ಸಿಎಂ ಮಮತಾ ಬ್ಯಾನರ್ಜಿ ಮತ್ತು ಸಿಜೆಐ ಸೂರ್ಯಕಾಂತ್
ಕೋಲ್ಕತ್ತಾ: ಕೇಂದ್ರದ ತನಿಖಾ ಸಂಸ್ಥೆಗಳಿಂದ ಜನರನ್ನು ಗುರಿ ಮಾಡದಂತೆ ರಕ್ಷಿಸಿ ಎಂದು ವೇದಿಕೆಯಲ್ಲೇ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಸೇರಿ ಹಲವು ನ್ಯಾಯಾಧೀಶರಿಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ.
ಶನಿವಾರ ಕಲ್ಕತ್ತಾ ಹೈಕೋರ್ಟ್‌ನ ಜಲ್ಪೈಗುರಿ ಸರ್ಕ್ಯೂಟ್ ಪೀಠದ ಕಟ್ಟಡದ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಸಿಜೆಐ ಸೂರ್ಯಕಾಂತ್ ಮತ್ತು ವೇದಿಕೆಯಲ್ಲಿದ್ದ ಇತರ ನ್ಯಾಯಾಧೀಶರ ಕಡೆಗೆ ತಿರುಗಿ, ನನ್ನ ಮುಖ್ಯ ನ್ಯಾಯಮೂರ್ತಿ ಮತ್ತು ಎಲ್ಲಾ ನ್ಯಾಯಮೂರ್ತಿಗಳಿಗೆ ನನ್ನ ವಿನಂತಿ. ದಯವಿಟ್ಟು ದೇಶದ ಸಂವಿಧಾನ, ಪ್ರಜಾಪ್ರಭುತ್ವ, ನ್ಯಾಯಾಂಗ, ಇತಿಹಾಸ, ಭೌಗೋಳಿಕತೆ ಹಾಗೂ ಗಡಿಯನ್ನು ವಿಪತ್ತಿನಿಂದ ರಕ್ಷಿಸಿ ಎಂದಿದ್ದಾರೆ.
ದಯವಿಟ್ಟು ನೋಡಿ, ಈಗ ದೇಶದಲ್ಲಿ ಹಲವು ಮಾನಹಾನಿ ಮಾಡಲು ಹಲವು ಸಂಸ್ಥೆಗಳಿವೆ. ಮಾನಹಾನಿ ಮಾಡಲು ಉದ್ದೇಶಪೂರ್ವಕ ಪ್ರಯತ್ನಗಳು ನಡೆಯುತ್ತಿವೆ. ದಯವಿಟ್ಟು ಜನರನ್ನು ರಕ್ಷಿಸಿ. ನಾನು ಇದನ್ನು ನನಗಾಗಿ ಹೇಳುತ್ತಿಲ್ಲ. ಜನರನ್ನು ಉಳಿಸಿ, ನ್ಯಾಯಾಂಗ, ಸಂವಿಧಾನ ಹಾಗೂ ದೇಶವನ್ನು ಉಳಿಸಿ ಎಂದು ನಾನು ಹೇಳುತ್ತಿದ್ದೇನೆ. ನಾವು ನಿಮ್ಮ ವಶದಲ್ಲಿದ್ದೇವೆ. ವು ಸಂವಿಧಾನದ ರಕ್ಷಕರು. ನಿಮಗಿಂತ ಶ್ರೇಷ್ಠರು ಯಾರೂ ಇಲ್ಲ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ತೃಣಮೂಲ ಕಾಂಗ್ರೆಸ್‌ಗೆ ಸಹಾಯ ಮಾಡುತ್ತಿರುವ ಚುನಾವಣಾ ಸಲಹಾ ಸಂಸ್ಥೆ ಐ-ಪಿಎಸಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಈ ವೇಳೆ ಅಲ್ಲಿಗೆ ತಮ್ಮ ಪೊಲೀಸ್ ಪಡೆಯನ್ನು ತೆಗೆದುಕೊಂಡು ಹೋಗಿದ್ದ ಸಿಎಂ ಬ್ಯಾನರ್ಜಿ ಪಕ್ಷಕ್ಕೆ ಸಂಬಂಧಿಸಿದ ಚುನಾವಣಾ ತಂತ್ರದ ದಾಖಲೆಗಳು, ಅಭ್ಯರ್ಥಿಗಳನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಇಡಿ ಅದನ್ನು ಕದಿಯಲು ಬಂದಿದೆ ಎಂದು ಆರೋಪಿಸಿದ್ದರು.
ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಕರೆದು ಇಡಿ ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇನ್ನೂ ಇಡಿ ತಮ್ಮ ಕಾರ್ಯಾಚರಣೆಗೆ ಸಿಎಂ ಅಡ್ಡಿಪಡಿಸಿದ್ದಾರೆ ಎಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಹಾಗೆ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ಅನುಮತಿ ನೀಡಿ ಎಂದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ (ಏಜೆನ್ಸೀಸ್).