Thackeray Brothers 
ದೇಶ

ಕೈ ಜೋಡಿಸಿದ ಠಾಕ್ರೆ ಬ್ರದರ್ಸ್​...ರಷ್ಯಾ-ಉಕ್ರೇನ್ ಯುದ್ಧಕ್ಕೆ ಹೋಲಿಸಬೇಡಿ ಎಂದು ಸಿಎಂ ಫಡ್ನವೀಸ್ ವ್ಯಂಗ್ಯ​ | Thackeray Brothers

ಮುಂಬೈ: ಸುಮಾರು ಎರಡು ದಶಕಗಳ ಬಳಿಕ ಠಾಕ್ರೆ ಸಹೋದರರು ಮತ್ತೊಮ್ಮೆ ಕೈ ಜೋಡಿಸಿದ್ದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಶಿವಸೇನೆ (ಯುಬಿಟಿ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮೈತ್ರಿ ಅನಿವಾರ್ಯವು ಆಗಿತ್ತು. ಇಬ್ಬರು ನಾಯಕರು ಅಧಿಕೃತವಾಗಿ ಪತ್ರಿಕಾಗೋಷ್ಟಿಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ್ದು, ಇತ್ತ ರಾಜ್ಯ ರಾಜಕಾರಣದಲ್ಲಿ ಹೊಸ ಕಂಪನವನ್ನು ಸೃಷ್ಟಿಸಿದೆ.

ಫಡ್ನವೀಸ್​ ಟೀಕೆ...

ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅಂತರರಾಷ್ಟ್ರೀಯ ರಾಜತಾಂತ್ರಿಕ ಪ್ರಗತಿಗೆ ಹೋಲಿಸಬಹುದಾದ ರೀತಿಯಲ್ಲಿ ಇದನ್ನು ಉತ್ಪ್ರೇಕ್ಷಿಸಲಾಗುತ್ತಿದೆ ಎಂದು ವ್ಯಂಗ್ಯವಾಡಿದರು. ರಷ್ಯಾ ಮತ್ತು ಉಕ್ರೇನ್ ಒಟ್ಟಿಗೆ ಬಂದಿವೆ. ಝೆಲೆನ್ಸ್ಕಿ ಮತ್ತು ಪುಟಿನ್ ಮಾತನಾಡುತ್ತಿದ್ದಾರೆ ಎಂಬ ರೀತಿಯಲ್ಲಿ ಇದಕ್ಕೆ ಪ್ರಚಾರ ನೀಡಲಾಗುತ್ತಿದೆ. ಎರಡೂ ಪಕ್ಷಗಳು ತುಷ್ಟೀಕರಣದ ರಾಜಕೀಯದಿಂದಾಗಿ ಸಾರ್ವಜನಿಕ ನಂಬಿಕೆಯನ್ನು ಕಳೆದುಕೊಂಡಿದ್ದು, ಈಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಈ ತಂತ್ರ ಹೆಣೆಯುತ್ತಿದ್ದಾರೆ ಎಂದು ಟೀಕಿಸಿದರು.

ಗೆಲುವಿನ ವಿಶ್ವಾಸದಲ್ಲಿ ಮಹಾಯುತಿ...

ಶಿವಸೇನೆ ಮತ್ತು ಎಂಎನ್​ಎಸ್​ ಮೈತ್ರಿ ಮುಂಬರುವ ಬಿಎಂಸಿ ಚುನಾವಣೆಯ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಮುಂಬೈನ ಮತದಾರರು ಮಹಾಯುತಿ ಸರ್ಕಾರದ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿದ್ದು, ಜನರು ನಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನೋಡಿದ್ದಾರೆ, ಮಹಾಯುತಿ ಮೈತ್ರಿಕೂಟ ಮುಂಬೈನಲ್ಲಿ ಗೆಲುವು ಸಾಧಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಠಾಕ್ರೆಗಳು ಮರಾಠಿ ಜನರು ಮತ್ತು ಮುಂಬೈನ ಏಕೈಕ ಪ್ರತಿನಿಧಿಗಳಲ್ಲ, ಮಹಾಯುತಿ ಸರ್ಕಾರದ ಕಾರ್ಯಕ್ಷಮತೆ, ಭವಿಷ್ಯದ ಬಗ್ಗೆ ಅದರ ದೃಷ್ಟಿಕೋನ ಮತ್ತು ಮರಾಠಿ ಜನರಿಗೆ ನಗರದಲ್ಲಿ ಮನೆಗಳು ಸಿಗುವಂತೆ ನೋಡಿಕೊಳ್ಳುವುದರ ಬಗ್ಗೆ ಇಲ್ಲಿನ ಜನರು ಗಮನಹರಿಸುತ್ತಾರೆ ಎಂದು ಹೇಳಿದರು.
ಠಾಕ್ರೆ ಬ್ರದರ್ಸ್ ಹೇಳಿದ್ದೇನು...?

