ಪ್ರಧಾನಿ ಮೋದಿ ಮತ್ತು ಸಿಎಂ ಎಂ.ಕೆ.ಸ್ಟಾಲಿನ್
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರ ನಡುವಿನ ಮಾತಿನ ಸಮರ ಆರಂಭವಾಗಿದ್ದು, ಇಂದು(ಜ. 23) ಚೆನ್ನೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಕರೆ ನೀಡಿದ್ದರು.
ಪ್ರಧಾನಿ ಮೋದಿಯ ಈ ಹೇಳಿಕೆಗೆ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಅಲ್ಲ, ಡಬ್ಬಾ ಇಂಜಿನ್ ಎಂದು ಲೇವಡಿ ಮಾಡಿದ್ದು, ಅದು ತಮಿಳುನಾಡಿನಲ್ಲಿ ನಡೆಯಲ್ಲ ಎಂದು ಹೇಳಿದ್ದಾರೆ.
ಗೌರವಾನ್ವಿತ ಪ್ರಧಾನ ಮಂತ್ರಿಗಳೇ, ನಿಮ್ಮ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಹೇರಿದ ಎಲ್ಲಾ ಅಡೆತಡೆಗಳ ಹೊರತಾಗಿಯೂ ಅವುಗಳನ್ನು ಛಿದ್ರಗೊಳಿಸಿ, ತಮಿಳುನಾಡು ಇತಿಹಾಸ ಹೇಳುವ ರೀತಿಯಲ್ಲಿ ಅಭಿವೃದ್ಧಿಯನ್ನು ಸಾಧಿಸಿದೆ.
ಸ್ವಲ್ಪ ಯೋಚಿಸಿ, ನೀವು ಉಲ್ಲೇಖಿಸುವ ಡಬಲ್ ಎಂಜಿನ್ ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರಗೆ ತಮಿಳುನಾಡು, ಕೇರಳ, ತೆಲಂಗಾಣ, ಕರ್ನಾಟಕ ಹಾಗೂ ಪಶ್ಚಿಮ ಬಂಗಾಳಕ್ಕೆ ಹೋಲಿಸಿದರೆ, ನಿಮ್ಮ ಡಬ್ಬಾ ಎಂಜಿನ್ ಪ್ರವೇಶಿಸದ ರಾಜ್ಯಗಳು ಅಭಿವೃದ್ಧಿಯಲ್ಲಿ ಉನ್ನತ ಮಟ್ಟದಲ್ಲಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ತಮಿಳರು ಮತ್ತು ತಮಿಳುನಾಡಿನ ವಿರುದ್ಧ ಬಿಜೆಪಿ ಮಾಡಿದ ದ್ರೋಹಗಳನ್ನು ಪ್ರಧಾನಿ ಮರೆಮಾಡಿದರೂ, ರಾಜ್ಯದ ಜನರು ಅವುಗಳನ್ನು ಎಂದಿಗೂ ಮರೆಯುವುದಿಲ್ಲ. ದೆಹಲಿಯ ದುರಹಂಕಾರಕ್ಕೆ ತಮಿಳುನಾಡು ಮಣಿಯುವುದಿಲ್ಲ ಎಂದು ಕಿಡಿಕಾರಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಅಧಿಕೃತವಾಗಿ ಇಂದು ಚಾಲನೆ ನೀಡಿದ್ದ ಪ್ರಧಾನಿ ಮೋದಿ, ಎನ್ಡಿಎ ಪರವಾಗಿ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಿದ್ದರು. ಈ ವೇಳೆ ರಾಜ್ಯದಿಂದ ಡಿಎಂಕೆಯನ್ನು ಮುಕ್ತಗೊಳಿಸಲು ಜನ ಸಿದ್ದರಾಗಿದ್ದಾರೆ. ತಮಿಳುನಾಡಿನ ಬೆಳವಣಿಗೆ ಮತ್ತು ಪ್ರಗತಿಗಾಗಿ ಕೇಂದ್ರದೊಂದಿಗೆ ನಡೆಯುವ ಡಬಲ್ ಇಂಜಿನ್ ಸರ್ಕಾರವನ್ನು ತರಬೇಕು ಎಂದು ಕರೆ ನೀಡಿದ್ದಾರೆ (ಏಜೆನ್ಸೀಸ್).