ಅಮರಾವತಿ: ಆಂಧ್ರ ಪ್ರದೇಶದಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿನ ಗಲಾಟೆ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಟಿಡಿಪಿ ಮುಖ್ಯಸ್ಥ ಮತ್ತು ಸಿಎಂ ಚಂದ್ರಬಾಬು ನಾಯ್ಡು ಅವರು, ಸೇಡಿನ ರಾಜಕೀಯ ಅನುಸರಿಸಿ, ರಾಜ್ಯದ ಖ್ಯಾತಿಗೆ ಧಕ್ಕೆ ತರುತ್ತಿದ್ದಾರೆ ಎಂದು ವೈಎಸ್‌ಆರ್‌ಸಿಪಿ ಅಧ್ಯಕ್ಷ ವೈ. ಎಸ್. ಜಗನ್ ಮೋಹನ್ ರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ(ಅ. 24) ವಿಶಾಖಪಟ್ಣಣಂನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿ ಮತ್ತು ರಾಜಕೀಯ ನಾಯಕರಾಗಿ ಮಾತ್ರವಲ್ಲದೆ, ಮಗನಾಗಿ, ಸಹೋದರನಾಗಿ ಮತ್ತು ನಾಗರಿಕರಾಗಿಯೂ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಹಲವು ಜಿಲ್ಲೆಗಳಲ್ಲಿ ನಡೆದ ಗಲಾಟೆಯ ಘಟನೆಗಳನ್ನು ಉಲ್ಲೇಖಿಸಿರುವ ದಿ ಸೇಮ್ ವಯಲೆನ್ಸ್, ದಿ ಸೇಮ್ ಲೈಸ್, ದಿ ಸೇಮ್ ಅನಾರ್ಕಿ ಎಂಬ ಶೀರ್ಷಿಕೆಯ ಕಿರುಪುಸ್ತಕವನ್ನು ಬಿಡುಗಡೆ ಮಾಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಅಡ್ಡಿಪಡಿಸಲು ವೈಎಸ್‌ಆರ್‌ಸಿಪಿ ಹಿಂಸಾಚಾರ ಮತ್ತು ಬೆದರಿಕೆಗೆ ಇಳಿದಿದೆ. ಮತ್ತು ತಪ್ಪು ಮಾಹಿತಿ ಹರಡಿ ರಾಜ್ಯದ ಖ್ಯಾತಿಗೆ ಹಾನಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಜಗನ್ ರಾಜಕೀಯದಲ್ಲಿ ಹಿಟ್-ಅಂಡ್-ರನ್ ವಿಧಾನವನ್ನು ಬಳಸುತ್ತಿದ್ದಾರೆ. ಆರೋಪಗಳನ್ನು ಮಾಡುತ್ತಾ ಮತ್ತು ನ್ಯಾಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸುತ್ತಾ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಹಿಂಸೆ ಮತ್ತು ಪ್ರತಿಹಿಂಸೆ ನಮ್ಮ ನೀತಿಯಲ್ಲ, ಆದರೆ ನಾವು ಭಯದಿಂದ ಹಿಂದೆ ಸರಿಯುವುದಿಲ್ಲ. ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆಯನ್ನು ಎತ್ತಿಹಿಡಿಯುತ್ತದೆ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ಗೌರವಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಆಂಧ್ರಪ್ರದೇಶದ ಬಹುತೇಕ ಜಿಲ್ಲೆಗಳಲ್ಲಿ ಪ್ರಸ್ತುತ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಆಡಳಿತಾರೂಢ ಟಿಡಿಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಮತ್ತು ವೈಎಸ್‌ಆರ್‌ಸಿಪಿ ನಡುವೆ ರಾಜಕೀಯ ಘರ್ಷಣೆಗೆ ಕಾರಣವಾಗಿದೆ. ಹಲವಾರು ಕಡೆಗಳಲ್ಲಿ ಅಭ್ಯರ್ಥಿಗಳ ನಾಮಪತ್ರ ಕಸಿದುಕೊಳ್ಳುವುದು, ಹಲ್ಲೆ ಮಾಡುವಂತಹ ಘಟನೆಗಳು ಜರುಗಿವೆ (ಏಜೆನ್ಸೀಸ್).