ಕೈ ಜೋಡಿಸಿದ ಠಾಕ್ರೆ ಬ್ರದರ್ಸ್​...

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಉದ್ಧವ್, ನಾವಿಬ್ಬರು ಶಾಶ್ವತವಾಗಿ ಒಗ್ಗಟ್ಟಿನಿಂದ ಇರಲು ಒಗ್ಗೂಡಿದ್ದು, ಮರಾಠಿ ಜನರ ಅಭಿವೃದ್ದಿಗಾಗಿ ಇದು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಮಹಾರಾಷ್ಟ್ರಕ್ಕಾಗಿ ಹೋರಾಟ ನಡೆಸಿದ ತಮ್ಮ ಅಜ್ಜ ಪ್ರಬೋಧಂಕರ್ ಠಾಕ್ರೆ ಪರಂಪರೆಯನ್ನು ನೆನಪಿಸಿಕೊಂಡ ಉದ್ಧವ್​, ಮುಂಬೈ ರಾಜ್ಯದ ಭಾಗವಾದ ಬಳಿಕ, ಬಾಳಾಸಾಹೇಬ್ ಠಾಕ್ರೆ ಶಿವಸೇನೆಯನ್ನು ಸ್ಥಾಪಿಸಿದರು ಎಂದು ಹೇಳಿದರು. ಕೆಲವು ಶಕ್ತಿಗಳು ಮುಂಬೈಯನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದು, ಮುಂಬೈಯನ್ನು ಮರಾಠಿ ಜನರಿಂದ ಕಿತ್ತುಕೊಳ್ಳಲು ಯಾವುತ್ತಿಗೂ ಸಾಧ್ಯವಿಲ್ಲ ಎಂದರು. ಬಿಜೆಪಿಯ ಬಟೇಂಗೆ ತೋ ಕಟೇಂಗೆ ಘೋಷಣೆಯನ್ನು ಉಲ್ಲೇಖಿಸಿದ ಉದ್ಧವ್ ಠಾಕ್ರೆ, ನಾವೆಲ್ಲಾ ಒಗ್ಗಟ್ಟಿನಿಂದ ಇರಬೇಕೆಂದು ಕರೆ ನೀಡಿದರು, ಈಗ ನಾವು ಎಡವಿದರೆ ಅದು ವಿಭಜನೆಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿ ವಿರುದ್ಧ ರಾಜ್ ಠಾಕ್ರೆ ಟೀಕಾ ಪ್ರಹಾರ

ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸಿದರು. ಮಹಾರಾಷ್ಟ್ರ ಎನ್ನುವುದು ಎಲ್ಲಕ್ಕಿಂತ ದೊಡ್ಡದಾಗಿದ್ದು, ಆಂತರಿಕ ಸಂಘರ್ಷಗಳಿಂದ ರಾಜ್ಯ ಹಿಂದುಳಿಯಬಾರದು ಎಂದರು. ಮಕ್ಕಳ ಅಪಹರಣದಲ್ಲಿ ತೊಡಗಿರುವ ಗ್ಯಾಂಗ್‌ಗಳು ರಾಜ್ಯದಲ್ಲಿ ಮುಕ್ತವಾಗಿ ಸುತ್ತಾಡುತ್ತಿದ್ದರೆ, ಅಂತಹ ಗುಂಪುಗಳನ್ನು ಎರಡು ಪಕ್ಷಗಳು ಮುನ್ನಡೆಸುತ್ತಿವೆ ಎಂದು ಆರೋಪಿಸಿದರು. ರಾಜ್ಯವು ಬಹಳ ಸಮಯದಿಂದ ಈ ಕ್ಷಣಕ್ಕಾಗಿ ಕಾಯುತ್ತಿತ್ತು ಎಂದಿರುವ ರಾಜ್, ಶಿವಸೇನೆ ಯುಬಿಟಿ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ನಡುವಿನ ಮೈತ್ರಿ ಈಗ ರಚನೆಯಾಗಿದೆ ಎಂದು ಘೋಷಿಸಿದರು(ಏಜೆನ್ಸೀಸ್​).