ಚೆನ್ನೈ: ಕೆಲವೇ ತಿಂಗಳಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಆಡಳಿತರೂಢ ಡಿಎಂಕೆ ಸರ್ಕಾರ, ಪೊಂಗಲ್ ಹಬ್ಬಕ್ಕೆ ರಾಜ್ಯದ ಎಲ್ಲಾ ಪಡಿತರ ಕಾರ್ಡ್ ಹೊಂದಿರುವ ಮತ್ತು ನಿರಾಶ್ರಿತ ಕೇಂದ್ರಗಳಲ್ಲಿರುವ ಶ್ರೀಲಂಕಾದಿಂದ ವಲಸೆ ಬಂದು ನೆಲೆಸಿರುವ ತಮಿಳು ಕುಟುಂಬಗಳಿಗೆ ತಲಾ 3 ಸಾವಿರ ರೂ. ನಗದು ಉಡುಗೊರೆ ನೀಡುವುದಾಗಿ ಭಾನುವಾರ(ಜ. 04) ಘೋಷಣೆ ಮಾಡಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಎಂ.ಕೆ.ಸ್ಟಾಲಿನ್, ಈ ವರ್ಷದ ಪೊಂಗಲ್ ಹಬ್ಬದಂದು ಪ್ರತಿ ಮನೆಯಲ್ಲೂ ಸಂತೋಷ ತುಂಬಿ ತುಳುಕಲಿ. ನಮ್ಮ ದ್ರಾವಿಡ ಮಾದರಿ ಸರ್ಕಾರವು ನಿರಾಶ್ರಿತರ ಕೇಂದ್ರಗಳಲ್ಲಿರುವ ಶ್ರೀಲಂಕಾದ ತಮಿಳು ಕುಟುಂಬಗಳು ಸೇರಿದಂತೆ ರಾಜ್ಯದ 2 ಕೋಟಿ 22 ಲಕ್ಷ 91 ಸಾವಿರ 710 ಪಡಿತರ ಕುಟುಂಬಗಳಿಗ ಅಕ್ಕಿ, ಸಕ್ಕರೆ, ಕಬ್ಬು ಹಾಗೂ ಧೋತಿ ಮತ್ತು ಸೀರೆಯ ನಿಯಮಿತ ಉಡುಗೊರೆಗಳ ಜೊತೆಗೆ 3,000 ರೂ.ಗಳ ನಗದು ಉಡುಗೊರೆ ನೀಡಲಾಗುವುದು ಎಂದು ಹೇಳಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ, ರಾಜ್ಯದಲ್ಲಿ ಸುಮಾರು 2.23 ಕೋಟಿ ಅಕ್ಕಿ ಪಡಿತರ ಚೀಟಿದಾರರಿದ್ದು, ಸುಮಾರು 19,000 ಕುಟುಂಬಗಳು ಶ್ರೀಲಂಕಾದಿಂದ ನಿರಾಶ್ರಿತರಾಗಿ ಬಂದು ಪುನರ್ವಸತಿ ಶಿಬಿರಗಳಲ್ಲಿ ವಾಸಿಸುತ್ತಿವೆ. ಎಲ್ಲರಿಗೂ ಜ. 14ರಂದು ಪೊಂಗಲ್ ಹಬ್ಬದಿಂದ ನ್ಯಾಯಬೆಲೆ ಅಂಗಡಿಗಳಿಂದ ಉಡುಗೊರೆ ನೀಡಲಾಗುತ್ತಿದೆ ಎನ್ನಲಾಗಿದೆ.
1990 ರಿಂದಲೇ ಪೊಂಗಲ್ಗೆ ಹಣ ಉಡುಗೊರೆ
ಮೂಲತಃ ಪೊಂಗಲ್ ಹಬ್ಬದ ಸಮಯದಲ್ಲಿ ನಗದು ಉಡುಗೊರೆ ನೀಡುವ ಪದ್ಧತಿಯನ್ನು 1990ರಲ್ಲಿ ಆಗಿನ ಸಿಎಂ ಎಂ.ಕರುಣಾನಿಧಿ ಪ್ರಾರಂಭಿಸಿದ್ದರು. ಮೊದಲು ಅವರು ಪಿಂಚಣಿದಾರರಿಗೆ 100 ರೂ. ಘೋಷಣೆ ಮಾಡಿದ್ದರು. ಅದು 1998ರಲ್ಲಿ 150. ರೂಗೆ ಏರಿಸಲಾಗಿತ್ತು.
2014ರಲ್ಲಿ ಅಂದಿನ ಸಿಎಂ ಜೆ.ಜಯಲಲಿತಾ ಪೊಂಗಲ್ ಸಮಯದಲ್ಲಿ ಪಡಿತರ ಚೀಟಿದಾರರಿಗೆ ತಲಾ ಒಂದು ಕಿಲೋ ಅಕ್ಕಿ, ಸಕ್ಕರೆ ದಿನಸಿ ಸಾಮಗ್ರಿಗಳ ಜೊತೆಗೆ 100 ರೂ. ನೀಡುವುದನ್ನು ಜಾರಿಗೆ ತಂದಿದ್ದರು. 2019ರಲ್ಲಿ ನಗದು ಅಂಶವನ್ನು ರೂ. 100 ರಿಂದ ರೂ. 1,000ಕ್ಕೆ ಹೆಚ್ಚಿಸಲಾಯಿತು.
ಮುಂದೆ 2021ರಲ್ಲಿ ಚುನಾವಣೆ ಹಿನ್ನೆಲೆ ಎಐಎಡಿಎಂಕೆ ಸರ್ಕಾರ ಉಡುಗೊರೆಗಳೊಂದಿಗೆ 2,500 ರೂ.ಗಳನ್ನು ನೀಡಿತ್ತು. ಆದರೆ ಎಐಎಡಿಎಂಕೆ ಸೋತು ಡಿಎಂಕೆ ಅಧಿಕಾರಕ್ಕೆ ಬಂದಿತು. ಅಂದಿನಿಂದ 2023 ಮತ್ತು 2024ರಲ್ಲಿ ಉಡುಗೊರೆ ಜೊತೆ ಡಿಎಂಕೆ ಸರ್ಕಾರ 1000 ರೂ. ನಗದು ನೀಡಿತ್ತು. ಆದರೆ ಈ ವರ್ಷ ಕೆಲವೇ ತಿಂಗಳಲ್ಲಿ ನಡೆಯಲಿರುವ ಚುನಾವಣೆ ಮೇಲೆ ಕಣ್ಣಿಟ್ಟು 3 ಸಾವಿರ ರೂ. ನೀಡಿದೆ (ಏಜೆನ್ಸೀಸ್).