ಬಿಹಾರ ಸಿಎಂ ನಿತೀಶ್ ಕುಮಾರ್ 
ದೇಶ

ಎಂಎಲ್​ಸಿ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಲಿರುವ ಸಿಎಂ ನಿತೀಶ್ ಕುಮಾರ್; ಶೀಘ್ರದಲ್ಲಿ ಸಿಎಂ ಸ್ಥಾನಕ್ಕೂ ರಾಜೀನಾಮೆ ಸಾಧ್ಯತೆ | CM Nitish Kumar

ಪಾಟ್ನಾ: ಕಳೆದ ಮಾರ್ಚ್ 16ರಂದು ರಾಜ್ಯಸಭೆಗೆ ಆಯ್ಕೆಯಾಗಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ಇಂದು(ಮಾ. 30) ಬಿಹಾರ ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಮತ್ತು ಶೀಘ್ರದಲ್ಲೇ ಅವರು ಸಿಎಂ ಸ್ಥಾನಕ್ಕೂ ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಸಿಎಂ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಚಟುವಟಿಕೆಗಳು ಚುರುಕಿನಿಂದ ಸಾಗಿವೆ.
ಸಂವಿಧಾನದ ಪ್ರಕಾರ, ರಾಜ್ಯ ವಿಧಾನಸಭೆಯ ಸದಸ್ಯರು ಸಂಸತ್ತಿಗೆ ಆಯ್ಕೆಯಾದಾಗ, ಚುನಾವಣೆ ನಡೆದ 14 ದಿನಗಳ ಒಳಗೆ ರಾಜೀನಾಮೆ ನೀಡಬೇಕು ಎನ್ನಲಾಗಿದೆ. ನಿತೀಶ್ ಕುಮಾರ್ ಅವರು ಮಾರ್ಚ್ 16ರಂದು ರಾಜ್ಯಸಭೆಗೆ ಆಯ್ಕೆಯಾದರು. ಅದರನ್ವಯ ಅವರು ಇಂದು ಬಿಹಾರ ವಿಧಾನ ಪರಿಷತ್ತಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಪಕ್ಷದ ಪದಾಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಕೂಡ ರಾಜ್ಯಸಭೆಗೆ ಆಯ್ಕೆಯಾಗಿರುವ ಹಿನ್ನೆಲೆ, ಇಂದು ಬಿಹಾರ ವಿಧಾನಸಭೆಗೆ ರಾಜೀನಾಮೆ ನೀಡಲಿದ್ದಾರೆ. ವಿಧಾನಸಭಾ ಸಚಿವಾಲಯದಲ್ಲಿ ಇಬ್ಬರ ರಾಜೀನಾಮೆಗೆ ಸಿದ್ಧತೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
1950ರ ಏಕಕಾಲಿಕ ಸದಸ್ಯತ್ವ ನಿಷೇಧ ನಿಯಮಗಳ ಪ್ರಕಾರ (ಸಂವಿಧಾನದ 101/190 ನೇ ವಿಧಿಗಳ ಅಡಿಯಲ್ಲಿ) ಮಾರ್ಚ್ 30 ಅವರ ರಾಜೀನಾಮೆಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ರಾಜ್ಯ ಮಟ್ಟದ ಹುದ್ದೆಯನ್ನು ಹೊಂದಿರುವಾಗ ಶಾಸಕರು ಸಂಸತ್ತಿಗೆ ಆಯ್ಕೆಯಾದ ಎಲ್ಲಾ ಪ್ರಕರಣಗಳಿಗೆ ಈ ನಿಬಂಧನೆ ಅನ್ವಯಿಸುತ್ತದೆ.

ಸಿಎಂ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಪೈಪೋಟಿ

ಸಿಎಂ ನಿತೀಶ್ ಕುಮಾರ್ ಇಂದು ಎಂಎಲ್​ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ರೆ, ಕೆಲವೇ ದಿನಗಳಲ್ಲಿ ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡಬೇಕಾಗಬಹುದು. ಈ ಹಿನ್ನೆಲೆ ಏತನ್ಮಧ್ಯೆ, ಬಿಹಾರದಲ್ಲಿ ಹೊಸ ಮುಖ್ಯಮಂತ್ರಿ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಗೆ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ.
ಬಿಹಾರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ತನ್ನದೇ ಆದ ಮುಖ್ಯಮಂತ್ರಿಯನ್ನು ಹೊಂದುವ ಸೂಚನಯಿದ್ದು, ಸಿಎಂ ಹುದ್ದೆಗೆ ತೀರ್ವ ಪೈಪೋಟಿ ಆರಂಭವಾಗಿದೆ ಎಂದು ವರದಿಯಾಗಿದೆ. ಆರ್​ಎಸ್ಎಸ್ ಹಿನ್ನಲೆಯಿಂದ ಬಂದವರು ಸಿಎಂ ಹುದ್ದೆಗೇರುವ ಸಾಧ್ಯತೆ ಇದೆ ಎನ್ನಲಾಗಿದೆ (ಏಜೆನ್ಸೀಸ್).