಎಂದರು. ಮತದಾರರ ಪಟ್ಟಿಯಲ್ಲಿ ಭಾರಿ ಹಗರಣವಿದೆ. ಹೆಬ್ಬೆರಳಿನ ಗುರುತುಗಳೊಂದಿಗೆ ಸಹಿ ಮಾಡುವವರು ಸಹ ಫಾರ್ಮ್ -7 ರಲ್ಲಿ ಸಹಿಯನ್ನು ಸೇರಿಸಿದ್ದಾರೆ ಎಂದು ಆರೋಪಿಸಿದರು.
ದೇಶಾದ್ಯಂತ ಜಾತಿ ಜನಗಣತಿ ನಡೆಸಬೇಕೆಂಬ ತಮ್ಮ ದೀರ್ಘಕಾಲದ ಬೇಡಿಕೆಯನ್ನು ಪುನರುಚ್ಚರಿಸುತ್ತಾ, ಇಂತಹ ಒಂದು ಕಾರ್ಯದ ಬಳಿಕ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ಇಂದು ಬೇರೆಯವರ ಹೂವು ಬಾಡುತ್ತಿದ್ದರಿಂದ ಕೆಲ ಹೂವುಗಳು ನಮ್ಮ ಬಳಿಗೆ ಬಂದಿವೆ, ಬಹುಜನ ಸಮಾಜ ಮತ್ತು ಸಮಾಜವಾದಿ ಪಕ್ಷದ ನಡುವಿನ ಸಂಬಂಧಗಳು ಗಾಢವಾಗುತ್ತಿದ್ದು, ಇದು ರಾಜ್ಯದಲ್ಲಿ ಸಾಮಾಜಿಕ ಮತ್ತು ರಾಜಕೀಯ ಹೊಂದಾಣಿಕೆಗಳಲ್ಲಿ ಸಂಭಾವ್ಯ ಬದಲಾವಣೆಗಳನ್ನು ಸೂಚಿಸುತ್ತದೆ ಎಂದು ಅಖಿಲೇಶ್ ಯಾದವ್ ಹೇಳಿದರು(ಏಜೆನ್ಸೀಸ್).