Mamata Banerjee | ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಕೋಲ್ಕತ್ತಾ: ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದ 152 ಸ್ಥಾನಗಳಿಗೆ ಗುರುವಾರ ಮತದಾನ ನಡೆಯಲಿದ್ದು, ಚುನಾವಣೆಗೆ ಕೇವಲ ಒಂದು ದಿನ ಬಾಕಿ ಇರುವಾಗ ರಾಜಕೀಯ ಕಣದಲ್ಲಿ ಭಾರೀ ಸಂಚಲನ ಮೂಡಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಸುಪ್ರೀಂ ಕೋರ್ಟ್ ನೀಡಿದ ತೀಕ್ಷ್ಣ ಛೀಮಾರಿ ಹಾಗೂ ಇಡಿ, ಟಿಎಂಸಿ ಅಭ್ಯರ್ಥಿಗಳಿಗೆ ಜಾರಿ ಮಾಡಿರುವ ಸಮನ್ಸ್ ಆಡಳಿತಾರೂಢ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಬುಧವಾರ ನಡೆದ ಮಹತ್ವದ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನಡೆಯುತ್ತಿರುವ ತನಿಖೆಯ ನಿರ್ಣಾಯಕ ಹಂತದಲ್ಲಿ ಮಮತಾ ಹಸ್ತಕ್ಷೇಪ ಮಾಡುತ್ತಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತರುತ್ತಿದೆ ಎಂದು ನ್ಯಾಯಪೀಠ ಕಿಡಿಕಾರಿದೆ.
ಮುಖ್ಯಮಂತ್ರಿಯೊಬ್ಬರು ತನಿಖೆಯ ಮಧ್ಯದಲ್ಲಿ ಮಧ್ಯಪ್ರವೇಶಿಸಿ ಇಡೀ ವ್ಯವಸ್ಥೆಯನ್ನೇ ಅಪಾಯಕ್ಕೆ ಸಿಲುಕಿಸುತ್ತಿರುವುದು ಕೇವಲ ಕೇಂದ್ರ ಮತ್ತು ರಾಜ್ಯದ ನಡುವಿನ ವಿವಾದವಲ್ಲ, ಇದು ಪ್ರಜಾಪ್ರಭುತ್ವದ ಚೌಕಟ್ಟಿಗೆ ನೇರ ಬೆದರಿಕೆಯಾಗಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಈ ದೇಶದಲ್ಲಿ ಮುಖ್ಯಮಂತ್ರಿಯೊಬ್ಬರು ಇಷ್ಟು ಬಹಿರಂಗವಾಗಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂದು ತಾವು ಎಂದಿಗೂ ಊಹಿಸಿರಲಿಲ್ಲ ಎಂಬ ಕಠಿಣ ಶಬ್ದಗಳನ್ನು ನ್ಯಾಯಾಲಯ ಬಳಸಿದೆ.
ಅಭ್ಯರ್ಥಿಗಳಿಗೆ ಇಡಿ ಕಂಟಕ
ಒಂದೆಡೆ ನ್ಯಾಯಾಂಗದ ಬಿಸಿ ತಟ್ಟುತ್ತಿದ್ದರೆ, ಇನ್ನೊಂದೆಡೆ ಕೇಂದ್ರ ತನಿಖಾ ಸಂಸ್ಥೆಗಳು ಟಿಎಂಸಿ ನಾಯಕರ ಸುತ್ತಾ ಸುರುಳಿ ಬಿಗಿದಿವೆ. ಬಿಧಾನ್ ನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸುಜಿತ್ ಬೋಸ್ ಮತ್ತು ಮಧ್ಯಮಗ್ರಾಮದ ಅಭ್ಯರ್ಥಿ ರತಿನ್ ಘೋಷ್ಗೆ ಇಡಿ ನಾಲ್ಕನೇ ಬಾರಿ ಸಮನ್ಸ್ ಜಾರಿ ಮಾಡಿದೆ. ಮೊದಲ ಹಂತದ ಮತದಾನ ಮುಗಿದ ಮರುದಿನವೇ ( ಏಪ್ರಿಲ್ 24) ವಿಚಾರಣೆಗೆ ಹಾಜರಾಗುವಂತೆ ಆದೇಶಿಸಲಾಗಿದೆ. ಇದು ಟಿಎಂಸಿ ಪಾಳಯದಲ್ಲಿ ಆತಂಕ ಮೂಡಿಸಿದ್ದು, ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಏನಿದು ಐ-ಪ್ಯಾಕ್ ಪ್ರಕರಣ..?
ಜನವರಿ 8 ರಂದು ಕೋಲ್ಕತ್ತಾದಲ್ಲಿ ಐ-ಪ್ಯಾಕ್ ಸಹ-ಸಂಸ್ಥಾಪಕ ಪ್ರತೀಕ್ ಜೈನ್ ನಿವಾಸದ ಮೇಲೆ ಇಡಿ ದಾಳಿ ನಡೆಸಿತ್ತು. ಉದ್ಯಮಿ ಅನುಪ್ ಮಜೀಗೆ ಸಂಬಂಧಿಸಿದ ಕಲ್ಲಿದ್ದಲು ಕಳ್ಳಸಾಗಣೆ ಮತ್ತು ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಈ ಕಾರ್ಯಾಚರಣೆ ನಡೆದಿತ್ತು. ದಾಳಿಯ ಸಮಯದಲ್ಲಿ ಮಮತಾ ಬ್ಯಾನರ್ಜಿ ಅಲ್ಲಿನ ಆವರಣಕ್ಕೆ ನುಗ್ಗಿ, ಇಡಿ ವಶಪಡಿಸಿಕೊಂಡಿದ್ದ ಪ್ರಮುಖ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಬಲವಂತವಾಗಿ ತೆಗೆದುಕೊಂಡು ಹೋಗಿ ಸಾಕ್ಷ್ಯ ನಾಶಪಡಿಸಿದ್ದಾರೆ ಎಂದು ಇಡಿ ಆರೋಪಿಸಿದೆ. ಇಡಿ ರಾಜಕೀಯ ದ್ವೇಷ ಸಾಧಿಸುತ್ತಿದೆ. ಆ ದಾಖಲೆಗಳು 2019ರ ಚುನಾವಣೆಯ ಟಿಎಂಸಿಯ ರಾಜಕೀಯ ಕೆಲಸಕ್ಕೆ ಸಂಬಂಧಿಸಿದ್ದವೇ ಹೊರತು ಹಗರಣಕ್ಕಲ್ಲ ಎಂದು ಮಮತಾ ವಾದಿಸಿದ್ದಾರೆ.
ಎರಡು ಹಂತದ ಮಹಾಸಮರ
ರಾಜ್ಯದಲ್ಲಿ ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ನಾಳೆ (ಗುರುವಾರ) ನಡೆಯಲಿರುವ ಮೊದಲ ಹಂತದಲ್ಲಿ 152 ಕ್ಷೇತ್ರಗಳ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಎರಡನೇ ಹಂತದಲ್ಲಿ 142 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಮೇ 4 ರಂದು ಇಡೀ ದೇಶ ಕಾತರದಿಂದ ಕಾಯುತ್ತಿರುವ ಫಲಿತಾಂಶ ಹೊರಬೀಳಲಿದೆ. ಬಂಗಾಳದ ಗದ್ದುಗೆಯ ಮೇಲೆ ಯಾರ ಅಧಿಪತ್ಯ ಸ್ಥಾಪನೆಯಾಗಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಗಲು ಈಗ ಕೆಲವೇ ದಿನಗಳು ಬಾಕಿ ಇವೆ(ಏಜೆನ್ಸೀಸ್).