Kerala Cabinet List: ಕೇರಳದ ನಿಯೋಜಿತ ಮುಖ್ಯಮಂತ್ರಿ ವಿ ಡಿ ಸತೀಶನ್ ಸೋಮವಾರ ಪ್ರಮಾಣವಚನ ಸ್ವೀಕಾರ ಸ್ವೀಕರಿಸಲಿದ್ದು, ಸಮಾರಂಭಕ್ಕೂ ಮುನ್ನ ತಮ್ಮ 21 ಸದಸ್ಯರ ಸಚಿವ ಸಂಪುಟವನ್ನು ಪ್ರಕಟಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸತೀಶನ್, ಸೋಮವಾರ ಬೆಳಗ್ಗೆ 10 ಗಂಟೆಗೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಆರು ದಶಕಗಳ ಬಳಿಕ ಇಡೀ ಯುಡಿಎಫ್ (UDF) ಸಂಪುಟ ಒಟ್ಟಿಗೆ ಪ್ರಮಾಣವಚನ ಸ್ವೀಕರಿಸುತ್ತಿದೆ ಎಂದು ತಿಳಿಸಿದರು. ಒಟ್ಟು 20 ಸಚಿವರ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಯಾಗಿ ತಮ್ಮನ್ನೂ ಒಳಗೊಂಡಂತೆ ಒಟ್ಟು 21 ಸಚಿವರು ಸೋಮವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.
ಮೈತ್ರಿಕೂಟದ ನಾಯಕರ ನಡುವಿನ ಸುದೀರ್ಘ ಚರ್ಚೆ ಹಾಗೂ ಕಾಂಗ್ರೆಸ್ ಹೈಕಮಾಂಡ್ ಅನುಮೋದನೆಯ ಬಳಿಕ ಸಚಿವ ಸಂಪುಟದ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದಿರುವ ಸತೀಶನ್, ಮಂತ್ರಿಗಳನ್ನು ಆಯ್ಕೆ ಮಾಡುವಾಗ ಸಾಮಾಜಿಕ ಮತ್ತು ಪ್ರಾದೇಶಿಕ ಸಮತೋಲನವನ್ನು ಪರಿಗಣಿಸಲಾಗಿದ್ದು, ಅರ್ಹತೆ ಇದ್ದರೂ ಅನೇಕ ಪ್ರಮುಖ ನಾಯಕರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.
ಪಟ್ಟಿಯ ಒಳಗಿರುವ ಮತ್ತು ಹೊರಗಿರುವ ಅನೇಕ ನಾಯಕರು ಸಚಿವ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಆದರೆ ಕಾಂಗ್ರೆಸ್‌ನಂತಹ ಪಕ್ಷವು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಾಮಾಜಿಕ ಸಮತೋಲನ, ಪ್ರಾದೇಶಿಕ ಪ್ರಾತಿನಿಧ್ಯ ಮತ್ತು ಹಲವಾರು ಇತರ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಹೇಳಿದರು.
ಸಂಪುಟದಲ್ಲಿರುವ ಕಾಂಗ್ರೆಸ್ ಸಚಿವರು
ವಿ.ಡಿ. ಸತೀಶನ್, ರಮೇಶ್ ಚೆನ್ನಿತ್ತಲ, ಕೆ. ಮುರಳೀಧರನ್, ಸನ್ನಿ ಜೋಸೆಫ್, ಬಿಂಧು ಕೃಷ್ಣ, ಎ. ಪಿ. ಅನಿಲ್ ಕುಮಾರ್, ಪಿ.ಸಿ. ವಿಷ್ಣುನಾಥ್, ಎಂ. ಲಿಜು, ರೋಜಿ ಎಂ. ಜಾನ್, ಟಿ. ಸಿದ್ದಿಕ್, ಒ.ಜೆ. ಜನೀಶ್ ಮತ್ತು ಕೆ.ಎ. ತುಳಸಿ.
ಐಯುಎಂಎಲ್ (IUML) ಸಚಿವರು
ಪಿ.ಕೆ. ಕುಂಞಾಲಿಕುಟ್ಟಿ, ಪಿ.ಕೆ. ಬಶೀರ್, ಎನ್. ಶಂಸುದ್ದೀನ್, ಕೆ.ಎಂ. ಶಾಜಿ ಮತ್ತು ವಿ.ಇ. ಅಬ್ದುಲ್ ಗಫೂರ್.
ಇತರ ಮಿತ್ರ ಪಕ್ಷಗಳ ಸಚಿವರು
ಕೇರಳ ಕಾಂಗ್ರೆಸ್‌ನಿಂದ ಮೊನ್ಸ್ ಜೋಸೆಫ್, ಆರ್‌ಎಸ್‌ಪಿಯಿಂದ ಶಿಬು ಬೇಬಿ ಜಾನ್, ಕೇರಳ ಕಾಂಗ್ರೆಸ್ (ಜಾಕಬ್)ನಿಂದ ಅನೂಪ್ ಜಾಕಬ್ ಮತ್ತು ಸಿಎಂಪಿಯಿಂದ ಸಿ.ಪಿ. ಜಾನ್.
ಹಿರಿಯ ಶಾಸಕ ತಿರುವಂಚೂರ್ ರಾಧಾಕೃಷ್ಣನ್ ವಿಧಾನಸಭೆಯ ಸ್ಪೀಕರ್ ಆಗಲಿದ್ದಾರೆ ಹಾಗೂ ಶಾನಿಮೋಲ್ ಉಸ್ಮಾನ್ ಡೆಪ್ಯುಟಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸತೀಶನ್ ಇದೇ ವೇಳೆ ಪ್ರಕಟಿಸಿದರು.
ಮೈತ್ರಿಕೂಟದ ಪಾಲುದಾರರ ನಡುವೆ ಖಾತೆ ಹಂಚಿಕೆ ಕುರಿತ ಚರ್ಚೆಗಳು ಬಹುತೇಕ ಪೂರ್ಣಗೊಂಡಿದ್ದು, ಸಣ್ಣಪುಟ್ಟ ತಿದ್ದುಪಡಿಗಳು ಮಾತ್ರ ಬಾಕಿ ಇವೆ. ಅಂತಿಮ ಪಟ್ಟಿಯನ್ನು ರಾಜ್ಯಪಾಲರಿಗೆ ಅಧಿಕೃತವಾಗಿ ಸಲ್ಲಿಸಲಾಗಿದ್ದು, ಅವರ ಅನುಮೋದನೆಯ ಬಳಿಕ ಅಧಿಕೃತ ಗೆಜೆಟ್ ಮೂಲಕ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಸೇರಿದಂತೆ ಅನೇಕ ಹಿರಿಯ ನಾಯಕರು ಭಾಗವಹಿಸಲಿದ್ದು, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಭೇಟಿಯ ಬಗ್ಗೆ ಇನ್ನೂ ಯಾವುದೇ ದೃಢೀಕರಣ ಸಿಕ್ಕಿಲ್ಲ ಎಂದು ಸತೀಶನ್ ತಿಳಿಸಿದ್ದಾರೆ(ಏಜೆನ್ಸೀಸ್).