ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್
ಚೆನ್ನೈ: ತಮಿಳುನಾಡಿನ ಮಧುರೈ ಮತ್ತು ಕೊಯಮತ್ತೂರಿನಲ್ಲಿ ಮೆಟ್ರೋ ರೈಲ್ವೆ ಯೋಜನೆಯನ್ನು ಪ್ರಾರಂಭಿಸುವ ತಮಿಳುನಾಡು ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಎಂ.ಕೆ.ಸ್ಟಾಲಿನ್(CM M K Stalin) ಬುಧವಾರ(ನ. 19) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, 'ದೇವಾಲಯ ನಗರಿ' ಮಧುರೈ ಮತ್ತು 'ದಕ್ಷಿಣ ಭಾರತದ ಮ್ಯಾಂಚೆಸ್ಟರ್' ಕೊಯಮತ್ತೂರಿನ ಮೆಟ್ರೋ ರೈಲು ಯೋಜನೆಗಳನ್ನು ಕೇಂದ್ರ ಬಿಜೆಪಿ ಸರ್ಕಾರವು ಕ್ಷುಲ್ಲಕ ಕಾರಣಗಳ ಮೇಲೆ ನಿರಾಕರಿಸಿದೆ. ರಾಜ್ಯದಲ್ಲಿ ಪಕ್ಷಪಾತವಿಲ್ಲದೇ ಜನರಿಗೆ ಸೇವೆ ಸಲ್ಲಿಸಲು ಸರ್ಕಾರ ಅಸ್ತಿತ್ವದಲ್ಲಿದೆ. ಆದರೂ ಕೇಂದ್ರ ಬಿಜೆಪಿ ಸರ್ಕಾರ ತಮಿಳುನಾಡಿನ ಜನರ ಪ್ರಜಾಪ್ರಭುತ್ವದ ಆಯ್ಕೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಒಂದು ಕಾರಣ ಎಂದು ಪರಿಗಣಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸಣ್ಣ ಶ್ರೇಣಿಯ ನಗರಗಳು ಮೆಟ್ರೋಗಳನ್ನು ಪಡೆಯುವಾಗ ವಿರೋಧ ಪಕ್ಷಗಳು ಆಡಳಿತವಿರುವ ರಾಜ್ಯಗಳಲ್ಲಿ ವಂಚನೆ ಮಾಡುವ ಇಂತಹ ರಾಜಕೀಯ ಪದ್ದತಿಯನ್ನು ಮುಂದಿಡುವುದು ನಾಚಿಕೆಗೇಡಿನ ವಿಧಾನವಾಗಿದೆ. ಸ್ವಾಭಿಮಾನದ ಭೂಮಿಯಾದ ತಮಿಳುನಾಡು, ಒಕ್ಕೂಟ ತತ್ವಗಳ ಇಂತಹ ವಿರೂಪವನ್ನು ಎಂದಿಗೂ ಸಹಿಸುವುದಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೆ ಅವರು ಚೆನ್ನೈ ಮೆಟ್ರೋವನ್ನು ಸ್ಥಗಿತಗೊಳಿಸಲು ಪ್ರಯತ್ನಿಸಿದರು. ಮತ್ತು ನಾವು ಆ ದುರುದ್ದೇಶಪೂರಿತ ಪ್ರಯತ್ನಗಳನ್ನು ನಿವಾರಿಸಿ ಯೋಜನೆಯನ್ನು ಮುಂದುವರೆಸಿದೆವು. ಅದೇ ದೃಢನಿಶ್ಚಯದಿಂದ ಮಧುರೈ ಮತ್ತು ಕೊಯಮತ್ತೂರಿನ ಭವಿಷ್ಯದ ಬೆಳವಣಿಗೆಗೆ ಅಗತ್ಯವಿರುವ ಮೆಟ್ರೋ ರೈಲನ್ನು ನಾವು ಪಡೆದುಕೊಳ್ಳುತ್ತೇವೆ. ತಮಿಳುನಾಡು ಹೋರಾಡುತ್ತದೆ! ತಮಿಳುನಾಡು ಗೆಲ್ಲುತ್ತದೆ! ಎಂದು ಸ್ಟಾಲಿನ್ ಪೋಸ್ಟ್ ಮಾಡಿದ್ದಾರೆ.
ಕೊಯಮತ್ತೂರು ಮತ್ತು ಮಧುರೈ ಎರಡೂ ನಗರಗಳು 2017ರ ಮೆಟ್ರೋ ರೈಲು ನೀತಿಯಲ್ಲಿ ನಿಗದಿಪಡಿಸಿದ ಜನಸಂಖ್ಯೆ ಮತ್ತು ಪ್ರಯಾಣಿಕರ ಮಾನದಂಡಗಳನ್ನು ಪೂರೈಸುವುದಿಲ್ಲ. ಮತ್ತು ಡಿಪಿಆರ್ ಬೇಡಿಕೆಯನ್ನು ಅತಿಯಾಗಿ ತೋರಿಸುತ್ತವೆ ಎಂಬ ಕಾರಣ ನೀಡಿ ಮಂಗಳವಾರ(ನ. 18) ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ತಮಿಳುನಾಡಿನ ಪ್ರಸ್ತಾಪಗಳನ್ನು ತಿರಸ್ಕರಿಸಿದೆ (ಏಜೆನ್ಸೀಸ್).