ರಾಹುಲ್ ಗಾಂಧಿ ಮತ್ತು ಸಿಎಂ ಹೇಮಂತ್ ಸೊರೆನ್
ರಾಂಚಿ: ಜಾರ್ಖಂಡ್‌ನ(Jharkhand) ಇಂಡಿಯಾ ಮೈತ್ರಿಕೂಟದಲ್ಲಿ ತಲೆದೂರಿದ್ದ ಸಮಸ್ಯೆ ಬಗೆಹರಿದಿದ್ದು, ರಾಜ್ಯದಿಂದ ಎರಡು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ನಿರೀಕ್ಷಿಸಿದಂತೆ ಜೆಎಂಎಂ ಮುಖ್ಯಸ್ಥ ಮತ್ತು ಸಿಎಂ ಹೇಮಂತ್ ಸೊರೆನ್ ಒಂದು ಸೀಟು ಬಿಟ್ಟುಕೊಟ್ಟಿದ್ದಾರೆ ಎಂದು ಭಾನುವಾರ(ಜೂ. 07) ವರದಿಯಾಗಿದೆ.
ರಾಜ್ಯಸಭಾ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಕುರಿತು ಚರ್ಚಿಸಲು ಸಿಎಂ ಹೇಮಂತ್ ಸೊರೆನ್ ನೇತೃತ್ವದಲ್ಲಿ ಶುಕ್ರವಾರ ನಡೆದಿದ್ದ ಸಭೆಯಲ್ಲಿ ಆಡಳಿತರೂಢ ಜೆಎಂಎಂ ಎರಡೂ ಸ್ಥಾನಗಳಲ್ಲಿ ಸ್ಪರ್ಧಿಸಲು ಮುಂದಾಗಿದೆ ಎನ್ನಲಾಗಿತ್ತು.
ಸಭೆ ಬಳಿಕ ಮಾತನಾಡಿದ್ದ ಸಚಿವ ಯೋಗೇಂದ್ರ ಮೆಹ್ತೋ, ಖಾಲಿ ಇರುವ ಎರಡೂ ಸ್ಥಾನಗಳಲ್ಲಿ ಜೆಎಂಎಂ ಸ್ಪರ್ಧಿಸಬೇಕು ಎಂದು ಸಭೆಯಲ್ಲಿ ಒಮ್ಮತ ಮೂಡಿ ಬಂದಿದೆ. ಆದಾಗ್ಯೂ, ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಸಿಎಂ ಹೇಮಂತ್ ಸೊರೆನ್ ಅವರಿಗೆ ನೀಡಲಾಗಿದೆ ಎಂದು ತಿಳಿಸಿದ್ದರು.
ಇಂದು ಜಾರ್ಖಂಡ್ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ವೀಕ್ಷಕರಾದ ಭೂಪೇಶ್ ಬಾಘೇಲ್ ಮತ್ತು ಅಜಯ್ ಶರ್ಮಾ ಬೆಳಿಗ್ಗೆ ಹೇಮಂತ್ ಸೊರೆನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆ ಸಮಾಲೋಚನೆ ನಡೆಸದೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ ಎಂದು ಸೋರೆನ್ ದೂರಿದ್ದಾರೆ. ಬಳಿಕ ಮೈತ್ರಿ ತತ್ವ ಪಾಲಿಸಿ ಒಂದು ಸ್ಥಾನ ಕೊಡಲು ಒಪ್ಪಿದರು ಎನ್ನಲಾಗಿದೆ.
ಕಾಂಗ್ರೆಸ್ ಪ್ರಣವ್ ಝಾ ಅವರನ್ನು ಕಣಕ್ಕಿಳಿಸಿದ್ರೆ, ಜೆಎಂಎಂ ಮಾಜಿ ಸಚಿವ ಬೈಜನಾಥ್ ರಾಮ್ ಅವರನ್ನು ಕಣಕ್ಕಿಳಿಸಿದೆ. ಒಂದು ರಾಜ್ಯಸಭಾ ಸ್ಥಾನವನ್ನು ಗೆಲ್ಲಲು 28 ಶಾಸಕರ ಬೆಂಬಲ ಅಗತ್ಯವಿದೆ. ವಿಧಾನಸಭೆಯಲ್ಲಿ ಜೆಎಂಎಂ 34, ಕಾಂಗ್ರೆಸ್ 16, ಆರ್‌ಜೆಡಿ 4 ಹಾಗೂ ಸಿಪಿಐಎಂಎಲ್ 2 ಶಾಸಕರಿದ್ದು, ಒಟ್ಟು 56 ಶಾಸಕರಿದ್ದಾರೆ. ಇಬ್ಬರು ಅಭ್ಯರ್ಥಿಗಳು ಗೆಲ್ಲಬಹುದು. ವಿವಿಧ ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18 ರಂದು ಚುನಾವಣೆ ನಡೆಯಲಿದೆ (ಏಜೆನ್ಸೀಸ್).